ಕಲಬುರಗಿಯಲ್ಲಿ ಹಾಡಹಗಲೇ ವಕೀಲನ ಹತ್ಯೆ

ಕಲಬುರಗಿ, ಡಿ. ೭: ಕಲಬುರಗಿ ನಗರದಲ್ಲಿ ಗುರುವಾರ ನ್ಯಾಯಾಲಯಕ್ಕೆ ತೆರಳುತ್ತಿದ್ದ ವಕೀಲರೊಬ್ಬರನ್ನು ಹಾಡಹಗಲೇ ದುಷ್ಕರ್ಮಿಗಳಿಬ್ಬರು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಲಬುರಗಿ ನಗರದ ಸಾಯಿ ಮಂದಿರ್ ಬಳಿ ಈ ಭೀಕರ ಕೊಲೆ ನಡೆದಿದೆ. ಕೊಲೆಯಾದ ವಕೀಲರನ್ನು ಉದನೂರ ಗ್ರಾಮದ ನಿವಾಸಿ ಜಿಲ್ಲಾ ನ್ಯಾಯಾಲಯದ ವಕೀಲ ಈರಣ್ಣ ಗೌಡ ಪಾಟೀಲ್ (೪೦) ಎಂದು ಗುರುತಿಸಲಾಗಿದೆ. ಹಂತಕರು ಮಚ್ಚಿನೊಂದಿಗೆ ವಕೀಲನನ್ನು ಬೆನ್ನಟ್ಟಿ ಬರುತ್ತಿದಾಗ ಅವರಿಂದ ತಪ್ಪಿಸಿಕೊಳ್ಳಲು ವಕೀಲ ಈರಣ್ಣ ಗೌಡ ಪಾಟೀಲ್ ಅವರು ಶ್ರೀ ಗಂಗಾ ವಿಹಾರ್ ಅಪಾರ್ಟ್ಮೆಂಟ್ ಒಳಗೆ ಓಡಿದ್ದಾರೆ. ಅಲ್ಲಿ ತಮ್ಮ ರಕ್ಷಣೆಗಾಗಿ ರಿವಾಲ್ವರ್ ತೆಗೆಯುತ್ತಿದ್ದ ವೇಳೆ ಹಂತಕರು ಮಚ್ಚು ಬೀಸಿ ಹಲ್ಲೆ ಮಾಡಿದ್ದಾರೆ. ಆ ಬಳಿಕ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ. ಜಮೀನು ವಿವಾದಕ್ಕೆ ಸಂಬAಧಿಸಿದAತೆ ಹಳೆ ದ್ವೇಷವೇ ಕೊಲೆಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಸಂಬAಧ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಹುಸಿ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದ ಮಹಿಳೆ ವಿರುದ್ಧ ಎಫ್.ಐ.ಆರ್.

ಬೆಂಗಳೂರು, ಡಿ. ೭: ಪತಿ ಮೇಲೆ ಸೇಡು ತೀರಿಸಿಕೊಳ್ಳುವ ಸಲುವಾಗಿ ಆತನ ಮೊಬೈಲ್ ಸಂಖ್ಯೆಯಿAದ ಪೊಲೀಸ್ ಅಧಿಕಾರಿಗೆ ಹುಸಿ ಬೆದರಿಕೆ ಸಂದೇಶ ಕಳುಹಿಸಿದ ೩೨ ವರ್ಷದ ಮಹಿಳೆಯ ವಿರುದ್ಧ ನಗರ ಪೊಲೀಸರು ಗುರುವಾರ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರ ಪ್ರಕಾರ, ಆರೋಪಿ ಮಹಿಳೆ ವಿದ್ಯಾರಾಣಿ ಆನ್‌ಲೈನ್‌ನಲ್ಲಿ ಪರಪುರುಷನ ಜೊತೆ ಸ್ನೇಹ ಬೆಳೆಸಿರುವುದನ್ನು ಕಂಡ ಪತಿ ಕಿರಣ್ ಆಕೆಯ ಮೊಬೈನ್ ಅನ್ನು ಹೊಡೆದು ಹಾಕಿದ್ದರು. ನಂತರ ಮತ್ತೊಂದು ಮೊಬೈಲ್ ಖರೀದಿಸಿದ್ದ ವಿದ್ಯಾರಾಣಿ ತಾನು ಸಿಕ್ಕಿಬಿದ್ದಿದ್ದಾಗಿ ತನ್ನ ಬಿಹಾರ ಮೂಲದ ಸ್ನೇಹಿತ ರಾಮಪ್ರಸಾದ್ ಗೆ ತಿಳಿಸಿದ್ದಾಳೆ. ಇವರಿಬ್ಬರೂ ಸೇರಿ ಕಿರಣ್‌ನನ್ನು ಸಿಲುಕಿಸುವ ಸಂಚು ರೂಪಿಸಿದ್ದಾರೆ. ನಂತರ ಮಹಿಳೆ ಕಿರಣ್ ಮೊಬೈಲ್ ನಿಂದ ಡಿಸೆಂಬರ್ ೩ರಂದು ಹಿರಿಯ ಪೊಲೀಸ್ ಅಧಿಕಾರಿಗೆ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದು ಅದರಲ್ಲಿ ಸರಣಿ ಆರ್‌ಡಿಎಕ್ಸ್ ಬಾಂಬ್ ಸ್ಫೋಟ ನಡೆಯಲಿದೆ ಎಂದು ಹೇಳಿದ್ದಳು. ಸಂದೇಶ ರವಾನೆಯಾದ ನಂತರ ವಿದ್ಯಾರಾಣಿ ಮೊಬೈಲ್‌ನಲ್ಲಿದ್ದ ಸಂದೇಶವನ್ನು ಡಿಲೀಟ್ ಮಾಡಿದ್ದಾಳೆ. ಮೊಬೈಲ್ ಸಂಖ್ಯೆ ಪರಿಶೀಲಿಸಿದ ಪೊಲೀಸರು ನಂತರ ಕಿರಣ್‌ನನ್ನು ವಿಚಾರಣೆಗೆ ಒಳಪಡಿಸಿದ್ದರು. ನಂತರ ಅನುಮಾನಗೊಂಡು ವಿದ್ಯಾರಾಣಿಯನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಹೊರಗೆ ಬಂದಿದೆ. ಗಂಡ ತನ್ನ ಮೊಬೈಲ್ ಅನ್ನು ಒಡೆದಿದ್ದಕ್ಕಾಗಿ ಸೇಡು ತೀರಿಸಿಕೊಳ್ಳಲು ಹೀಗೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಬೆದರಿಕೆ ಸಂದೇಶವನ್ನು ಕಳುಹಿಸಿದ ಆರೋಪದ ಮೇಲೆ ವಿದ್ಯಾರಾಣಿ ಮತ್ತು ಆಕೆಯ ಸಹಚರ ರಾಮಪ್ರಸಾದ್ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕಾಶ್ಮೀರ-ಪಿಒಕೆ ಸಮಸ್ಯೆಗಳಿಗೆ ನೆಹರೂ ಪ್ರಮಾದಗಳೇ ಕಾರಣ: ಅಮಿತ್ ಶಾ

