ಅನಿಲ್ ಎಚ್.ಟಿ.

ಮಡಿಕೇರಿ, ಡಿ. ೪ : ಮೈಸೂರು ದಸರಾದಲ್ಲಿ ೮ ವರ್ಷಗಳ ಕಾಲ ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿಯನ್ನು ಹೊತ್ತು ಗಾಂಭೀರ್ಯದಿAದ ಹೆಜ್ಜೆ ಹಾಕಿ ವಿಶ್ವವ್ಯಾಪೀ ಲಕ್ಷಾಂತರ ಜನರ ಮನಗೆದ್ದಿದ್ದ ದಸರಾ ಪರಂಪರೆಯ ಪ್ರತೀಕದಂತಿದ್ದ, ಗಜಪಡೆಗಳ ಕ್ಯಾಪ್ಟನ್ ಎನಿಸಿಕೊಂಡಿದ್ದ ಅರ್ಜುನ ಇನ್ನು ನೆನಪು ಮಾತ್ರ.

ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಪರಿಣಿತನಾಗಿದ್ದ ಅಂದಾಜು ೬೩ ವರ್ಷ ಪ್ರಾಯದ ಅರ್ಜುನ ಸೋಮವಾರ ಮಧ್ಯಾಹ್ನ ಕೊಡಗಿನ ಗಡಿಗ್ರಾಮವಾದ ಹಾಸನ ಜಿಲ್ಲೆಯ ಎಸಳೂರಿನಲ್ಲಿ ಬಾಳೆಕೆರೆ ಅರಣ್ಯ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿಯೇ ಕಾಡಾನೆ ಧಾಳಿಯಿಂದಾಗಿ ಕೊನೆ ಉಸಿರೆಳೆದು ಕೇವಲ ನೆನಪಾಗಿ ಉಳಿಯುವಂತಾಗಿದ್ದಾನೆ.

ಅರ್ಜುನನ ಹಿನ್ನೆಲೆ

೧೯೬೮ರಲ್ಲಿ ಕರ್ನಾಟಕದ ಎಚ್.ಡಿ.ಕೋಟೆ ಬಳಿಯ ಆನೆ ಪಳಗಿಸುವ ಕಾರ್ಯಾಚರಣೆಗೆ ಹೆಸರಾದ ಕಾಕನಕೋಟೆ ಕಾಡಿನಲ್ಲಿ ಉಪಟಳ ನೀಡುತ್ತಿದ್ದ ಅರ್ಜುನನನ್ನು ಖೆಡ್ಡಾ ಕಾರ್ಯಾಚರಣೆಯಲ್ಲಿ ಸೆರೆಹಿಡಿಯಲಾಯಿತು. ಆತನನ್ನು ಚೆನ್ನಾಗಿ ಪಳಗಿಸಿದ ನಂತರ ೧೯೯೦ರ ದಶಕದ ಕೊನೆಯಲ್ಲಿ ಮೈಸೂರಿನಲ್ಲಿ ದಸರಾ ಉತ್ಸವಕ್ಕೆ ಕರೆತರಲಾಯಿತು. ಆ ವೇಳೆಗೆ ಮೈಸೂರು ದಸರಾದಲ್ಲಿ ಚಿನ್ನದ ಅಂಬಾರಿ ಹೊರುತ್ತಿದ್ದ ದ್ರೋಣನ ಸ್ಥಾನಕ್ಕೆ ಬಲರಾಮ ಬಂದಿದ್ದ. ಆದರೆ ಬಲರಾಮನ ಬಗ್ಗೆ ಅಷ್ಟೇನೂ ಒಲವು ತೋರದ ಅಧಿಕಾರಿಗಳು ಅರ್ಜುನನನ್ನು ಗಮನಿಸಿದ್ದೇ ಚಿನ್ನದ ಅಂಬಾರಿ ಹೊರಲು ತಾವು ಹುಡುಕುತ್ತಿದ್ದ ಗತ್ತು, ಗಾಂಭೀರ್ಯದ ಬೃಹತ್ ಶರೀರದ ಅರ್ಜುನನೇ ಸೂಕ್ತ ಎಂದು ಆಯ್ಕೆ ಮಾಡಿದರು. ಕೆಲವರ್ಷಗಳ ಕಾಲ ಜಂಬೂಸವಾರಿಯಲ್ಲಿ ಅಂಬಾರಿ ಆನೆ ದ್ರೋಣನ ಹಿಂದೆ ನಡೆದಿದ್ದ ಅರ್ಜುನ ೨೦೧೨ ರಿಂದ ೨೦೧೯ ರವರೆಗೆ ದಾಖಲೆಯ ೮ ವರ್ಷಗಳೂ ದಸರಾ ಮಹೋತ್ಸವದಲ್ಲಿ ತಾನೇ ಗಜಪಡೆಗಳ ರಾಜನಂತೆ ಅಂಬಾರಿ ಹೊತ್ತಿದ್ದ. ಕಳೆದ ೪ ವರ್ಷಗಳ ಹಿಂದೆ ವಯೋನಿವೃತ್ತಿ ಹೊಂದಿದ್ದ ಅರ್ಜುನ ಪ್ರಸ್ತುತ ನಾಗರಹೊಳೆ ವ್ಯಾಪ್ತಿಯ ಎಚ್.ಡಿ. ಕೋಟೆ ಬಳಿಯ ಬಳ್ಳೆ ಸಾಕಾನೆ ಶಿಬಿರದಲ್ಲಿ ವಾಸವಾಗಿದ್ದ.

