ಸಿದ್ದಾಪುರ, ಡಿ. ೬: ಸೋಲಾರ್ ಬೀದಿ ದೀಪ, ಸಿಸಿ ಟಿವಿ, ತ್ಯಾಜ್ಯ ವಿಲೇವಾರಿ, ವಾಹನ ಬಾಡಿಗೆ, ಇಂಧನ ಖರೀದಿ ಸೇರಿದಂತೆ ಹಲವು ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿದ್ದು ಸೂಕ್ತ ತನಿಖೆ ನಡೆಸಬೇಕೆಂದು ಇತ್ತೀಚೆಗೆ ನಡೆದ ಜಮಾಬಂದಿ ಸಭೆಯಲ್ಲಿ ಸ್ಥಳೀಯರು ಒತ್ತಾಯಿಸಿದ ಹಿನ್ನೆಲೆಯಲ್ಲಿ ಇದೀಗ ಅಧಿಕಾರಿಗಳ ತಂಡ ಸಿದ್ದಾಪುರ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ಕಡತಗಳನ್ನು ಪರಿಶೀಲನೆ ನಡೆಸಿದೆ.
ಇತ್ತೀಚೆಗೆ ನಡೆದ ಸಿದ್ದಾಪುರ ಗ್ರಾಮ ಪಂಚಾಯಿತಿ ಜಮಾಬಂಧಿ ಸಭೆಯಲ್ಲಿ ಈ ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ಗ್ರಾಮ ಪಂಚಾಯಿತಿಯಿAದ ಸಿದ್ಧಪಡಿಸಲಾದ ಲೆಕ್ಕಪತ್ರದಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಸ್ಥಳೀಯರು ದೂರು ನೀಡಿ ತನಿಖೆಗೆ ಒತ್ತಾಯಿಸಿದ್ದರು.
ಜಮಾಬಂಧಿ ಸಭೆಯ ನೋಡಲ್ ಅಧಿಕಾರಿಯಾಗಿ ಆಗಮಿಸಿದ್ದ ವೀರಾಜಪೇಟೆ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕಿ ಕವಿತಾ ಅವರ ಸಮ್ಮುಖದಲ್ಲಿ ಲೆಕ್ಕಪತ್ರ ಮಂಡಿಸಲಾಗಿತ್ತು.
ನೋಡಲು ಅಧಿಕಾರಿಯಾಗಿದ್ದ ಕವಿತಾ ಅವರು ಮೇಲಧಿಕಾರಿಗಳಿಗೆ ವರದಿ ನೀಡುವುದಾಗಿ ಭರವಸೆ ನೀಡಿದ್ದರು.
ಇದೀಗ ಮೇಲಧಿಕಾರಿಗಳ ಆದೇಶದಂತೆ ಮೊದಲನೇ ಹಂತದ ತನಿಖೆ ಕೈಗೊಂಡಿದ್ದಾರೆ. ಕಚೇರಿಯಲ್ಲಿ ಅಗತ್ಯ ದಾಖಲಾತಿಗಳನ್ನು ಪರಿಶೀಲನೆ ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಸೋಲಾರ್ ಬೀದಿ ದೀಪ ಹಾಗೂ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿ ಮೇಲಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕಿ ಕವಿತಾ ‘ಶಕ್ತಿ’ಗೆ ತಿಳಿಸಿದ್ದಾರೆ.
ಪಂಚಾಯಿತಿಯಲ್ಲಿ ಕಡತಗಳ ಪರಿಶೀಲನೆ ಸಂದರ್ಭ ಇಲಾಖೆ ಸಿಬ್ಬಂದಿಗಳು ಹಾಗೂ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೀನಾ ತುಳಸಿ ಹಾಜರಿದ್ದರು.
-ಎಸ್.ಎಂ ಮುಬಾರಕ್