ಕಣಿವೆ, ಡಿ. ೭: ದೇಶಕ್ಕೆ ಸ್ವಾತಂತ್ರö್ಯ ಬಂದು ಏಳು ದಶಕಗಳು ಕಳೆದರೂ ಕೂಡ ಇದುವರೆಗೂ ವಿದ್ಯುತ್ ಬೆಳಕು ಕಾಣದ ಮಂದಿ...
ದೇಶ ವಾಸಿಗಳಿಗೆಲ್ಲರಿಗೂ ಕಡ್ಡಾಯ ಸೂರು ಎಂದು ಸರ್ಕಾರಗಳು ಅತ್ತ ಬೊಬ್ಬೆ ಹೊಡೆಯುತ್ತಿರುವಾಗ ಇತ್ತ ಸೂರಿಲ್ಲದೇ ಪ್ಲಾಸ್ಟಿಕ್ ಮುಚ್ಚಿಕೊಂಡು ವಾಸಿಸುತ್ತಿರುವ ನಿವಾಸಿಗಳು...
ಅತ್ತ ರಾಜ್ಯ ಸರ್ಕಾರದಿಂದ ಸ್ವಚ್ಛ ಗ್ರಾಮ ಪಂಚಾಯಿತಿ ಎಂಬ ಪ್ರಶಸ್ತಿಯನ್ನು ಪಡೆದಿರುವ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಆಡಳಿತವೇ ನಾಚುವಂತಹ ರೀತಿಯಲ್ಲಿ ಶೌಚಾಲಯ, ಕುಡಿಯುವ ನೀರು, ಚರಂಡಿ ವ್ಯವಸ್ಥೆ ಏನೇನು ಇಲ್ಲದೇ ಆದಿ ಮಾನವರಂತೆ ಬದುಕು ಸವೆಸುತ್ತಿರುವ ಮಂದಿ...
ಇದು ಕುಶಾಲನಗರ ತಾಲೂಕಿನ ಆನೆಕಾಡು ಮೀಸಲು ಅರಣ್ಯದಂಚಿನ ಚಿಕ್ಕಬೆಟ್ಟಗೇರಿ ಬಳಿಯ ಕೆರೆ ಮೂಲೆಯಲ್ಲಿ ವಾಸವಿರುವ ಅಡವಿ ದೇವಿಯ ಮಕ್ಕಳು ಜೇನು ಕುರುಬ ಜನಾಂಗಕ್ಕೆ ಸೇರಿದ ಗಿರಿಜನರು ಅನುಭವಿಸುತ್ತಿರುವ ನಿತ್ಯದ ನರಕ ಸದೃಶ ಜೀವನ.
ಗಿರಿಜನರ ಕಲ್ಯಾಣಕ್ಕಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪ್ರತಿ ವರ್ಷ ಬಜೆಟ್ನಲ್ಲಿ ಮೀಸಲಿಡುವ ಅನುದಾನ ಏನಾಗುತ್ತಿದೆಯೋ...? ಎಲ್ಲಿಗೆ ಹೋಗುತ್ತಿದೆಯೋ...? ಆ ವನದೇವತೆಯೇ ಹೇಳಬೇಕು.
ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ನಿತ್ಯವೂ ಒಂದರ ಮೇಲೊಂದರAತೆ ಕಾನೂನು ತೊಡಕುಗಳ ನೆಪ ಒಡ್ಡುತ್ತಾ ಸಮಾಜದ ಮುಖ್ಯ ವಾಹಿನಿಯಿಂದ ದೂರವೇ ಉಳಿದಿರುವ ಈ ಅಮಾಯಕ ಗಿರಿಜನರನ್ನು ನಡೆಸಿಕೊಳ್ಳುತ್ತಿರುವ ರೀತಿ ಇದೆಯಲ್ಲಾ ಅದು ನೋಡುಗರಿಗೆ ಒಂಥರ ಭೀತಿ ಹುಟ್ಟಿಸುತ್ತಿದೆ.
