ಕಣಿವೆ, ಡಿ. ೬: ಕುಶಾಲನಗರ ತಾಲೂಕಿನ ಹೆಬ್ಬಾಲೆ ಗ್ರಾಮದಲ್ಲಿ ಐತಿಹಾಸಿಕವಾದ ಗ್ರಾಮ ದೇವತೆ ಬನಶಂಕರಿ ಅಮ್ಮನವರ ವಾರ್ಷಿಕ ಪೂಜೋತ್ಸವ ತಾ. ೧೨ ರಂದು ಶ್ರದ್ಧಾಭಕ್ತಿಯಿಂದ ನೆರವೇರಲಿದೆ.
ಪ್ರತಿ ವರ್ಷದ ಕಾರ್ತಿಕ ಮಾಸದಲ್ಲಿ ಆಚರಿಸುವ ಈ ಹಬ್ಬದಲ್ಲಿ ರೈತರು ತಮ್ಮ ಗದ್ದೆಗಳಲ್ಲಿ ಬೆಳೆವ ಭತ್ತದ ಫಸಲು ಗದ್ದೆಗಳಲ್ಲಿ ತಲೆದೂಗಿ ಗ್ರಾಮದೇವತೆಯ ಉತ್ಸವವನ್ನು ಸ್ವಾಗತಿಸಿಕೊಳ್ಳುವುದು ಈ ಹಬ್ಬದ ವಿಶೇಷ.
ಕುಶಾಲನಗರ ತಾಲೂಕಿನಲ್ಲಿಯೇ ಅತ್ಯಂತ ಹೆಚ್ಚು ಜನಸಂಖ್ಯೆಯುಳ್ಳ ದೊಡ್ಡ ಗ್ರಾಮವಾದ ಹೆಬ್ಬಾಲೆ ಗ್ರಾಮದಲ್ಲಿ ಗ್ರಾಮದೇವತೆ ಅಮ್ಮನ ಹಬ್ಬದ ಕಳೆ ರಂಗೇರುತ್ತಿದೆ.
ಗ್ರಾಮದೇವತೆ ಹಬ್ಬಕ್ಕೆ ಹೆಬ್ಬಾಲೆ ಗ್ರಾಮದಿಂದ ಬೇರೆ ಬೇರೆ ಗ್ರಾಮಗಳಿಗೆ ವಿವಾಹವಾಗಿ ತೆರಳಿರುವ ಹೆಣ್ಣು ಮಕ್ಕಳು ತಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸುವುದು ಇನ್ನೊಂದು ವಿಶೇಷ.
ಗ್ರಾಮ ದೇವತೆ ಹಬ್ಬದ ಅಂಗವಾಗಿ ಗ್ರಾಮದ ಸರ್ಕಾರಿ ಶಾಲಾ ಮೈದಾನದಲ್ಲಿ ಹಮ್ಮಿಕೊಳ್ಳುವ ವಿವಿಧ ಕ್ರೀಡಾಕೂಟಗಳಲ್ಲಿ ಅಬಾಲ ವೃದ್ಧರಾದಿಯಾಗಿ ಪ್ರತಿಯೊಬ್ಬರು ಪಾಲ್ಗೊಂಡು ಸಂಭ್ರಮಿಸುವುದು ಮತ್ತೊಂದು ವಿಶೇಷ.
ಗ್ರಾಮದಲ್ಲಿ ಕಾರ್ತಿಕ ಮಾಸದಲ್ಲಿ ಜರುಗುವ ಅಮ್ಮನ ಹಬ್ಬದ ಸಂದರ್ಭವೇ ಗದ್ದೆಗಳಲ್ಲಿ ರೈತರು ಬೆಳೆವ ಭತ್ತದ ಧಾನ್ಯಲಕ್ಷಿö್ಮ ಮನೆ ತುಂಬುವುದು ಇನ್ನೊಂದು ವಿಶೇಷ.
