ಶ್ರೀಮಂಗಲ, ಡಿ. ೬: ಅಲ್ಪಸಂಖ್ಯಾತ ಕೊಡವ ಜನಾಂಗದ ಹಿತಾಸಕ್ತಿ ಕಾಪಾಡುವ, ಭವಿಷ್ಯದ ಬಗ್ಗೆ ಚಿಂತಿಸಿ ಮುನ್ನಡೆಸುವ ಗುರು ಸ್ಥಾನದ ವ್ಯವಸ್ಥೆ ಅಗತ್ಯ ಇದೆ ಎಂದು ಕರ್ನಾಟಕ ಸರ್ಕಾರದ ಚೀಫ್ ಎಲೆಕ್ಟಿçಕಲ್ ಇನ್ಸ್ಪೆಕ್ಟರ್ ತೀತಿರ ರೋಶನ್ ಅಪ್ಪಚ್ಚು ಅಭಿಪ್ರಾಯಪಟ್ಟರು.

ಪೊನ್ನಂಪೇಟೆ ಕೊಡವ ಸಮಾಜದ ಆಶ್ರಯದಲ್ಲಿ ನಡೆದ ಕೊಡವ ಸಾಂಸ್ಕೃತಿಕ ದಿನ ಮತ್ತು ಪುತ್ತರಿ ಕೋಲ್ ಮಂದ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಪರಸ್ಪರ ಬೆಂಬಲಿಸಿ ಸಹಕಾರ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು, ಆರ್ಥಿಕವಾಗಿ ಉನ್ನತಿಯಲ್ಲಿರುವವರು ಜನಾಂಗದ ಸರ್ವತೋಮುಖ ಏಳಿಗೆಗೆ ಕೈಜೋಡಿಸಬೇಕು ಎಂದರು. ಮತ್ತೋರ್ವ ಅತಿಥಿ ಡಾ. ತೀತರಮಾಡ ದೇವಕಿ ಮಾತನಾಡಿ; ಕೊಡವ ಜನಾಂಗದಲ್ಲಿ ಹಲವಾರು ಸಂಘಟನೆಗಳಿದ್ದು, ಇವುಗಳೆಲ್ಲವೂ ಒಂದೇ ಸಂಘಟನೆಯಾಗಬೇಕು, ಜನಾಂಗದ ಒಂದು ಧ್ವನಿಯಾಗಿ ಕೆಲಸ ಮಾಡಿದಾಗ ಸರಕಾರದ ಮಟ್ಟದಲ್ಲಿಯೂ ಬೇಡಿಕೆ ಈಡೇರಿಸಲು ಸಾದ್ಯ. ಇಂದು ಶೈಕ್ಷಣಿಕವಾಗಿ ಮತ್ತು ಉದ್ಯೋಗಕ್ಕಾಗಿ ಸ್ಪರ್ಧಾತ್ಮಕವಾಗಿದ್ದು, ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಲು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಇಂದಿನ ಸಾಂಸ್ಕೃತಿಕ ಪೈಪೋಟಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ-ಕಾಲೇಜು ಮಕ್ಕಳು ಪಾಲ್ಗೊಂಡಿದ್ದು ನಮ್ಮ ಸಂಸ್ಕೃತಿ ಬಗ್ಗೆ ನಮಗೆ ಹಿರಿಮೆಯಾಗಿದೆ. ಹೆಣ್ಣು ಮಕ್ಕಳ ಅಂತರ್ಜಾತಿ ವಿವಾಹದಿಂದ ಅಲ್ಪಸಂಖ್ಯಾತ ಕೊಡವ ಜನಾಂಗಕ್ಕೆ ಮಾರಕ ಪರಿಣಾಮ ಬೀರುತ್ತದೆ. ಜನಾಂಗದ ಸಂರಕ್ಷಣೆಯ ಸಂಕಲ್ಪತೊಟ್ಟು ಅಂತರ್ಜಾತಿ ವಿವಾಹಕ್ಕೆ ಜನಾಂಗದ ಹೆಣ್ಣು ಮಕ್ಕಳು ಮುಂದಾಗಬಾರದು. ಪೊನ್ನಂಪೇಟೆ ಕೊಡವ ಸಮಾಜದಿಂದ ಜನಾಂಗದ ಏಳಿಗೆಗೆ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ವಿವರಿಸಿದರು.

ಸನ್ಮಾನ: ಈ ಸಂದರ್ಭ ತೀತಿರ ರೋಷನ್ ಅಪ್ಪಚ್ಚು, ಡಾ. ತೀತರಮಾಡ ದೇವಕಿ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಜಂಟಿ ಕಾರ್ಯದರ್ಶಿ ಆಲೇಮಾಡ ಡಿ. ಸುಧೀರ್, ಖಜಾಂಚಿ ಕಳ್ಳಿಚಂಡ ಕಟ್ಟಿ ಪೂಣಚ್ಚ, ಖಾಯಂ ಆಹ್ವಾನಿತ ನಿರ್ದೇಶಕ ಚೆಪ್ಪುಡೀರ ಬಿ. ಕಿಟ್ಟು ಅಯ್ಯಪ್ಪ, ನಿರ್ದೇಶಕರುಗಳಾದ ಚೆಪ್ಪುಡೀರ ರಾಕೇಶ್ ದೇವಯ್ಯ, ಅಡ್ಡಂಡ ಸುನಿಲ್ ಸೋಮಯ್ಯ, ಕೊಣಿಯಂಡ ಸಂಜು ಸೋಮಯ್ಯ, ಚೀರಂಡ ಕಂದ ಸುಬ್ಬಯ್ಯ, ಮೂಕಳಮಾಡ ಅರಸು ನಂಜಪ್ಪ, ಮೂಕಳೇರ ಕಾವ್ಯ ಕಾವೇರಮ್ಮ, ಚೊಟ್ಟೆಕಾಳಪಂಡ ಆಶಾಪ್ರಕಾಶ್ ಹಾಜರಿದ್ದರು. ಉಳುವಂಗಡ ಮೋಹಿತ್ ಅಪ್ಪಯ್ಯ ಪ್ರಾರ್ಥಿಸಿ, ಉಪಾಧ್ಯಕ್ಷೆ ಚಿರಿಯಪಂಡ ಇಮ್ಮಿ ಬೋಜಮ್ಮ ಸ್ವಾಗತಿಸಿ, ಬಲ್ಲಡಿಚಂಡ ಕಸ್ತೂರಿ ನಿರೂಪಿಸಿ, ಗೌ. ಕಾರ್ಯದರ್ಶಿ ಕೋಟೆರ ಕಿಶನ್ ಉತ್ತಪ್ಪ ವಂದಿಸಿದರು.

ಸಾAಸ್ಕೃತಿಕ ಪೈಪೋಟಿ: ಕೊಡವ ಸಾಂಸ್ಕೃತಿಕ ಮತ್ತು ಜಾನಪದ ಕಲಾ ಪೈಪೋಟಿಯಲ್ಲಿ ಬೊಳಕಾಟ್, ಉಮ್ಮತಾಟ್, ಪುತ್ತರಿ ಕೋಲಾಟ್, ಪರೆಯಕಳಿ, ವಾಲಗತಾಟ್, ಕಪ್ಪೆಯಾಟ್‌ನಲ್ಲಿ ಜಿಲ್ಲೆಯ ವಿವಿಧೆಡೆಯಿಂದ ೩೮ ತಂಡಗಳು ಭಾಗವಹಿಸಿ ಸಾಂಸ್ಕೃತಿಕ ವೈಭವವನ್ನು ಸಾರಿದವು.