ರಾಜನ ಗಾಂಭೀರ್ಯ ಅಥವಾ ಗಜಗಾಂಭೀರ್ಯ ಎಂಬುದು ಅರ್ಜುನನಿಗೆ ಪರಿಪೂರ್ಣವಾಗಿ ಸಿದ್ದಿಸಿತ್ತು. ಹೀಗಾಗಿಯೇ ದಸರಾದಲ್ಲಿ ೮ ವರ್ಷಗಳೂ ಅರ್ಜುನನ ಬಗ್ಗೆ ಯಾವುದೇ ದೂರುಗಳು ಇರಲಿಲ್ಲ. ಅರ್ಜುನನಿಗೆ ವಯಸ್ಸಾಗಿದೆ ಎಂಬ ಕಾರಣದಿಂದಾಗಿ ಅಭಿಮನ್ಯು ಎಂಬ ಮತ್ತೊಂದು ವೀರಗಜವನ್ನು ಕಳೆದ ೪ ವರ್ಷಗಳಿಂದ ದಸರಾದಲ್ಲಿ ಬಳಸಲಾಗುತ್ತಿದೆ. ಈ ಅಭಿಮನ್ಯು ಕೂಡ ಕೊಡಗಿನ ಮತ್ತಿಗೋಡು ಸಾಕಾನೆ ಶಿಬಿರದ ಹೆಮ್ಮೆಯ ಗಜನಾಗಿದ್ದಾನೆ.

ಘಟನೆ ಹೇಗಾಯಿತು..?

ಇತ್ತೀಚೆಗೆ ಹಾಸನದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿ ಜಮೀನುಗಳಿಗೆ ದಾಂಗುಡಿ ಇಡುತ್ತಿದ್ದು, ಸಾಕಷ್ಟು ಬೆಳೆಗಳನ್ನು ನಾಶಮಾಡುತ್ತಿದ್ದವು. ಕಾಡಾನೆಗಳ ಉಪಟಳಕ್ಕೆ ಅಂತ್ಯ ಹಾಡಲು ಹಾಸನ ಜಿಲ್ಲೆಯ ಅರಣ್ಯ ಇಲಾಖೆಯಿಂದ ಕಾಡಾನೆ ಸೆರೆ ಕಾರ್ಯಾಚರಣೆಗೆ ಯೋಜನೆ ರೂಪಿಸಲಾಗಿತ್ತು. ಅಂತೆಯೇ ಸೋಮವಾರ ಸಕಲೇಶಪುರ ವ್ಯಾಪ್ತಿಯ ಕೊಡಗಿನ ಗಡಿಗ್ರಾಮವಾದ ಎಸಳೂರು ಎಸ್ಟೇಟ್ ವ್ಯಾಪ್ತಿಯಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳ ಗುಂಪಿನ ಬಗ್ಗೆ ಮಾಹಿತಿ ಪಡೆದು ಅಲ್ಲಿಗೆ ತೆರಳಿದ ಕಾಡಾನೆ ಸೆರೆ ಕಾರ್ಯಾಚರಣೆ ಪಡೆಯವರು ಬೆಳಗ್ಗಿನಿಂದಲೇ ೬ ಸಾಕಾನೆಗಳ ಮೂಲಕ ಕಾರ್ಯಾಚರಣೆಗೆ ಮುಂದಾದರು. ಸೋಮವಾರ ಮಧ್ಯಾಹ್ನ ಎಸಳೂರು ಎಸ್ಟೇಟ್‌ನಲ್ಲಿ ಅರ್ಜುನನ ಮೇಲೆ ಕುಳಿತಿದ್ದ ವೈದ್ಯಾಧಿಕಾರಿ ಡಾ. ರಮೇಶ್ ಕೋವಿಯಿಂದ ಅರೆವಳಿಕೆ ಚುಚ್ಚುಮದ್ದನ್ನು ಎದುರಿಗೆ ಕಂಡು ಬಂದ ಕಾಡಾನೆಗೆ ಹಾರಿಸಿದರು. ಈ ಸಂದರ್ಭ ಏಕಾಏಕಿ ಕಾಡಾನೆ ಅರ್ಜುನನ ಮೇಲೆ ಧಾಳಿ ಮಾಡಿತು.