ಕೆರೆ ಮೂಲೆ ಹಾಡಿಯಲ್ಲಿ ೧೨ ಗಿರಿಜನ ಕುಟುಂಬಗಳಿದ್ದು ಒಂದೊAದು ಕುಟುಂಬಗಳು ಪ್ಲಾಸ್ಟಿಕ್ ಹೊದಿಕೆಗಳಲ್ಲಿ ಕನಿಷ್ಟ ೬ ಮಂದಿಯಿAದ ೯ ಮಂದಿಯ ತನಕವೂ ವಾಸವಿದ್ದಾರೆ.ಅಂದರೆ ವಯೋವೃದ್ಧ ಅಜ್ಜ-ಅಜ್ಜಿ, ಅವರ ಮಗ ಹಾಗೂ ಸೊಸೆ, ಅಳಿಯ ಹಾಗೂ ಮಗಳು, ಮಕ್ಕಳು, ಮರಿಮಕ್ಕಳು ಹೀಗೆ ಪ್ಲಾಸ್ಟಿಕ್ ಹೊದಿಕೆಯ ಕುಟುಂಬಗಳಲ್ಲಿ ಹತ್ತಾರು ಮಂದಿ ವಾಸ ಮಾಡುತ್ತಿದ್ದಾರೆ.
ರೇಷನ್ ಕಾರ್ಡು... ಆಧಾರ್ ಕಾರ್ಡುಗಳಿಲ್ಲ
ಇಲ್ಲಿ ಪ್ಲಾಸ್ಟಿಕ್ ಹೊದಿಕೆಗಳಲ್ಲಿ ವಾಸವಿರುವ ೧೨ ಕುಟುಂಬಗಳಲ್ಲಿ ಯಾರಿಗೂ ಆಧಾರ್ ಕಾರ್ಡ್ಗಳು, ಮತದಾರರ ಚೀಟಿಗಳು, ಪಡಿತರ ಚೀಟಿಗಳಾಗಲಿ ಇಲ್ಲ.
ನಮಗೆ ಸರಿಯಾದ ಪಡಿತರವೂ ಸಿಗ್ತಿಲ್ಲಾ ಎಂದು ಇಲ್ಲಿನ ವಾಸಿಗಳಾದ ಗಂಗೆ, ಕರಿಯ, ಮುತ್ತುಮಣಿ, ಕೃಷ್ಣ, ಗಣೇಶ, ಜಾನಕಿ, ಸುರೇಶ ಮೊದಲಾದವರು ಅಳಲು ತೋಡಿಕೊಂಡಿದ್ದಾರೆ.
ಶೌಚಕ್ಕೆ ಕಾಡು
ಇಲ್ಲಿನ ಗಿರಿಜನ ನಿವಾಸಿಗಳಿಗೆ ವಾಸಿಸುವ ಸೂರುಗಳಿಗೆ ಗತಿಯಿಲ್ಲ ಅಂದ ಮೇಲೆ ಶೌಚಾಲಯದ ಮಾತೆಲ್ಲಿ...? ಇಲ್ಲಿನ ಮಹಿಳೆಯರು, ಮಕ್ಕಳಾದಿಯಾಗಿ ಎಲ್ಲರೂ ಕೂಡ ಬಹಿರ್ದೆಸೆಗೆ ಕಾಡನ್ನೇ ಅವಲಂಬಿಸಿದ್ದಾರೆ.
ಕಾಡಾನೆ ಕಾಟ
ಆನೆಕಾಡು ಮೀಸಲು ಅರಣ್ಯದಂಚಿನಲ್ಲಿನ ಈ ಮಂದಿಗೆ ಕಾಡಾನೆಗಳ ಸಂಚಲನ ಯಾವುದೇ ಭೀತಿ ಮೂಡಿಸಿಲ್ಲ.
ಕಾಡಾನೆಗಳು ಅಲ್ಲೆಲ್ಲೋ ಬಿದಿರು ಮುರಿದು ಸದ್ದು ಮಾಡುತ್ತಿದ್ದರೂ ಕೂಡ ನಿರ್ಭಯವಾಗಿಯೇ ಶೌಚ ಮುಗಿಸಿಯೇ ಮರಳುವುದಾಗಿ ಇಲ್ಲಿನ ವಾಸಿ ದಿನೇಶ ಹಾಗೂ ಕರಿಯ ಹೇಳುತ್ತಾರೆ.
