ಮಡಿಕೇರಿ, ಡಿ. ೫: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಕೊಡಗು ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.

ಜನರಲ್ ತಿಮ್ಮಯ್ಯ ವೃತ್ತದ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಎದುರು ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.

ಕೊಡಗು ಜಿಲ್ಲೆ ಹಾಗೂ ಕರ್ನಾಟಕದಾದ್ಯಂತ ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆಯ ಉನ್ನತ ಶಿಕ್ಷಣ ವ್ಯಾಪ್ತಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸುಮಾರು ೧೪,೦೦೦ ಅತಿಥಿ ಉಪನ್ಯಾಸಕರು ಕರ್ತವ್ಯ ನಿರ್ವಹಿಸುತ್ತಿದ್ದು, ದಿನಾಂಕ ೨೩.೧೧.೨೦೨೩ ರಿಂದ ರಾಜ್ಯಾದ್ಯಂತ ಸೇವಾ ಖಾಯಮಾತಿ ಹಾಗೂ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಹೋರಾಟವನ್ನು ಕೈಗೊಂಡಿದ್ದಾರೆ. ಈ ಹೋರಾಟಕ್ಕೆ ಕೊಡಗು ಜಿಲ್ಲೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರುಗಳು ಸಂಪೂರ್ಣವಾಗಿ ಬೆಂಬಲ ನೀಡುತ್ತ್ತಿದೆ ಎಂದು ತಿಳಿಸಿದರಲ್ಲದೆ, ಅತಿಥಿ ಉಪನ್ಯಾಸಕರ ಬಹುದಿನಗಳ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.

ಜಿಲ್ಲಾಧಿಕಾರಿ ವೆಂಕಟ್‌ರಾಜ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಹನುಮಂತಗೌಡ ಆರ್. ಕಲ್ಮನಿ, ಮಂಗಳೂರು ವಿವಿ ಅಧೀನದ ಸರ್ಕಾರಿ ಅತಿಥಿ ಉಪನ್ಯಾಸಕರ ಸಂಘದ ಗೌರವಾಧ್ಯಕ್ಷ ಹರೀಶ್ ಆಚಾರ್ಯ, ಜಿಲ್ಲಾಧ್ಯಕ್ಷ ಶ್ಯಾಂ ಪ್ರಸಾದ್, ಸಂಘಟನಾ ಕಾರ್ಯದರ್ಶಿ ಮನೋಜ್‌ಕುಮಾರ್, ಪದಾಧಿಕಾರಿ ಗಳಾದ ನಟರಾಜು, ಉದಯ ಕುಮಾರ್, ವೇಣುಗೋಪಾಲ್, ತ್ಯಾಗರಾಜು, ಶಾಲಿನಿ, ಡೀನಾ ಮತ್ತಿತರರು ಇದ್ದರು.