ಈ ಸಂದರ್ಭ ಅರ್ಜುನನ ಹಿಂದೆ ಇದ್ದ ಇತರ ಐದೂ ಸಾಕಾನೆಗಳು ತಮ್ಮೊಂದಿಗಿದ್ದ ಸಿಬ್ಬಂದಿಗಳೊAದಿಗೆ ದೂರ ಓಡಿಹೋದವು.

ದಸರಾ ಗಜಪಡೆ ಪೈಕಿ ಅತ್ಯಂತ ತೂಕದವನಾಗಿದ್ದ ಮಾಜಿ ಕ್ಯಾಪ್ಟನ್

ಕಳೆದ ಅಕ್ಟೋಬರ್ ೨೪ ರಂದು ಮೈಸೂರು ದಸರಾದಲ್ಲಿ ಅರ್ಜುನನ ಕೊನೇ ಹೆಜ್ಜೆ ಗುರುತು ದಾಖಲಾಗಿದೆ. ಅಂಬಾರಿ ಹೊರುವ ಪ್ರತಿಷ್ಠಿತ ಕಾರ್ಯವನ್ನು ಕೊಡಗಿನ ಮತ್ತಿಗೋಡು ಸಾಕಾನೆ ಶಿಬಿರದ ಅಭಿಮನ್ಯುವಿಗೆ ಬಿಟ್ಟು ಕೊಟ್ಟಿದ್ದ ಅರ್ಜುನ ಅಂಬಾರಿ ಹೊರದೇ ಹೋದರೂ ಜಂಬೂಸವಾರಿಯಲ್ಲಿ ನಿಶಾನೆ ಆನೆಯಾಗಿ ಹೆಜ್ಜೆ ಹಾಕಿ ಗಮನ ಸೆಳೆಯುತ್ತಿದ್ದ. ಈ ಬಾರಿಯೂ ಮೈಸೂರು ದಸರಾದಲ್ಲಿ ಪಾಲ್ಗೊಂಡಿದ್ದ ೧೬ ಸಾಕಾನೆಗಳ ಪೈಕಿ ಮಾಜಿ ಕ್ಯಾಪ್ಟನ್ ಅರ್ಜುನನೇ ಹೆಚ್ಚು ತೂಕದೊಂದಿಗೆ ಬಲಶಾಲಿ ಎನಿಸಿಕೊಂಡಿದ್ದ. ಮೊದಲ ಹಂತದ ತೂಕದಲ್ಲಿ ೫೬೮೦ ಕೆಜಿ ಇದ್ದ ಅರ್ಜುನ, ಎರಡನೇ ಹಂತದ ತೂಕ ಪರೀಕ್ಷೆಯಲ್ಲಿ ೫೮೫೦ ಕೆಜಿ ತೂಕವನ್ನು ಹೊಂದುವ ಮೂಲಕ ಇಡೀ ಗಜಪಡೆಯ ಪೈಕಿ ತಾನೇ ಬಲಶಾಲಿ ಎಂಬುದನ್ನು ಸಾಬೀತುಪಡಿಸಿದ್ದ. ಇಂತಹ ದೈತ್ಯ ಬಲದ ಆನೆಯನ್ನು ಕಳೆದುಕೊಂಡಿದ್ದು, ಮೈಸೂರು ದಸರಾ ಪರಂಪರೆಗೆ ಭರಿಸಲಾಗದ ನಷ್ಟ ಎನಿಸಿದೆ. (ಮೊದಲ ಪುಟದಿಂದ) ಆಗ ಅರ್ಜುನ ಮತ್ತು ಒಂಟಿ ಸಲಗದ ನಡುವೆ ಕಾದಾಟ ನಡೆದಿದೆ. ಮಾವುತ ವೇಣುವಿಗೂ ಕೂಡ ನಿಯಂತ್ರಿಸಲಾಗದೆ ಆನೆಯಿಂದ ನೆಗೆದು ಸ್ಥಳದಿಂದ ಓಡಿಹೋಗಿದ್ದಾರೆ. ಒಂಟಿಸಲಗನ ದಾಳಿಗೆ ನಲುಗಿದ ಅರ್ಜುನ, ಸ್ಥಳದಲ್ಲಿಯೇ ಉಸಿರು ಚೆಲ್ಲಿದ್ದಾನೆ. ಕಾಡಾನೆಯು ಅರ್ಜುನನ ಹೊಟ್ಟೆ, ಪಕ್ಕೆಯ ಭಾಗಕ್ಕೆ ತೀವ್ರತರದಲ್ಲಿ ದಂತದಿAದ ತಿವಿದದ್ದೇ ೬೩ ವರ್ಷ ಪ್ರಾಯದ ಹಿರಿಯ ಜೀವಿ ಕಂಗಾಲಾಗುವAತೆ ಮಾಡಿದ್ದಿರಬೇಕು. ಹೀಗಾಗಿಯೇ ತೀವ್ರ ರಕ್ತಸ್ರಾವದಿಂದ ಮತ್ತು ಗಾಯದಿಂದ ಆದ ನೋವು ತಡೆಯಲಾರದೇ ಕುಸಿದು ಬಿದ್ದ ಅರ್ಜುನ ಜೋರಾಗಿ ಘೀಳಿಡುತ್ತಾ ಕೊನೆ ಉಸಿರು ಎಳೆದಿದ್ದಾನೆ.

