ಮಡಿಕೇರಿ, ಡಿ. ೪: ಮುಜರಾಯಿ ಇಲಾಖೆಯಡಿಯಲ್ಲಿ ಬರುವ ರಾಜ್ಯದ ಹಾಗೂ ಹೊರರಾಜ್ಯದ ಕೆಲ ಪ್ರಮುಖ ದೇವಸ್ಥಾನಗಳ ದರ್ಶನಕ್ಕೆ ತೆರಳುವ ಪ್ರವಾಸಿಗರ ಅನುಕೂಲಕ್ಕಾಗಿ ಸರಕಾರಿ ವೆಬ್‌ಸೈಟ್ hಣಣಠಿs://ಞಚಿಡಿಟಿಚಿಣಚಿಞಚಿಣemಠಿಟesಚಿಛಿಛಿommoಜಚಿಣioಟಿ.ಛಿom ಸಹಕಾರಿಯಾಗಿದೆ. ಇತ್ತೀಚೆಗಷ್ಟೆ ಈ ವೆಬ್‌ಸೈಟ್ ಅನ್ನು ಧಾರ್ಮಿಕ ದತ್ತಿ ಹಾಗೂ ಮುಜರಾಯಿ ಇಲಾಖೆಯಿಂದ ಸಾರ್ವಜನಿಕ ಸೇವೆಗೆಂದು ಲೋಕಾರ್ಪಣೆಗೊಳಿಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಮುಜರಾಯಿ ಇಲಾಖೆಯಡಿಯಲ್ಲಿ ಬರುವ ದೇವಾಲಯಗಳಿಗೆ ತೆರಳುವ ಭಕ್ತಾದಿಗಳಿಗೆ ದೇವಾಲಯದ ಸಮೀಪವೇ ಇರುವ ಧಾರ್ಮಿಕ ದತ್ತಿ ಇಲಾಖೆಯಡಿಯ ಕರ್ನಾಟಕ ರಾಜ್ಯ ವಸತಿ ಗೃಹಗಳನ್ನು ಆನ್‌ಲೈನ್ ಮೂಲಕ ಕಾಯ್ದಿರಿಸಲು ಈ ವೆಬ್‌ಸೈಟ್ ಸಹಕಾರಿಯಾಗಲಿದೆ. ಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಸಾಧಾರಣ ಅಥವಾ ಹವಾನಿಯಂತ್ರಿತ ಕೊಠಡಿಗಳನ್ನು ಭಕ್ತಾದಿಗಳು ವೆಬ್‌ಸೈಟ್ ಮೂಲಕ ಸುಲಭವಾಗಿ ಕಾಯ್ದಿರಿಸುವ ಅವಕಾಶವನ್ನು ಕಲ್ಪಿಸಲಾಗಿದೆ. ವೆಬ್‌ಸೈಟ್‌ನಲ್ಲಿ ಮೊದಲಿಗೆ ಭಕ್ತಾದಿಗಳು ತಮ್ಮ ಇ-ಮೇಲ್ ಐ.ಡಿ ಮೂಲಕ ಲಾಗಿನ್ ಆಗಿ ಕಾಯ್ದಿರಿಸಬೇಕಾದ ಕೊಠಡಿಗಳ ಸಂಖ್ಯೆ ಹಾಗೂ ದಿನಾಂಕವನ್ನು ನಮೂದಿಸಿ ಇತರ ಮಾಹಿತಿಗಳನ್ನು ನೀಡಿದರೆ ಸುಸೂತ್ರವಾಗಿ ಕೊಠಡಿಗಳನ್ನು ಕಾಯ್ದಿರಿಸಬಹುದಾಗಿದೆ. ವೆಬ್‌ಸೈಟ್‌ನಲ್ಲಿ ಕೊಠಡಿ ಕಾಯ್ದಿರಿಸುವಾಗ ದೇವಾಲಯದ ಬಗ್ಗೆ, ವಸತಿಗೃಹದ ಬಗ್ಗೆ, ಕೊಠಡಿಗಳ ಚಿತ್ರ, ವಸತಿಗೃಹದ ವಿಳಾಸ ಹಾಗೂ ನಕ್ಷೆಯ ಬಗ್ಗೆಯೂ ಮಾಹಿತಿ ಒದಗಲಿದೆ. ಆಂಗ್ಲ ಭಾಷೆ ಹಾಗೂ ಕನ್ನಡದಲ್ಲಿ ಸೇವೆ ಲಭ್ಯವಿದೆ.

