ಗೋಣಿಕೊಪ್ಪಲು, ಡಿ. ೬: ಕಳತ್ಮಾಡು ಗ್ರಾಮದಲ್ಲಿ ಕಾಡಾನೆ ಹಾವಳಿ ಅಧಿಕಗೊಂಡಿದ್ದು, ರೈತರು ಬೆಳೆದಿರುವ ಭತ್ತದ ಫಸಲನ್ನು ಧ್ವಂಸಗೊಳಿಸಿವೆ. ಈ ಬಗ್ಗೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರಿಗೆ ಗ್ರಾಮಸ್ಥರಾದ ಕೊಲ್ಲೀರ ಗಯಾ ಸೇರಿದಂತೆ ಇನ್ನಿತರರು ಮಾಹಿತಿ ನೀಡಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ತೆರಳಿ ಕ್ರಮ ಕೈಗೊಳ್ಳುವಂತೆ ಶಾಸಕ ಪೊನ್ನಣ್ಣ ಸೂಚನೆ ನೀಡಿದ್ದಾರೆ. ಶಾಸಕರ ನಿರ್ದೇಶನದ ಮೇರೆಗೆ ಪೊನ್ನಂಪೇಟೆ ವಲಯ ಅರಣ್ಯ ಅಧಿಕಾರಿಗಳಾದ ಶಂಕರ್ ಹಾಗೂ ದಿವಾಕರ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಬಹುತೇಕ ಕೊಲ್ಲೀರ ಕುಟುಂಬಕ್ಕೆ ಸೇರಿರುವ ಭತ್ತದ ಗದ್ದೆಗಳಿಗೆ ತೆರಳಿರುವ ಕಾಡಾನೆ ಹಿಂಡು ಇನ್ನೇನು ಕೆಲವೇ ದಿನಗಳಲ್ಲಿ ಕಟಾವಿಗೆ ಬರಬೇಕಾಗಿದ್ದ ಭತ್ತದ ಫಸಲನ್ನು ಹಾಳು ಮಾಡಿವೆ. ಸಮೀಪದಲ್ಲಿರುವ ಪೈಪ್ ಲೈನ್‌ಗಳಿಗೆ ಹಾನಿ ಮಾಡಿವೆ.

ಕಳೆದ ಒಂದು ವಾರಗಳ ಹಿಂದೆ ಸಮೀಪದ ಬಿಬಿಟಿಸಿ ಹಾಗೂ ಟಾಟಾ ಕಾಫಿಯವರು ತಮ್ಮ ಸರ ಹದ್ದಿಗೆ ಸೋಲಾರ್ ಬೇಲಿಯನ್ನು ಅಳವಡಿಸಿರುವುದರಿಂದ ಕಾಡಾನೆಗಳು ಅರಣ್ಯ ಪ್ರದೇಶಕ್ಕೆ ತೆರಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅವುಗಳು ನೇರವಾಗಿ ರೈತರ ಭತ್ತದ ಗದ್ದೆಗಳಿಗೆ ಲಗ್ಗೆ ಇಡುತ್ತಿವೆ. ಕಾಡಾನೆಗಳು ನಡೆದಾಡುವ ದಾರಿಯನ್ನು ಸೋಲಾರ್ ಬೇಲಿಗಳಿಂದ ಮುಚ್ಚಿರುವುದರಿಂದ ಈ ಸಮಸ್ಯೆ ಎದುರಾಗಲು ಕಾರಣವಾಗಿದೆ. ಎಂದಿನAತೆ ಕಾಡಾನೆಗಳಿಗೆ ತಮ್ಮ ದಾರಿಯಲ್ಲಿ ನಡೆದಾಡಲು ಅವಕಾಶ ಕಲ್ಪ್ಪಿಸಿದಲ್ಲಿ ರೈತರ ಭತ್ತದ ಗದ್ದೆ ಹಾಗೂ ತೋಟಗಳಿಗೆ ಹಾನಿ ಮಾಡುವ ಪ್ರಮೇಯ ಅಷ್ಟಾಗಿ ಎದುರಾಗುವುದಿಲ್ಲ ಎಂದು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೊಲ್ಲಿರ ಗೋಪಿ ಚಿಣ್ಣಪ್ಪ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಅರಣ್ಯ ಇಲಾಖೆಯು ಈ ಭಾಗದ ರೈತರಿಗೆ ಪರಿಹಾರ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕೆಪಿಸಿಸಿ ರಾಜ್ಯ ವಕ್ತಾರ ಮೇರಿಯಂಡ ಸಂಕೇತ್ ಪೂವಯ್ಯ ಅಧಿಕಾರಿಗಳಿಗೆ ಹೇಳಿದರು. ಈ ಸಂದರ್ಭ ಗ್ರಾಮ ಪಂಚಾಯಿತಿಯ ಸದಸ್ಯರಾದ ಕೊಲ್ಲೀರ ಧನು, ಸುಶೀಲ ಸೇರಿದಂತೆ ಇನ್ನಿತರ ಪ್ರಮುಖರು ಹಾಜರಿದ್ದರು.