ಅಧಿಕಾರಿಗಳು ‘ಶಕ್ತಿ’ಗೆ ಹೇಳಿದ್ದೇನು?

ಬೆಳಿಗ್ಗೆ ಕಾಡಾನೆ ಸೆರೆ ಕಾರ್ಯಾಚರಣೆಗೆ ತೆರಳಿದ್ದೆವು. ಕಾಡಾನೆಗಳು ಇದ್ದ ಗುಂಪಿನಲ್ಲಿ ಒಂದೇ ಒಂದು ಗಂಡಾನೆ ಇತ್ತು. ಗುಂಪಿನಲ್ಲಿದ್ದ ಇತರ ಹೆಣ್ಣಾನೆಗಳನ್ನು ಸಂರಕ್ಷಿಸಲು ಒಂಟಿ ಆನೆ ಮುಂದಾಗಿ ಎದುರಿಗೆ ಬಂದ ಅರ್ಜುನನ ಮೇಲೇ ಧಾಳಿ ಮಾಡಿದೆ. ಇದರಿಂದ ಒಂದು ಕ್ಷಣ ಸ್ಥಳದಿಂದ ಹಿಮ್ಮೆಟ್ಟಿದ್ದ ಅರ್ಜುನ, ಕೂಡಲೇ ಚೇತರಿಸಿಕೊಂಡದ್ದಲ್ಲದೇ, ತನ್ನ ಮೇಲೆ ಧಾಳಿ ಮಾಡಿದ ಗಂಡು ಕಾಡಾನೆ ಮೇಲೆ ಪ್ರತೀಕಾರ ತೀರಿಸಿಕೊಳ್ಳುವಂತೆ ಮರುಧಾಳಿ ಪ್ರಾರಂಭಿಸಿದ.

ಈ ವೇಳೆ ಅರ್ಜುನನ ಮೇಲೆ ಕುಳಿತಿದ್ದ ಅರಣ್ಯ ಇಲಾಖೆಯ ವೈದ್ಯಾಧಿಕಾರಿ ಡಾ. ರಮೇಶ್, ಅರ್ಜುನನ ಮಾವುತ ವೇಣು ಕೂಡ ನೆಲಕ್ಕೆ ಬಿದ್ದರು. ಅರ್ಜುನ ಮತ್ತು ಕಾಡಾನೆಗಳ ಕಾದಾಟ ಹೇಗಿತ್ತೆಂದರೆ ಎಸಳೂರು ಎಸ್ಟೇಟ್ ನಲ್ಲಿದ್ದ ಎರಡು ಎಕ್ರೆಗಳಷ್ಟು ಜಾಗದಲ್ಲಿನ ಮರಗಿಡಗಳೂ ನೆಲಕಚ್ಚಿವೆ. ಎರಡೂ ಮದಗಜಗಳು ಧೂಳೆಬ್ಬಿಸುತ್ತಾ ಹೋರಾಟ ಮಾಡಿದವಾದರೂ ಅಂತಿಮವಾಗಿ ಕಾಡಾನೆಯ ಧಾಳಿಗೆ ಅರ್ಜುನ ತೀವ್ರ ಗಾಯಗೊಂಡ ಸ್ಥಿತಿಯಲ್ಲಿ ನೆಲಕ್ಕೆ ಬಿದ್ದು ಅಲ್ಲಿಯೇ ಕೊನೆ ಉಸಿರೆಳೆದ. ಇದೊಂದು ದುರಂತ ಘಟನೆಯಾಗಿದ್ದು ಅರಣ್ಯ ಇಲಾಖೆಗೇ ಆಘಾತ ನೀಡಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಯೋರ್ವರು ‘ಶಕ್ತಿ’ಗೆ ತಿಳಿಸಿದರು.

ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ೩೦ ರಷ್ಟು ಸಂಖ್ಯೆಯಲ್ಲಿದ್ದ ಅರಣ್ಯ ಸಿಬ್ಬಂದಿಗಳು ಕೂಡ ಅರ್ಜುನನ ಹಠಾತ್ ಅಗಲಿಕೆಗೆ ಮಮ್ಮಲ ಮರುಗುತ್ತಿದ್ದಾರೆ. ಎಸಳೂರು ಎಸ್ಟೇಟ್ ನಲ್ಲಿ ಶೋಕದ ವಾತಾವರಣವೇ ಕಂಡುಬAದಿದ್ದು ಇಲ್ಲಿ ಮಾತ್ರವಲ್ಲದೇ ಮೈಸೂರು ದಸರಾ ಸಂದರ್ಭ ಅರ್ಜುನನ ಗತ್ತುಗೈರತ್ತು ಪ್ರತ್ಯಕ್ಷ ಕಂಡಿದ್ದ ಅಧಿಕಾರಿಗಳು, ರಾಜಕಾರಣಿಗಳು, ಜನತೆ ಕೂಡ ಅರ್ಜುನನ ಸಾವಿಗೆ ಶೋಕ ವ್ಯಕ್ತಪಡಿಸುತ್ತಿದ್ದಾರೆ.

ಕೊಡಗು - ಹಾಸನ ಗಡಿಯಲ್ಲಿ ಮಿತಿಮೀರಿರುವ ಕಾಡಾನೆ ಹಾವಳಿ ತಡೆಗೆ ಅರಣ್ಯ ಇಲಾಖೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ ಅವುಗಳ ಚಲನ ವಲನಗಳ ಮೇಲೆ ನಿಗಾ ಇಡುವ ಕೆಲಸವನ್ನೂ ಮಾಡುತ್ತಿದೆ. ಕೆಲ ದಿನಗಳ ಹಿಂದಷ್ಟೇ ಬೇಲೂರು ತಾಲೂಕಿನ ಅರೇಹಳ್ಳಿ ಬಳಿಯ ಅಣ್ಣಾಮಲೈ ಎಸ್ಟೇಟ್‌ನಲ್ಲಿ ಮತ್ತು ಬೇಲೂರು ತಾಲೂಕಿನ ವಳಲು ಗ್ರಾಮದಲ್ಲಿ ಎರಡು ಕಾಡಾನೆಗಳನ್ನು ಸೆರೆಹಿಡಿಯಲಾಗಿತ್ತು. ಆದರೆ ಸೋಮವಾರ ಎಸಳೂರು ಎಸ್ಟೇಟ್‌ನಲ್ಲಿ ಮತ್ತೊಂದು ಕಾಡಾನೆ ಸೆರೆಗೆ ಕಾರ್ಯಾಚರಣೆ ಕೈಗೊಂಡಿದ್ದ ಅರಣ್ಯ ಇಲಾಖೆಗೆ ಈ ಕಾರ್ಯಾಚರಣೆ ತುಂಬಲಾರದ ನಷ್ಟವನ್ನು ಅರ್ಜುನನ ಸಾವಿನ ಮೂಲಕ ತಂದಿದೆ.

ಹತ್ತು ದಿನದಿಂದ ಹಾಸನ ಜಿಲ್ಲೆಯಲ್ಲಿ ಆನೆಗಳ ಸೆರೆ ಕಾರ್ಯಾಚರಣೆ ನಡೆಯುತ್ತಿದೆ. ಈವರೆಗೂ ಐದು ಆನೆಗಳನ್ನು ಸೆರೆ ಹಿಡಿದಿದ್ದೇವೆ. ಎಲ್ಲಾ ಕಾರ್ಯಾಚರಣೆಯಲ್ಲಿ ಅರ್ಜುನ ಆನೆ ಪಾಲ್ಗೊಂಡಿತ್ತು. ಕಾರ್ಯಾಚರಣೆಯಲ್ಲಿದ್ದ ಇತರ ಆನೆಗಳಿಗೆ ಅರ್ಜುನನ ಹಾಜರಿಯೇ ಬಲ ತಂದಿತ್ತು. ಅರ್ಜುನ ಆನೆಯ ಸಾವು ಆಘಾತ ತಂದಿದೆ ಎಂದು ಹಾಸನ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಂ.ರವಿಶAಕರ್ ಹೇಳಿಕೆ ನೀಡಿದ್ದಾರೆ.