ನಿತ್ಯವೂ ಕೂಲಿ ಕೆಲಸ
ಇಲ್ಲಿ ವಾಸವಿರುವ ಮುಗ್ದ ಗಿರಿಜನರಿಗೆ ವಾಸಿಸಲು ಸೂಕ್ತವಾದ ನಿವೇಶನ ಹಾಗೂ ಸೂರುಗಳೂ ಇಲ್ಲದಿರುವಾಗ ಇನ್ನು ಕೃಷಿ ಭೂಮಿಯ ಮಾತು ಕನಸು.
ಹಾಗಾಗಿ ನಿತ್ಯವೂ ಸುತ್ತಲಿನ ಖಾಸಗಿ ತೋಟಗಳಲ್ಲಿ ಕೂಲಿ ಮಾಡಿ ಬದುಕು ಸಾಗಿಸುವ ಈ ಮಂದಿ ಶೌಚಾಲಯ ಹೊಂದದಿದ್ದರೂ ಕೂಡ ಮೊಬೈಲ್ ಹೊಂದಿದ್ದು ತಮ್ಮ ಪ್ಲಾಸ್ಟಿಕ್ ಸೂರುಗಳಲ್ಲಿ ವಿದ್ಯುತ್ ಸಂಪರ್ಕ ಇಲ್ಲದ ಕಾರಣ ತೋಟ ಮಾಲೀಕರ ಮನೆಗಳಲ್ಲಿ ಮೊಬೈಲ್ ಚಾರ್ಜ್ ಮಾಡಿಕೊಳ್ಳುವುದಾಗಿ ಸುರೇಶ್ ಹೇಳುತ್ತಾರೆ.
ಬೀದಿ ದೀಪವೂ ಇಲ್ಲ
ಈ ಅಡವಿ ದೇವಿಯ ಮಕ್ಕಳು ವಾಸವಿರುವ ಕೆರೆಮೂಲೆ ಹಾಡಿಯಲ್ಲಿ ರಸ್ತೆ ಬದಿ ವಿದ್ಯುತ್ ಕಂಬವಿದೆಯಾದರೂ ವಿದ್ಯುತ್ ದೀಪ ಹಾಳಾಗಿ ಹಲವು ದಿನಗಳು ಕಳೆದಿದ್ದರೂ ಕೂಡ ಇದುವರೆಗೂ ಸರಿಪಡಿಸಿಲ್ಲ. ಮೊದಲೇ ಕಾಡಾನೆಗಳು ಸಂಚರಿಸುವ ಇಲ್ಲಿ ಕೂಡಲೇ ಬೀದಿ ದೀಪ ಅಳವಡಿಸಬೇಕೆಂದು ನಿವಾಸಿಗಳು ಒತ್ತಾಯಿಸಿದ್ದಾರೆ.
ಕಿತ್ತು ನಿಂತ ನೀರಿನ ಪೈಪುಗಳು
ಈ ಮಂದಿ ವಾಸವಿರುವ ಕಡೆ ಸ್ಥಳೀಯ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಯವರು ಜಲಜೀವನ್ ಯೋಜನೆಯ ಮನೆ ಮನೆಗೆ ನೀರಿನ ಪೈಪ್ ಅಳವಡಿಸಿದ್ದಾರೆ. ಆದರೆ ನೀರೇ ಬರುತ್ತಿಲ್ಲ ಎಂದು ದೂರಿದ್ದಾರೆ.
ಹೆಸರಿಗಷ್ಟೆ ಜಲಜೀವನ್ ಯೋಜನೆಯ ಕುಡಿಯುವ ನೀರು ಎಂಬ ಯೂನಿಟ್ ಅಳವಡಿಸಲಾಗಿದೆ.
ಇನ್ನಾದರೂ ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತವಾಗಲೀ, ಗಿರಿಜನ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಾಗಲೀ ಗಮನ ಹರಿಸಿ ಇಲ್ಲಿನ ಮಂದಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಬೇಕಾಗಿದೆ.
- ಕೆ.ಎಸ್. ಮೂರ್ತಿ, ಕಣಿವೆ.