ಕುಶಾಲನಗರ, ಡಿ. ೫: ಕೊಡಗು ಜಿಲ್ಲೆಯಲ್ಲಿ ನಿಯಮಬಾಹಿರವಾಗಿ ಟ್ಯಾಕ್ಸಿಗಳ ಮೂಲಕ ಪ್ರವಾಸಿಗರನ್ನು ಒಯ್ಯುವ ವ್ಯವಸ್ಥೆಗೆ ಜಿಲ್ಲಾಡಳಿತ ಕೂಡಲೇ ಕಡಿವಾಣ ಹಾಕಬೇಕು ಎಂದು ಕರ್ನಾಟಕ ಟ್ಯಾಕ್ಸಿ ಡ್ರೈವರ್ ಆರ್ಗನೈಸೇಷನ್ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ಗುಡ್ಡೆ ಹೊಸೂರು ಬಳಿ ನಡೆದ ಸಂಸ್ಥೆಯ ಕೊಡಗು ಜಿಲ್ಲಾ ಸಮ್ಮೇಳನ ಮತ್ತು ಕುಶಾಲನಗರ ತಾಲೂಕು ಸಮಿತಿಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಟ್ಯಾಕ್ಸಿ ಡ್ರೈವರ್ ಆರ್ಗನೈಸೇಷನ್ ಕೊಡಗು ಜಿಲ್ಲಾ ಅಧ್ಯಕ್ಷ ಎಂ.ಜೆ. ವಿನೋದ್; ಯಾವುದೇ ತೆರಿಗೆ ಪಾವತಿಸದೆ ವೈಟ್ ಬೋರ್ಡ್ ವಾಹನಗಳು ರಾಜಾರೋಷವಾಗಿ ಪ್ರಯಾಣಿಕರನ್ನು ಸಾಗಾಟ ಮಾಡುತ್ತಿರುವ ಕಾರಣ ತಮ್ಮ ಸದಸ್ಯರ ಜೀವನೋಪಾಯಕ್ಕೆ ತೊಂದರೆ ಉಂಟಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಅಕ್ರಮವಾಗಿ ಪ್ರವಾಸಿಗರಿಗೆ ಬೈಕ್‌ಗಳನ್ನು ನೀಡುವ ಜಾಲ ಹೆಚ್ಚಳವಾಗಿದೆ ಎಂದು ಹೇಳಿದರು. ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ಮಾಡಿ ಅಕ್ರಮ ವಾಹನಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಕ್ಷೇತ್ರದ ಶಾಸಕರು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ಹಿನ್ನೆಲೆಯಲ್ಲಿ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂಥರ್ ಗೌಡ ಪ್ರತಿಕ್ರಿಯಿಸಿ ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅಕ್ರಮಗಳಿಗೆ ಕಡಿವಾಣ ಹಾಕಲಾಗುವುದು. ಜಿಲ್ಲೆಯಲ್ಲಿ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಕಲ್ಪಿಸಲಾಗುವುದು ಎಂದು ಹೇಳಿದರು. ವಾಹನ ಚಾಲಕರು ತಾಳ್ಮೆಯೊಂದಿಗೆ ನಿಯಮಾನುಸಾರ ಕರ್ತವ್ಯ ನಿರ್ವಹಿಸುವಂತೆ ಸಲಹೆ ನೀಡಿದರು.

ಕೆಟಿಡಿಓ ದಕ್ಷಿಣ ಭಾರತ ಸಮಿತಿಯ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಅವರು ಮಾತನಾಡಿ, ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿ ಹೊರ ರಾಜ್ಯದಿಂದ ಬರುವ ವಾಹನಗಳ ತೆರಿಗೆ ಸಂಗ್ರಹ ಮಾಡುವ ಸಂಬAಧ ಗಡಿ ಭಾಗದಲ್ಲಿ ಗೇಟ್ಗಳನ್ನು ತೆರೆಯಬೇಕು. ಆ ಮೂಲಕ ನಿಯಮಾನುಸಾರ ತೆರಿಗೆ ಸಂಗ್ರಹ ಸಾಧ್ಯ ಎಂದರು. ಅಕ್ರಮವಾಗಿ ತೆರಿಗೆ ಸಂಗ್ರಹ ಮಾಡುವುದನ್ನು ಈ ಮೂಲಕ ತಡೆಗಟ್ಟಬಹುದು ಎಂದರು. ಸಮ್ಮೇಳನದ ಜಿಲ್ಲಾ ರಕ್ತ ನಿಧಿ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಕೆ.ಪಿ. ಕರಂಬಯ್ಯ ಅವರ ನೇತೃತ್ವದಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಇದೇ ಸಂದರ್ಭ ಸಂಸ್ಥೆ ವತಿಯಿಂದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕುಶಾಲನಗರ ತಾಲೂಕು ಕಾರ್ಯನಿರತ ಪತಕರ್ತ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್, ಕೆಟಿಡಿಓ ರಾಜ್ಯ ಸಹ ಕಾರ್ಯದರ್ಶಿ ಸಿ ಮಹಮ್ಮದ್ ಹುಸೇನ್, ವಿನ್ಸೆಂಟ್ ಬಾಬು, ಜಿಲ್ಲಾ ಗೌರವಾಧ್ಯಕ್ಷ ಕಳ್ಳಿಚಂಡ ಪರಶುರಾಮ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಎನ್. ಕಿರಣ್, ಎ. ಸಿ. ಲೋಕೇಶ್, ತಾಲೂಕು ಅಧ್ಯಕ್ಷರಾದ ಬಿ.ವಿ. ರವಿ, ಕೆ.ಎಸ್. ಶಿವ, ಎಂ.ಆರ್. ಪ್ರಕಾಶ್, ಶಬೀರ್, ಹೇಮಂತ್ ನಾಯಕ್ ಮತ್ತಿತರರಿದ್ದರು.