ಸೋಮವಾರಪೇಟೆÀ, ಡಿ. ೫: ದೃಷ್ಟಿ ಕಳೆದುಕೊಂಡಿರುವ ಕಾಡಾನೆಯೊಂದು ಜನನಿಬಿಡ ಪ್ರದೇಶವಾದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಜ್ಜಳ್ಳಿ ಗ್ರಾಮದಲ್ಲಿ ಬೀಡುಬಿಟ್ಟು ಸಾರ್ವಜನಿಕ ವಲಯದಲ್ಲಿ ಆತಂಕ ಹೆಚ್ಚು ಮಾಡುತ್ತಿದೆ.

ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವನಾಡು ಮೀಸಲು ಅರಣ್ಯದಂಚಿನಲ್ಲಿ ಕೆಲವು ದಿನಗಳಿಂದ ಕಾಣಿಸಿಕೊಂಡಿದ್ದ ಕಣ್ಣು ಕಾಣದ ಒಂಟಿ ಕಾಡಾನೆ, ಇಂದಿಗೂ ಅದೇ ರೀತಿಯಲ್ಲಿ ಅಲೆದಾಡುತ್ತಿದ್ದು, ಅರಣ್ಯ ಇಲಾಖೆ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ವಾಸಮಾಡುತ್ತಿರುವ ಗಿರಿಜನರು ಮತ್ತು ರೈತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಹಗಲಿನ ವೇಳೆ ಗಿರಿಜನರು ಹಾಗೂ ಅರಣ್ಯ ಸಿಬ್ಬಂದಿಗಳು ಕಾಡಿಗೆ ಓಡಿಸಿದರೂ ನಂತರ ಆಹಾರ ಅರಸಿ ರಾತ್ರಿ ವೇಳೆಯಲ್ಲಿ ಕೃಷಿ ಭೂಮಿಗೆ ಬರುತ್ತಿದೆ. ಕಣ್ಣು ಕಾಣದ ಹಿನ್ನೆಲೆಯಲ್ಲಿ ಸಜ್ಜಳ್ಳಿ ಹಾಡಿಯ ಲೋಕೇಶ್ ಎಂಬವರ ಕೃಷಿ ಜಮೀನಿನಲ್ಲಿ ಬೆಳೆದು ನಿಂತಿರುವ ಕಾಡು ಹುಲ್ಲನ್ನು ತಿಂದು ಅಲ್ಲಿಯೇ ವಿಶ್ರಮಿಸುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕಳೆದ ಮೂರು ದಿನಗಳಿಂದ ಸಜ್ಜಳ್ಳಿ ಗಿರಿಜನರ ಹಾಡಿ ಸಮೀಪ ಬಂದಿರಲಿಲ್ಲ. ನಿನ್ನೆ ಹಗಲು ರಸ್ತೆಯಲ್ಲಿಯೇ ಕಾಣಿಸಿಕೊಂಡಿದೆ. ಅರಣ್ಯದಲ್ಲಿರುವ ಒಂಟಿ ಸಲಗವಾದರೆ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಈ ಕಾರಣದಿಂದ ರಸ್ತೆಯಲ್ಲಿ ಜನರು ತಿರುಗಾಡಲು ಭಯಪಡುವಂತಾಗಿದೆ.

ಗಾಯಗೊAಡಿರುವ ಕಾಡಾನೆಯ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಲಾಗಿದೆ. ಹಿಡಿಯುವುದು ಮತ್ತು ಚಿಕಿತ್ಸೆಯ ಬಗ್ಗೆ ಯಾವುದೇ ಆದೇಶವಾಗಿಲ್ಲ. ಆನೆಗೆ ಒಂದು ಕಣ್ಣು ಕಾಣುತ್ತಿರಬೇಕು. ಅದನ್ನು ಹಿಡಿದ ನಂತರವೇ ಸರಿಯಾದ ಮಾಹಿತಿ ಸಿಗುವುದು. ಮೇಲಧಿಕಾರಿಗಳು ಆನೆಯ ಚಲನವಲನವನ್ನು ಅಭ್ಯಸಿಸಲು ತಿಳಿಸಿದ್ದು, ನೋಡಿಕೊಳ್ಳುತ್ತಿದ್ದೇವೆ. ಹಾರಂಗಿ ಹಿನ್ನೀರಿನ ಬಳಿಯ ಅರಣ್ಯಕ್ಕೆ ಓಡಿಸಲಾಗಿತ್ತು. ಮತ್ತೆ ಸಜ್ಜಳ್ಳಿ ಹಾಡಿ ಬದಿಯ ಅರಣ್ಯಕ್ಕೆ ಬಂದು ಸೇರಿದೆ. ಅದನ್ನು ಹಿಡಿದ ನಂತರವೇ ಅದಕ್ಕೆ ಕಾಡಿನಲ್ಲಿ ಆದ ಹಾನಿಯೋ? ಅಥವಾ ಮಾನವನಿಂದ ಆದ ಅನಾಹುತವೋ? ತಿಳಿಯುವುದು. ಒಟ್ಟಾರೆ ಮೇಲಧಿಕಾರಿಗಳ ಆದೇಶದಂತೆ ಮುಂದುವರೆಯಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಚೇತನ್ ತಿಳಿಸಿದ್ದಾರೆ.