ನವದೆಹಲಿ, ಡಿ. ೭: ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಅವರ "ಎರಡು ಪ್ರಮುಖ ಪ್ರಮಾದಗಳು" - ಇಡೀ ಕಾಶ್ಮೀರ ಜನರು ಕಷ್ಟವನ್ನು ಅನುಭವಿಸುವಂತೆ ಮಾಡಿತು. ಇಡೀ ಕಾಶ್ಮೀರವನ್ನು ಗೆಲ್ಲದೆ ಕದನ ವಿರಾಮ ಘೋಷಿಸಿದ್ದು ಮತ್ತು ಸಮಸ್ಯೆಯನ್ನು ವಿಶ್ವಸಂಸ್ಥೆಗೆ ಕೊಂಡೊಯ್ದದ್ದು ಆ ಎರಡು ಪ್ರಮಾದಗಳು ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಲೋಕಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಮೀಸಲಾತಿ (ತಿದ್ದುಪಡಿ) ಮಸೂದೆ ಮತ್ತು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಮಸೂದೆಯ ಮೇಲಿನ ಚರ್ಚೆಗೆ ಉತ್ತರಿಸಿದ ಗೃಹ ಸಚಿವ ಅಮಿತ್ ಶಾ, ನಮ್ಮ ಸೇನೆ ಗೆದ್ದಾಗ ಪಂಜಾಬ್ ಪ್ರದೇಶವನ್ನು ತಲುಪಿದ ಕೂಡಲೇ ಕದನ ವಿರಾಮ ಘೋಷಿಸಲಾಯಿತು, ಆಗ ಪಾಕ್ ಆಕ್ರಮಿತ ಕಾಶ್ಮೀರ ಹುಟ್ಟಿಕೊಂಡಿತು. ಮೂರು ದಿನಗಳ ನಂತರ ಕದನ ವಿರಾಮ ಘೋಷಿಸುತ್ತಿದ್ದರೆ, ಪಿಒಕೆ ಭಾರತದ ಭಾಗವಾಗುತ್ತಿತ್ತು ಎಂದರು. ಇಡೀ ಕಾಶ್ಮೀರವನ್ನು ಗೆಲ್ಲದೆ ಕದನ ವಿರಾಮ ಘೋಷಿಸಿದ್ದು ಒಂದು ಪ್ರಮಾದವಾಗಿದ್ದರೆ, ಇನ್ನೊಂದು ಸಮಸ್ಯೆಯನ್ನು ವಿಶ್ವಸಂಸ್ಥೆ ಬಳಿ ತರಾತುರಿಯಲ್ಲಿ ತೆಗೆದುಕೊಂಡು ಹೋಗಿದ್ದು ಎಂದು ಗೃಹ ಸಚಿವರು ಸದನದಲ್ಲಿ ಹೇಳಿದರು. ಇದನ್ನು ವಿರೋಧಿಸಿ ವಿರೋಧ ಪಕ್ಷದವರು ಕಲಾಪ ಬಹಿಷ್ಕರಿಸಿ ಹೊರನಡೆದರು.