ಗ್ರಾಮದ ವಿವಿಧ ಬಡಾವಣೆಗಳ ಭಕ್ತರಿಂದ ಪ್ರತಿಷ್ಠಾಪಿಸಲ್ಪಡುವ ವಿವಿಧ ದೇವತಾ ಮೂರ್ತಿಗಳ ಸ್ತಬ್ಧಚಿತ್ರಗಳ ಆಕರ್ಷಕ ಮೆರವಣಿಗೆ ಒಂದು ರೀತಿಯಲ್ಲಿ ಮಡಿಕೇರಿ ದಸರಾದ ಮಾದರಿಯಲ್ಲಿ ಜರುಗುತ್ತದೆ.
ಹಬ್ಬದ ಮರುದಿನ ಗ್ರಾಮದ ಪ್ರೌಢಶಾಲಾ ರಸ್ತೆಯಲ್ಲಿ ಏರ್ಪಡಿಸುವ ಚಕ್ರಗಳನ್ನು ಕಟ್ಟುವ ಗಾಡಿ ಓಟದ ಸ್ಪರ್ಧೆಯಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಸ್ಪರ್ಧಿಗಳು ತಾವು ಸಾಕಿರುವ ಎತ್ತುಗಳ ಜೋಡಿಗಳೊಂದಿಗೆ ಭಾಗವಹಿಸುತ್ತಾರೆ.
ಇದನ್ನು ನೋಡಿ ಕಣ್ತುಂಬಿಕೊಳ್ಳಲು ನೂರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಮಧ್ಯ ರಾತ್ರಿ ಎರಡು ಗಂಟೆಯವರೆಗೂ ಜರುಗುವ ವಿವಿಧ ಉತ್ಸವ ಮೂರ್ತಿಗಳ ಮೆರವಣಿಗೆ ಸಂದರ್ಭ ಗ್ರಾಮದೇವತಾ ಸಮಿತಿಯಿಂದ ಸಿಡಿಸುವ ಪಟಾಕಿ ಸಿಡಿಮದ್ದುಗಳ ಪ್ರದರ್ಶನ ನೋಡುಗರ ಮೈನವಿರೇಳಿಸುತ್ತದೆ.
ಅಷ್ಟೇ ಅಲ್ಲ, ಪಟಾಕಿ ಸಿಡಿಸುವ ಸದ್ದು ಸುತ್ತಲಿನ ವಿವಿಧ ಗ್ರಾಮಗಳ ಜನರ ನಿದ್ದೆಗೆಡಿಸುವಂತಿರುತ್ತದೆ.
ಹೆಬ್ಬಾಲೆ ಗ್ರಾಮದ ಹೊರವಲಯದ ಬನಶಂಕರಿ ಬನದಲ್ಲಿ ಇರುವ ದೇವಾಲಯದ ಆವರಣದಲ್ಲಿ ಮಧ್ಯರಾತ್ರಿ ಕೆಂಡ ಕೊಂಡೋತ್ಸವ ನಡೆಯಲಿದ್ದು ವಿವಿಧ ಇಷ್ಟಾರ್ಥ ಸಿದ್ದಿಗಾಗಿ ಹರಕೆ ಹೊತ್ತ ನೂರಾರು ಭಕ್ತರು ಬೆಳಗ್ಗಿಂದ ಉಪವಾಸ ವ್ರತವಿದ್ದು, ಬೆಂಕಿಕೊAಡದಲ್ಲಿನ ಬೆಂಕಿಯ ಕೆಂಡವನ್ನು ಬರಿಗಾಲಲ್ಲಿ ತುಳಿದು ಗ್ರಾಮದೇವತೆಗೆ ಹರಕೆ ಒಪ್ಪಿಸುತ್ತಾರೆ. ಒಟ್ಟಾರೆ ಅಮ್ಮನ ಹಬ್ಬಕ್ಕೆ ದೂರದ ಊರುಗಳಿಂದ, ಹೊರ ರಾಜ್ಯವಷ್ಟೇ ಅಲ್ಲ, ಹೊರ ದೇಶಗಳಿಂದಲೂ ಗ್ರಾಮ ನಿವಾಸಿಗಳು ಆಗಮಿಸುವುದು ಹಬ್ಬದ ವಿಶೇಷವಾಗಿದೆ. - ಕೆ.ಎಸ್. ಮೂರ್ತಿ