ಮಡಿಕೇರಿ, ಡಿ. ೬: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಪ್ರಕರಣದ ಆರೋಪಿಗೆ ವೀರಾಜಪೇಟೆಯ ೨ನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಪೂಜೆಕಲ್ಲು ನಿವಾಸಿ ಆನಂದ್ ಕುಮಾರ್ (೩೭) ಶಿಕ್ಷೆಗೆ ಒಳಗಾಗಿದ್ದು, ತಾ. ೦೧-೦೧-೨೦೧೭ ರಿಂದ ೩೦-೦೬-೨೦೧೭ ರ ಅವಧಿಯಲ್ಲಿ ಅಪ್ರಾಪ್ತ ವಯಸ್ಸಿನ ಹುಡುಗಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಒತ್ತಾಯದಿಂದ ಹಲವು ಬಾರಿ ಅತ್ಯಾಚಾರ ಮಾಡಿರುವುದು ಹಾಗೂ ತಂದೆ-ತಾಯಿ ಇಲ್ಲದ ಸಮಯದಲ್ಲಿ ಹುಡುಗಿಯ ಮನೆಗೆ ನುಗ್ಗಿ ಶ್ರೀಮಂಗಲಕ್ಕೆ ಬರುವಂತೆ ಕರೆದಿದ್ದು, ಹುಡುಗಿಯು ಬರುವುದಿಲ್ಲ ಎಂದು ತಿಳಿಸಿದ ಸಂದರ್ಭ ಬರದಿದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಸಿ ಕರೆದುಕೊಂಡು ಹೋಗಿ ಅವನ ಮನೆಯಲ್ಲಿ ಹುಡುಗಿಯ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿ ಗಾಯಗೊಳಿಸಿ ಬಲವಂತವಾಗಿ ಅತ್ಯಾಚಾರ ಮಾಡಿರುವ ಕುರಿತು ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯಿದೆಯಡಿ ದೂರು ದಾಖಲಾಗಿ ಆರೋಪಿಯನ್ನು ಬಂಧಿಸಲಾಗಿತ್ತು.

ಪ್ರಕರಣದ ಸಂಪೂರ್ಣ ತನಿಖೆ ಕೈಗೊಂಡು ಆರೋಪಿ ವಿರುದ್ಧ ದೋಷಾರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಯನ್ನು ನಡೆಸಿ ಆರೋಪಿ ಕಲಂ: ೬(೧) ಪೋಕ್ಸೋ ಕಾಯ್ದೆ ಅಡಿಯಲ್ಲಿ ೨೦ ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ರೂ. ೫೦ ಸಾವಿರ ದಂಡ, ದಂಡ ತಪ್ಪಿದ್ದಲ್ಲಿ ೨ ವರ್ಷ ಜೈಲು ಶಿಕ್ಷೆಯ ವಿಸ್ತರಣೆ ಮತ್ತು ಕಲಂ: ೫೦೬ ಐಪಿಸಿ ಅಡಿಯಲ್ಲಿ ೧ ವರ್ಷ ಜೈಲು ಶಿಕ್ಷೆ ಮತ್ತು ರೂ. ೫ ಸಾವಿರ ದಂಡ. ಮತ್ತು ಕಲಂ ೩೭೬(೨)(ಎನ್) ಐಪಿಸಿ ಅಡಿಯಲ್ಲಿ ೧೦ ವರ್ಷ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿ ನ್ಯಾಯಾಲಯವು ತೀರ್ಪು ನೀಡಿದೆ.