ಅರ್ಜುನ ಕೇವಲ ಆನೆ ಮಾತ್ರವೇ ಆಗಿರಲಿಲ್ಲ

ಅರ್ಜುನನ ಅಗಲಿಕೆಗೆ ರಾಜ್ಯ ಸರ್ಕಾರ ಸೇರಿದಂತೆ ಅನೇಕರು ಶೋಕ ವ್ಯಕ್ತಪಡಿಸುತ್ತಿದ್ದಾರೆ. ಅರ್ಜುನನ ಸಾವು ಕೇವಲ ಆನೆಯೊಂದರ ಕಣ್ಮರೆ ಮಾತ್ರ ಆಗಿರಲಿಲ್ಲ. ಮೈಸೂರಿನ ವಿಶ್ವವಿಖ್ಯಾತ ನಾಡಹಬ್ಬ ದಸರಾದಲ್ಲಿ ಒಂದಲ್ಲ ಎರಡಲ್ಲ ಸತತವಾಗಿ ೮ ವರ್ಷಗಳ ಕಾಲ ತಾಯಿ ಚಾಮುಂಡೇಶ್ವರಿಯ ಚಿನ್ನದ ಅಂಬಾರಿ ಹೊತ್ತು, ತನ್ನದೇ ಗತ್ತಿನಿಂದ ಜಂಬೂಸವಾರಿಯಲ್ಲಿ ಹೆಜ್ಜೆ ಹಾಕುತ್ತಿದ್ದ ಅರ್ಜುನ ಕನ್ನಡನಾಡಿನ ಹೆಮ್ಮೆ ಮತ್ತು ಪ್ರತಿಷ್ಠೆಯ ಗಜನಾಗಿದ್ದ.

ದಸರಾ ಆನೆಗಳಿಗೆ ಕಾಡಾನೆ ತಿವಿತವೇ ಕಂಟಕ

೧೪ ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಬಲರಾಮ (೬೭) ಆನೆಯು ಈ ವರ್ಷದ ಮೇ ತಿಂಗಳಲ್ಲಿ ಮೃತಪಟ್ಟಿತ್ತು. ಸೌಮ್ಯ ಸ್ವಭಾವದ ಬಲರಾಮನ ಬಾಯಲ್ಲಿ ಹುಣ್ಣಾಗಿತ್ತು. ೧೦ ದಿನಗಳ ಕಾಲ ನೋವಿನಿಂದ ಬಳಲುತ್ತಿದ್ದ ಬಲರಾಮ ಆನೆಗೆ ಕೊನೆಯ ದಿನಗಳಲ್ಲಿ ಆಹಾರ ಸೇವನೆ ಕಷ್ಟವಾಗುತ್ತಿತ್ತು. ನಾಗರಹೊಳೆ ಉದ್ಯಾನದ ಹುಣಸೂರು ರೇಂಜ್‌ನ ಭೀಮನಕಟ್ಟೆ ಆನೆ ಶಿಬಿರದಲ್ಲಿ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಿಸದೆ ಬಲರಾಮ ಅಲ್ಲಿಯೇ ಕೊನೆಯುಸಿರೆಳೆದಿತ್ತು. ಅರ್ಜುನ ಆನೆಯ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ಕೆಲ ವರ್ಷದ ಹಿಂದೆ ದ್ರೋಣ ಎಂಬ ಅಂಬಾರಿ ಆನೆ ವಿದ್ಯುತ್ ತಂತಿ ತಗುಲಿ ಕಾಡಿನಲ್ಲಿ ಮೃತಪಟ್ಟಿತ್ತು. ಆನಂತರ ಶ್ರೀರಾಮ ಎಂಬ ಆನೆ ಸಂಗಾತಿ ಗಜೇಂದ್ರ ಆನೆ ತಿವಿತದಿಂದ ಮೃತಪಟ್ಟಿತ್ತು. ಗೋಪಾಲಸ್ವಾಮಿ ಎಂಬ ಆನೆಯೂ ಇದೇ ರೀತಿ ಕಾಡಾನೆ ತಿವಿತದಿಂದ ದುರಂತವಾಗಿ ಅಂತ್ಯ ಕಂಡಿತ್ತು. ಈಗ ಅಂಬಾರಿ ಹೊತ್ತಿದ್ದ ಮತ್ತೊಂದು ಆನೆಯಾಗಿದ್ದ ಅರ್ಜುನನ ದುರಂತ ಅಂತ್ಯವಾಗಿದೆ.

