ಕೂಡಿಗೆ, ಡಿ. ೬: ಮದಲಾಪುರ ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಬೆಂಡೆಬೆಟ್ಟ ಮೀಸಲು ಅರಣ್ಯ ಪ್ರದೇಶದ ಮೂಲಕ ಬರುವ ಕಾಡಾನೆಗಳು ಸಮೀಪದ ಹಾರಂಗಿ ನದಿಯನ್ನು ದಾಟಿ ಬಂದು ನದಿ ದಂಡೆಯ ಹಾರಂಗಿ ಅಚ್ಚುಕಟ್ಟು ಪ್ರದೇಶದ ಜಮೀನಿನ ಭತ್ತದ ಗದ್ದೆಗಳಿಗೆ ಧಾಳಿ ಮಾಡಿ ಅಪಾರ ಪ್ರಮಾಣದ ಬೆಳೆ ನಾಶಗೊಳಿಸಿವೆ. ಮದಲಾಪುರ ಗ್ರಾಮದ ನಾಗರಾಜ ಎಂಬವರ ಜಮೀನು ಸೇರಿದಂತೆ ಅಕ್ಕಪಕ್ಕದ ಜಮೀನಿಗೆ ದಾಳಿ ಮಾಡಿವೆ.

ಹಾರಂಗಿ ನದಿ ದಂಡೆಯ ಅಂಚಿನಲ್ಲಿ ಬೀಡುಬಿಟ್ಟಿರುವ ಕಾಡಾನೆಗಳು ಬೆಳಗ್ಗಿನ ಸಮಯದಲ್ಲೂ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ವ್ಯಾಪ್ತಿಯ ರೈತರು ಭಯಾಭೀತರಾಗಿದ್ದಾರೆ. ಅರಣ್ಯ ಇಲಾಖೆ ಕಾಡಾನೆಗಳನ್ನು ಆನೆಕಾಡು ಮೀಸಲು ಅರಣ್ಯ ಪ್ರದೇಶದತ್ತ ಓಡಿಸುವಂತೆ ರೈತರು ಆಗ್ರಹಿಸಿದ್ದಾರೆ.