ಪೊನ್ನಂಪೇಟೆ, ಡಿ. ೫: ಮಾನವೀಯ ಸ್ನೇಹಿತರ ಒಕ್ಕೂಟದ ಕಾರುಣ್ಯ ಕಾರ್ಯಕ್ರಮಗಳ ಅನ್ವಯ ವೀರಾಜಪೇಟೆ ಸಮೀಪದ ಹೆಗ್ಗಳ ಗ್ರಾಮದ ಸ್ನೇಹ ಭವನ್ ಪುರುಷರ ವೃದ್ಧಾಶ್ರಮಕ್ಕೆ ಔಷಧಿಗಳನ್ನು ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಒಕ್ಕೂಟದ ಅಡ್ಮಿನ್ ಗಾಯತ್ರಿ ನರಸಿಂಹ, ಸದಸ್ಯರುಗಳಾದ ನಾಸಿರ್ ಯೋಧ ಸ್ಟುಡಿಯೋ ಪಾಲಿಬೆಟ್ಟ, ರಾಮದಾಸ್ ಪಾಲಿಬೆಟ್ಟ, ರಾಫಿ ವೀರಾಜಪೇಟೆ ಹಾಗೂ ಮನು ಚೆನ್ನಯ್ಯನಕೋಟೆ ಇವರುಗಳು ಪಾಲ್ಗೊಂಡಿದ್ದರು.

ಈ ಸಂದರ್ಭ ಮಾತನಾಡಿದ ಒಕ್ಕೂಟದ ಸದಸ್ಯ ಮಹಮದ್ ರಫಿ, ಸ್ನೇಹ ಭವನದಲ್ಲಿ ಆಶ್ರಯ ಪಡೆಯುತ್ತಿರುವ ಹಿರಿಯ ಜೀವಿಗಳೆಲ್ಲ ಹಲವು ಕಾರಣಗಳಿಂದ ಕುಟುಂಬದಿAದ ಬೇರ್ಪಟ್ಟಿರಬಹುದು, ಈ ಭವನದ ಮುಖ್ಯಸ್ಥ ಜಾನ್ ಅವರು ಎಲ್ಲರನ್ನು ಸ್ನೇಹ ಭಾವದಿಂದ ಕಂಡು ಸಲಹುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು. ಒಂದು ಪುಟ್ಟ ಕುಟುಂಬವನ್ನು ನಿಭಾಯಿಸುವುದೇ ಕಷ್ಟಕರವಾಗಿರುವಾಗ ಈ ಸಂಸ್ಥೆಯನ್ನು ಶಿಸ್ತುಬದ್ಧವಾಗಿ ನಡೆಸಿಕೊಂಡು ಹೋಗುತ್ತಿರುವುದು ಸಣ್ಣ ಕೆಲಸವೇನೂ ಅಲ್ಲ. ಮಾನವೀಯ ಸ್ನೇಹಿತರ ಒಕ್ಕೂಟವು ಹಲವು ವರ್ಷಗಳಿಂದ ಸಮಾಜದಲ್ಲಿ ನೊಂದು ಬೆಂದ ಕುಟುಂಬಗಳಿಗೆ ತನ್ನಿಂದಾದ ನೆರವು ನೀಡುತ್ತಾ ಬರುತ್ತಿದೆ. ಅದರಲ್ಲಿ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಔಷಧಿಗಳ ವಿತರಣೆ ಕೂಡ ಒಂದು ಎಂದು ಹೇಳಿದ ರಾಫಿ ಅವರು ಎಲ್ಲರಿಗೂ ಶುಭ ಹಾರೈಸಿದರು. ಇದೇ ಸಂದರ್ಭ ಸ್ನೇಹ ಭವನದ ಹಿರಿಯರಿಗೆ ಒಕ್ಕೂಟದ ವತಿಯಿಂದ ಹಣ್ಣು ಹಂಪಲು ವಿತರಿಸಲಾಯಿತು. ಗಾಯತ್ರಿ ನರಸಿಂಹ ಅವರು ವೃದ್ಧಾಶ್ರಮದ ಎಲ್ಲ ಸದಸ್ಯರಿಗೂ ವೈಯಕ್ತಿಕವಾಗಿ ಕೇಕ್‌ಗಳನ್ನು ವಿತರಿಸಿ ಸಹಕರಿಸಿದರು.