ಪ್ರಜ್ಞಾಹೀನನಾದ ಮಾವುತ

ಸಾಮಾನ್ಯವಾಗಿ ಸಾಕಾನೆ ಮತ್ತು ಅದನ್ನು ನೋಡಿಕೊಳ್ಳುವ ಮಾವುತ, ಕಾವಾಡಿಗಳ ನಡುವೆ ಬಹಳ ಉತ್ತಮ ಬಾಂಧವ್ಯ ಇರುತ್ತದೆ. ಮಾವುತನ ಸಂಜ್ಞೆಯನ್ನು ಮೂಕಜೀವಿಯಾದ ದೈತ್ಯಕಾಯದ ಆನೆ ಶಿರಸಾ ಪಾಲಿಸುತ್ತದೆ. ಹೀಗಿರುವಾಗ ಕಳೆದ ೧೪ ವರ್ಷಗಳಿಂದ ಅರ್ಜುನನ ಮಾವುತನಾಗಿರುವ ವೇಣು ಎಸಳೂರು ಎಸ್ಟೇಟ್ ನಲ್ಲಿ ಕಾಡಾನೆ ಧಾಳಿ ನಡೆದ ಸಂದರ್ಭ ತನ್ನ ಪ್ರೀತಿಯ ಅರ್ಜುನನ ಶಿರದ ಬಳಿಯೇ ಕುಳಿತುಕೊಂಡಿದ್ದ. ಪ್ರಥಮ ಬಾರಿ ಕಾಡಾನೆ ಧಾಳಿ ಮಾಡಿದಾಗ ಅರ್ಜುನನಿಗೆ ಏನನ್ನಿಸಿತೋ. ತನ್ನ ಮೇಲಿದ್ದ ವೇಣು ಮತ್ತು ವೈದ್ಯಾಧಿಕಾರಿ ಡಾ.ರಮೇಶ್ ಅವರನ್ನು ಮೆಲ್ಲನೆ ಕೆಡವಿದ್ದಾನೆ. ಅರ್ಜುನನ ಮೇಲಿನಿಂದ ಗಾಯಗಳಾಗದ ರೀತಿಯಲ್ಲಿ ನಾಜೂಕಾಗಿ ಕೆಳಕ್ಕೆ ಇವರೀರ್ವರು ಬಿದ್ದಿದ್ದಾರೆ. ಇವರು ತನ್ನ ಮೇಲೆ ಕುಳಿತಿಲ್ಲ ಎಂಬುದನ್ನು ಖಚಿತಪಡಿಸಿಕೊಂಡಿದ್ದೇ ಅರ್ಜುನ ಮೈಕೊಡವಿ ಮತ್ತೆ ಕಾಡಾನೆ ವಿರುದ್ಧ ಧಾಳಿಗೆ ಸಜ್ಜಾಗಿದ್ದಾನೆ. ಅಕಸ್ಮಾತ್ ವೈದ್ಯ ಮತ್ತು ಮಾವುತ ತನ್ನ ಮೇಲೆ ಕುಳಿತಿದ್ದರೆ ಕಾಡಾನೆ ಧಾಳಿ ನಡೆಸಿದಾಗ ಅವರ ಜೀವಕ್ಕೆ ಸಮಸ್ಯೆಯಾಗುತ್ತಿತ್ತು ಎಂಬ ಯೋಚನೆ ಅರ್ಜುನನಿಗೆ ಬಂದಿರಬಹುದೇ. ಹೀಗಾಗಿಯೇ ಅವರನ್ನು ಕೆಡವಿದ ನಂತರವೇ ಪ್ರತೀಕಾರದ ರೂಪದಲ್ಲಿ ಎದುರಾಳಿ ಕಾಡಾನೆ ವಿರುದ್ಧ ಸಮರಕ್ಕೆ ಮುಂದಾದನೇ.?

ಈ ನಡುವೇ ಮದಗಜಗಳ ಕಾದಾಟದಿಂದ ಗಾಬರಿಯಾದ ವೇಣು ಯಾವಾಗ ಅರ್ಜುನ ತನ್ನ ನಿಯಂತ್ರಣಕ್ಕೆ ಸಿಕ್ಕುವುದಿಲ್ಲ ಎಂದು ಗೊತ್ತಾಯಿತೋ ದೂರಕ್ಕೆ ಓಡಿ ಹೋಗಿದ್ದಾನೆ. ಆದರೆ, ಕೆಲ ನಿಮಿಷಗಳಲ್ಲಿಯೇ ಅರ್ಜುನನ ಜೋರಾದ ಘೀಳು ಕೇಳಿ ಓಡೋಡಿ ಕಾಫಿ ತೋಟದೊಳಕ್ಕೆ ನುಗ್ಗಿ ಬಂದಿದ್ದಾನೆ. ಆಗ ಕಂಡದ್ದೇ ರಕ್ತಸ್ರಾವದಲ್ಲಿ ಮಲಗಿರುವ ತನ್ನ ನೆಚ್ಚಿನ ಅರ್ಜುನನ ದೇಹ.

ಯಾವಾಗ ಅರ್ಜುನ ಸಾವನ್ನಪ್ಪಿದ್ದಾನೆ ಎಂದು ಮಾವುತ ವೇಣುವಿಗೆ ಅರಿವಾಯಿತೋ ಆ ಕ್ಷಣದಲ್ಲಿಯೇ ವೇಣು ಕೂಡ ಪ್ರಜ್ಞಾಹೀನನಾಗಿದ್ದಾನೆ. ಕೆಲಹೊತ್ತಿನ ನಂತರ ಸ್ಥಳಕ್ಕೆ ಬಂದ ಅರಣ್ಯ ಕಾರ್ಯಪಡೆ ಸಿಬ್ಬಂದಿಗಳು ವೇಣುವಿಗೆ ನೀರು ಸಿಂಪಡಿಸಿ ಆರೈಕೆ ಮಾಡಿದ್ದಾರೆ. ಅರ್ಜುನ ಇನ್ನಿಲ್ಲ ಎಂಬುದು ವೇಣು ಪಾಲಿಗೆ ಎಂದಿಗೂ ಅರಗಿಸಿಕೊಳ್ಳಲಾಗದ ಕಟು ವಾಸ್ತವದಂತಿದೆ.

ಅದೆAಥ ಕೋಪಿಷ್ಠ ಈ ಅರ್ಜುನ

ಮೈಸೂರು ದಸರಾ ಗಜಪಡೆಗಳಲ್ಲಿ ಕೋಪತಾಪಕ್ಕೆ ಅರ್ಜುನ ಫೇಮಸ್. ಬಹಳ ಬೇಗನೇ ಅರ್ಜುನ ತಾಳ್ಮೆ ಕೆಟ್ಟು ಕೋಪಿಷ್ಠನಾಗುತ್ತಿದ್ದ. ಹೀಗಾಗಿಯೇ ಮಾವುತ ವೇಣು ಸದಾ ಈತನೊಂದಿಗೆ ಇದ್ದು ಕೋಪ ಬಂದಾಗಲೆಲ್ಲಾ ಸಂತೈಸುತ್ತಿದ್ದ.

ಇನ್ನು ಕೋಪ ತಣಿಸಲು ವೇಣು ಪಾಲಿಗೆ ಅರ್ಜುನ ಇಲ್ಲವೇ ಇಲ್ಲ. ಸದ್ಯಕ್ಕೆ ಸಕಲೇಶಪುರ ವ್ಯಾಪ್ತಿಯಲ್ಲಿ ಕಾಡಾನೆ ಕಾರ್ಯಾಚರಣೆ ಕೂಡ ಸ್ಥಗಿತಗೊಂಡಿದೆ. ಹಿಂಡಿನಲ್ಲಿದ್ದ ಹೆಣ್ಣಾನೆಗಳನ್ನು ಸಂರಕ್ಷಿಸಲು ಗುಂಪಿನಲ್ಲಿದ್ದ ಏಕೈಕ ಗಂಡಾನೆ ಮುಂದಾಗಿದ್ದರಿAದಲೇ ಈ ದುರ್ಘಟನೆ ಸಂಭವಿಸಿದೆ. ಹೆಣ್ಣಾನೆ ಮತ್ತು ಮರಿಗಳ ರಕ್ಷಣೆಗೆ ಗಂಡಾನೆಗಳು ಸದಾ ಎಚ್ಚರಿಕೆ ವಹಿಸುತ್ತದೆ. ಹೀಗಾಗಿಯೇ ಕಾಡಾನೆ ತನ್ನ ಎದುರಾಳಿಯಾಗಿ ಸೆರೆ ಹಿಡಿಯಲು ಬಂದಿದ್ದ ಅರ್ಜುನನ ಮೇಲೆ ಧಾಳಿ ನಡೆಸಿರಬೇಕೆಂದು ಅಂದಾಜಿಸಲಾಗಿದೆ.