ಗೋಣಿಕೊಪ್ಪಲು, ಡಿ. ೬ : ಅರಣ್ಯದಲ್ಲೇ ಅಡ್ಡಾಡುತ್ತಿದ್ದ ಕಾಡಾನೆಯೊಂದು ಆಹಾರ ಹುಡುಕಿಕೊಂಡು ಅರಣ್ಯದಿಂದ ಜನವಸತಿ ಪ್ರದೇಶದತ್ತ ಆಗಮಿಸಿ ಬೆಲ್ಲದ ವಾಸನೆ ಗ್ರಹಿಸಿ ಅಂಗನವಾಡಿಗೆ ತೆರಳಿ ಅಲ್ಲಿರುವ ಬೆಲ್ಲವನ್ನು ತಿನ್ನಲಾಗದೆ ವಾಪಸ್ಸಾದ ಘಟನೆ ದ.ಕೊಡಗಿನ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳಂಗೇರಿ ಹಾಡಿಯ ಅಂಗನವಾಡಿ ಕೇಂದ್ರದಲ್ಲಿ ನಡೆದಿದೆ.

ನಾಗರಹೊಳೆ ರಾಷ್ಟಿçÃಯ ಉದ್ಯಾನವನಕ್ಕೆ ಹೊಂದಿಕೊAಡಿರುವ ದ.ಕೊಡಗಿನ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳಂಗೇರಿ ಅಂಗನವಾಡಿ ಕೇಂದ್ರಕ್ಕೆ ಸುತ್ತಮುತ್ತಲಿನ ಗಿರಿಜನ ಮಕ್ಕಳು ಆಗಮಿಸುತ್ತಾರೆ. ಕಳೆದ ಎರಡು ದಿನಗಳ ಹಿಂದೆ ತಡ ರಾತ್ರಿಯಲ್ಲಿ ಆಗಮಿಸಿದ್ದ ಒಂಟಿ ಸಲಗವೊಂದು ಅಂಗನವಾಡಿ ಕೇಂದ್ರದಲ್ಲಿರುವ ಬೆಲ್ಲದ ವಾಸನೆ ಗ್ರಹಿಸಿ ಅದನ್ನು ತಿನ್ನುವ ಸಲುವಾಗಿ ಅಂಗನವಾಡಿ ಕಟ್ಟಡದ ಬಾಗಿಲನ್ನು ಹಾಗೂ ಗೋಡೆಯನ್ನು ಬೀಳಿಸಿದೆ. ಆದರೆ ಬೆಲ್ಲ ಡಬ್ಬದಲ್ಲಿದ್ದ ಕಾರಣ ತಿನ್ನಲಾಗದೆ ನಿರಾಸೆಯಿಂದ ಕೇಂದ್ರದಲ್ಲಿದ್ದ ಇತರ ಸಾಮಗ್ರಿಗಳನ್ನು ಎಳೆದು ಚೆಲ್ಲಾಪಿಲ್ಲಿಯಾಗಿಸಿ ಅಲ್ಲಿಂದ ತೆರಳಿದೆ.

ಮುಂಜಾನೆ ವೇಳೆ ಅಂಗನವಾಡಿ ಕಾರ್ಯಕರ್ತೆ ಆಗಮಿಸಿದ ವೇಳೆ ಕೇಂದ್ರದ ಬಾಗಿಲು ಮುರಿದು ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ನಿಟ್ಟೂರು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಚೆಕ್ಕೇರ ಸೂರ್ಯ ಅಯ್ಯಪ್ಪ ಅವರಿಗೆ ವಿಷಯವನ್ನು ತಿಳಿಸಿದ್ದಾರೆ. ಸ್ಥಳಕ್ಕೆ ತೆರಳಿದ ಸೂರ್ಯ ಅಯ್ಯಪ್ಪ ಅಂಗನವಾಡಿಯನ್ನು ಪರಿಶೀಲನೆ ನಡೆಸಿದರು.

ಕೇಂದ್ರದ ಬಾಗಿಲು ಹಾಗೂ ಗೋಡೆಗೆ ಭಾಗಶಃ ಹಾನಿ ಮಾಡಿರುವುದನ್ನು ಮನಗಂಡು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ಒದಗಿಸಿದರು. ಇದೇ ಸ್ಥಳದಲ್ಲಿ ನೂತನ ಅಂಗನವಾಡಿ ಕೇಂದ್ರವನ್ನು ನಿರ್ಮಾಣ ಮಾಡುವಂತೆ ಮನವಿ ಮಾಡಿದರು. ಸುತ್ತಮುತ್ತಲಿನ ಗಿರಿಜನರ ಮಕ್ಕಳಿಗಾಗಿ ಈ ಅಂಗನವಾಡಿ ಕೇಂದ್ರವನ್ನು ಹಲವು ವರ್ಷಗಳ ಹಿಂದೆ ತೆರೆಯಲಾಗಿತ್ತು. ಕಟ್ಟಡವು ಕೂಡ ತೀರಾ ಹಳೆಯದಾಗಿರುವುದರಿಂದ ಕಾಡಾನೆಯ ತಳ್ಳಾಟಕ್ಕೆ ಗೋಡೆ ಹಾಗೂ ಬಾಗಿಲು ಮುರಿದು ಬಿದ್ದಿದೆ. ಇದೀಗ ಕೇಂದ್ರದಲ್ಲಿ ಮಕ್ಕಳಿಗೆ ಕುಳಿತುಕೊಳ್ಳುವ ವ್ಯವಸ್ಥೆ ಇಲ್ಲದಂತಾಗಿದೆ. ಈ ಭಾಗವು ಅರಣ್ಯ ಅಂಚಿನಲ್ಲಿರುವುದರಿAದ ಹಾಡಿ ಹಾಗೂ ಅಂಗನವಾಡಿ ಸುತ್ತಮುತ್ತ ಕಾಡಾನೆಗಳ ಓಡಾಟ ಹೆಚ್ಚಾಗಿದೆ. ಇದೀಗ ಅಂಗನವಾಡಿ ಕೇಂದ್ರಕ್ಕೆ ಕಾಡಾನೆ ದಾಳಿ ನಡೆಸಿರುವುದರಿಂದ ಈ ಭಾಗದ ಜನತೆ ಆತಂಕದಲ್ಲಿದ್ದಾರೆ. -ಹೆಚ್.ಕೆ.ಜಗದೀಶ್