ಸೆಪ್ಟೆಂಬರ್‌ನಲ್ಲಿಯೇ ಈ ವೆಬ್‌ಸೈಟ್ ಸಾರ್ವಜನಿಕರ ಸೇವೆಗೆ ಲೋಕಾರ್ಪಣೆಗೊಂಡಿದ್ದು, ಈಗಾಗೇ ೨,೧೧೦ ಕೊಠಡಿಗಳನ್ನು ‘ಬುಕ್’ ಮಾಡುವ ಮೂಲಕ ಭಕ್ತಾದಿಗಳು ಇದರ ಸೇವೆ ಪಡೆದುಕೊಂಡಿದ್ದಾರೆ. ಸದ್ಯದ ಮಟ್ಟಿಗೆ ತಿರುಮಲ ದೇವಾಲಯದ ಹಾಗೂ ಉತ್ತರಪ್ರದೇಶದ ವಾರಣಾಸಿ ಕ್ಷೇತ್ರಗಳ ಸಮೀಪ ಕರ್ನಾಟಕ ರಾಜ್ಯ ವಸತಿ ಗೃಹಗಳ ಕಾಯ್ದಿರಿಸುವಿಕೆ ಚಾಲ್ತಿಯಲ್ಲಿದ್ದು, ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಹಾಗೂ ಮೈಸೂರಿನ ಚಾಮುಂಡೇಶ್ವರಿ ದೇವಾಲಯಗಳ ಬಳಿಯ ವಸತಿ ಸೌಲಭ್ಯ

(ಮೊದಲ ಪುಟದಿಂದ) ಕಾಯ್ದಿರಸುವಿಕೆ ಸದ್ಯದಲ್ಲಿಯೇ ಪ್ರಾರಂಭವಾಗಲಿದೆ.

ವೆಬ್‌ಸೈಟ್ ಸಂಪೂರ್ಣ ಕಾರ್ಯಾಚರಿಸುವಾಗ ಆಂಧ್ರಪ್ರದೇಶದ ಶ್ರೀಶೈಲ ಹಾಗೂ ಮಂತ್ರಾಲಯ, ಮಹರಾಷ್ಟçದ ತುಳಜಾಪುರ್, ತಮಿಳುನಾಡಿನ ತಿರುಚನೂರ್, ರಾಮನಗರದ ರೇವಣಸಿದ್ದೇಶ್ವರ ಸ್ವಾಮಿ ದೇವಾಲಯ, ಬಂಟ್ವಾಳದ ಶ್ರೀ ಪೊಳಲಿ ರಾಜರಾಜೇಶ್ವರಿ ದೇವಸ್ಥಾನ, ಕದ್ರಿ ಶ್ರೀ ಮಂಜುನಾಥ ದೇವಾಲಯ, ತುಮಕೂರಿನ ಶ್ರೀ ಲಕ್ಷಿö್ಮÃನರಸಿಂಹ ಸ್ವಾಮಿ ದೇವಾಲಯ, ರಾಮನಗರ ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಚಿತ್ರದುರ್ಗದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನ, ಬೆಂಗಳೂರು ಗ್ರಾಮಾಂತರದ ಶ್ರೀ ಘಾಟಿ ಸುಬ್ರಹ್ಮಣ್ಯ ದೇವಾಲಯ, ಉಡುಪಿ ಬ್ರಾಹ್ಮಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಬಪ್ಪನಾಡಿ ದುರ್ಗಾಪರಮೇಶ್ವರಿ ದೇವಾಲಯ, ಕೊಪ್ಪಳದ ಹುಲಿಗಮ್ಮ ದೇವಾಲಯ, ಮೈಸೂರಿನ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನ, ಬೆಳಗಾವಿ ಶ್ರೀ ರೇಣುಕಾ ಎಲ್ಲಮ್ಮ ದೇವಾಲಯ, ಉಡುಪಿ ಶ್ರೀ ಮೂಕಾಂಬಿಕಾ ದೇವಸ್ಥಾನ, ಕೊಟ್ಟೂರು ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನ, ಚಾಮರಾಜನಗರ ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನ ಹಾಗೂ ಉಡುಪಿ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಗಳಲ್ಲಿನ ವಸತಿ ಸೌಲಭ್ಯಗಳ ಕಾಯ್ದಿರಿಸುವಿಕೆ ಸಾಧ್ಯವಾಗಲಿದೆ.

ಮತ್ತೊಂದು ವೆಬ್‌ಸೈಟ್ hಣಣಠಿs://ಞಚಿಡಿಟಿಚಿಣಚಿಞಚಿಥಿಚಿಣಡಿಚಿs.ಛಿom/ ಮೂಲಕ ಕಾಶಿ ಯಾತ್ರೆ, ಚಾರ್‌ಧಾಮ್ ಯಾತ್ರೆ, ಕೈಲಾಸ ಮಾನಸ ಸರೋವರ ಯಾತ್ರೆ, ಕರ್ನಾಟಕ ಭಾರತ್ ಗೌರವ್ ಕಾಶಿ ಗಯಾ ಯಾತ್ರೆಗಳಿಗೆ ತೆರಳುವ ರಾಜ್ಯದ ಭಕ್ತಾದಿಗಳಿಗೆ ಸರಕಾರ ನೀಡುತ್ತಿರುವ ಸಹಾಯಧನದ ಬಗ್ಗೆ ವಿವರ ಪಡೆದು ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ.