ವಾಸು ಎ.ಎನ್.

ಸಿದ್ದಾಪುರ, ಡಿ. ೪ : ಕಾಡಾನೆಗಳು ಹಾಗೂ ಕಾಡುಕೋಣಗಳು ಕಾಫಿ ತೋಟಗಳಲ್ಲಿ ದಾಂಧಲೆ ನಡೆಸುತ್ತಿರುವ ಪರಿಣಾಮ ತೋಟಗಳು ಮೈದಾನದಂತಾಗಿವೆ. ಸಿದ್ದಾಪುರ ಸಮೀಪದ ಕರಡಿಗೋಡಿನ ಕಂಬೀರAಡ ನಂದಾ ಗಣಪತಿರವರಿಗೆ ಸೇರಿದ ಕಾಫಿ ತೋಟಗಳಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಕಾಡಾನೆಗಳು ಹಾಗೂ ಕಾಡು ಕೋಣಗಳು ಬೀಡುಬಿಟ್ಟು ಕಾಫಿ ತೋಟದೊಳಗೆ ದಾಂಧಲೆ ನಡೆಸುತ್ತಿದೆ ಎಂದು ನಂದಾ ಗಣಪತಿ ತಿಳಿಸಿದ್ದಾರೆ.

ವನ್ಯ ಪ್ರಾಣಿಗಳ ದಾಂಧಲೆಯಿAದಾಗಿ ಫಸಲಿರುವ ೩೦೦ಕ್ಕೂ ಅಧಿಕ ಕರಿಮೆಣಸು ಬಳ್ಳಿಗಳು ಹಾಗೂ ನೂರಕ್ಕೂ ಅಧಿಕ ಫಸಲಿರುವ ಕಾಫಿ ಗಿಡಗಳು ಹಾಗೂ ಫಸಲಿರುವ ೮೦ಕ್ಕೂ ಅಧಿಕ ಅಡಿಕೆ ಮರಗಳು, ೨೫೦ಕ್ಕೂ ಅಧಿಕ ಅಡಿಕೆ ಗಿಡಗಳನ್ನು ಎಳೆದು ಹಾಕಿ ತುಳಿದು ತಿಂದು ಧ್ವಂಸಗೊಳಿಸಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ಫಸಲು ನಾಶಗೊಂಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ದಿನನಿತ್ಯ ಮರಿಯಾನೆಗಳು ಸೇರಿದಂತೆ ೧೫ಕ್ಕೂ ಅಧಿಕ ಕಾಡಾನೆಗಳು ರಾತ್ರಿ ಸಮಯದಲ್ಲಿ ಕರಡಿಗೋಡು ಗ್ರಾಮದ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿವೆ. ಕಾಡಾನೆಗಳ ಹಾವಳಿಯಿಂದಾಗಿ ಕಾಫಿ ತೋಟಗಳು ಮೈದಾನದಂತಾಗಿದ್ದು ಕೈಯಿಗೆ ಬಂದ ತುತ್ತು ಬಾಯಿಗೆ ಬಾರದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಜೀವನ ದುಸ್ತರವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಕಾಫಿ ತೋಟಗಳಲ್ಲಿ ರಾಜಾರೋಷವಾಗಿ ಕಾಡಾನೆಗಳು ಸುತ್ತಾಡುತ್ತಿರುವ ಹಿನ್ನೆಲೆಯಲ್ಲಿ ಕಾರ್ಮಿಕರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೇ ಕಾಡಾನೆಗಳು ಕಾಫಿ ಹಣ್ಣುಗಳನ್ನು ಕೂಡ ಸೇವಿಸುತ್ತಿದ್ದು ಹಣ್ಣಿನ ರಸವನ್ನು ಹೀರುತ್ತಿವೆ. ಲದ್ದಿಗಳಲ್ಲಿ ಕಾಫಿ ಬೀಜಗಳು ಕಂಡು ಬರುತ್ತಿವೆ. ಕಾಡಾನೆಗಳ ಹಾವಳಿಗೆ ಶಾಶ್ವತ ಯೋಜನೆ ರೂಪಿಸಬೇಕು ಹಾಗೂ ನಷ್ಟಗೊಂಡಿರುವ ರೈತರಿಗೆ ಅರಣ್ಯ ಇಲಾಖೆಯಿಂದ ಕೂಡಲೇ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಬೆಳೆ ನಷ್ಟಗೊಂಡಿರುವ ರೈತರುಗಳು ಈಗಾಗಲೇ ಅರಣ್ಯ ಇಲಾಖೆಗೆ ಪರಿಹಾರ ಕೋರಿ ಮನವಿ ಪತ್ರ ಸಲ್ಲಿಸಿದ್ದಾರೆ.

ಕೋತಿಗಳ ಹಾವಳಿ : ಕಾಡುಕೋಣಗಳ ಹಾಗೂ ಕಾಡಾನೆಗಳ ಹಾವಳಿಯೊಂದಿಗೆ ವಾನರಗಳ ಹಾವಳಿಯೂ ಮಿತಿಮೀರಿದ್ದು, ಕಾಫಿ ತೋಟದೊಳಗೆ ಬೀಡುಬಿಟ್ಟಿರುವ ಕೋತಿಗಳ ಹಿಂಡು ಕರಿಮೆಣಸು ಫಸಲುಗಳನ್ನು ಹಾನಿಗೊಳಿಸುತ್ತಾ ಕಾಫಿ ಫಸಲುಗಳನ್ನು ನಾಶಗೊಳಿಸುತ್ತಿವೆ. ಹಣ್ಣುಹಂಪಲುಗಳ ಮರಗಳಲ್ಲಿ ಜೋತಾಡುತ್ತಾ ಗುಂಪು ಗುಂಪಾಗಿ ಹಿಂಡುಗಳು ತೋಟಗಳಲ್ಲಿ ದಾಳಿ ನಡೆಸಿ ಹಾನಿಗೊಳಿಸುತ್ತಿದ್ದು ಇದರಿಂದಾಗಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆAದು ನಂದಾ ಗಣಪತಿ ತಿಳಿಸಿದ್ದಾರೆ.

ಕಾರ್ಯರೂಪಕ್ಕೆ ಬಾರದ ಸಚಿವರ ಭರವಸೆ

ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ ರಾಜ್ಯ ಅರಣ್ಯ ಸಚಿವ ಈಶ್ವರ್ ಭೀಮಣ್ಣ ಖಂಡ್ರೆ ಅವರು ಜಿಲ್ಲೆಯಲ್ಲಿ ಉಪಟಳ ನೀಡುವ ೨೦೦ ಕಾಡಾನೆಗಳನ್ನು ಸ್ಥಳಾಂತರ ಮಾಡುವ ಭರವಸೆ ನೀಡಿದ್ದು, ಯಾವುದೇ ಶಾಶ್ವತ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ. ಜಿಲ್ಲೆಯಲ್ಲಿ ಮಿತಿಮೀರಿದ ಕಾಡಾನೆಗಳ ಹಾವಳಿಯಿಂದಾಗಿ ಭತ್ತದ ಕೃಷಿಕರಿಗೆ, ಕಾಫಿ ಬೆಳೆಗಾರರಿಗೆ ನೆಮ್ಮದಿ ಇಲ್ಲದಂತಾಗಿದ್ದು ಬೆಳೆಗಾರರು ಮರದ ಮೇಲೆ ಅಟ್ಟಣಿ ನಿರ್ಮಿಸಿಕೊಂಡು ತಮ್ಮ ಬೆಳೆಗಳನ್ನು ರಕ್ಷಿಸಲು ರಾತ್ರಿ ನಿದ್ದೆಬಿಟ್ಟು ಕಾಯುವಂತ ಪರಿಸ್ಥಿತಿ ಮುಂದುವರಿಯುತ್ತಿರುವುದು ದುರದೃಷ್ಟಕರವಾಗಿದೆ. ಜಿಲ್ಲೆಯಲ್ಲಿ ವನ್ಯಜೀವಿಗಳ ಹಾವಳಿಗೆ ಶಾಶ್ವತ ಯೋಜನೆ ಮರೀಚಿಕೆಯಾಗಿದ್ದು ಈ ಬಗ್ಗೆ ಹೋರಾಟ ಮಾಡಬೇಕಾದ ಸಂಘ-ಸAಸ್ಥೆಗಳು ಕೂಡ ಮೌನವಾಗಿವೆ.