ಸೋಮವಾರಪೇಟೆ, ಡಿ. ೪: ಕನ್ನಡ ರಾಜ್ಯೋತ್ಸವವನ್ನು ನವೆಂಬರ್ ತಿಂಗಳಲ್ಲಿ ಮಾತ್ರ ಸಂಭ್ರಮಿಸಿದರೆ ಕನ್ನಡ ಬೆಳೆಸಲು ಸಾಧ್ಯವಿಲ್ಲ. ಕನ್ನಡ ನಾಡಿನಲ್ಲಿ ಹುಟ್ಟಿದವರು ಇಂಗ್ಲೀಷ್ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದರೂ ಸಹ ಮನೆಯಲ್ಲಿ ಕನ್ನಡ ಬಳಸಬೇಕು ಎಂದು ಶಾಸಕ ಡಾ. ಮಂಥರ್‌ಗೌಡ ಕರೆ ನೀಡಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಮಹಿಳಾ ಸಮಾಜದಲ್ಲಿ ನಡೆದ ಕರ್ನಾಟಕ ಸುವರ್ಣ ಸಂಭ್ರಮ ಸಮಾರೋಪ ಸಮಾರಂಭದಲ್ಲಿ ಸಾಹಿತಿ ಶ.ಗ. ನಯನತಾರಾ ಪ್ರಕಟಿಸಿರುವ ಶನಿವಾರಸಂತೆ ಕೊಡ್ಲಿಪೇಟೆ ಒಂದು ಸಾಂಸ್ಕೃತಿಕ ಪಕ್ಷಿನೋಟ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಮಕ್ಕಳು ಕನ್ನಡ ಸಾಹಿತ್ಯವನ್ನು ಓದಿಕೊಳ್ಳಲು ಪ್ರೋತ್ಸಾಹ ನೀಡಬೇಕು. ಶಾಲಾ, ಕಾಲೇಜುಗಳಲ್ಲಿ ಕನ್ನಡ ಕಲಿಕೆಗೆ ಆದ್ಯತೆ ನೀಡಬೇಕು ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಕನ್ನಡಕ್ಕೆ ೨ ಸಾವಿರ ವರ್ಷಗಳ ಇತಿಹಾಸವಿದ್ದು, ೮ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಇಂತಹ ಶ್ರೀಮಂತ ಸಂಸ್ಕೃತಿಯನ್ನು ಹೊಂದಿರುವ ಕನ್ನಡವನ್ನು ಉಳಿಸುವುದಕ್ಕೆ ಹೋರಾಟ ಮಾಡುವಂತ ದುಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು. ವೀರಾಜಪೇಟೆ ತಾಲೂಕು ಕ.ಸಾ.ಪ. ಮಾಜಿ ಅಧ್ಯಕ್ಷರಾದ ಡಾ. ಚಂದ್ರಶೇಖರ್ ಮಾತನಾಡಿ, ಕನ್ನಡಪರ ಹೋರಾಟದಲ್ಲಿ ಯುವಕರು ಧುಮುಕಬೇಕು. ಪ್ರಸ್ತುತದ ದಿನಗಳಲ್ಲಿ ಹಿರಿಯರೆ ಕನ್ನಡದ ಕೆಲಸ ಮಾಡುತ್ತಿದ್ದಾರೆ ಎಂದು ವಿಷಾದಿಸಿದರು. ಮಹಿಳೆಯರು, ವಿದ್ಯಾರ್ಥಿಗಳು ಕನ್ನಡ ಭಾಷಾ ಬೆಳೆವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದರು. ಕಾರ್ಯಕ್ರಮದಲ್ಲಿ ತಾಲೂಕು ಕಸಾಪ ಅಧ್ಯಕ್ಷ ಎಸ್.ಡಿ. ವಿಜೇತ್, ಜಯವೀರಮಾತೆ ಚರ್ಚ್ ಧರ್ಮಗುರು ಜಾನ್ ಫರ್ನಾಂಡಿಸ್, ಹಿಂದೂ ಮಲಯಾಳ ಸಮಾಜದ ಜಿಲ್ಲಾಧ್ಯಕ್ಷ ವಿ.ಎಂ. ವಿಜಯ್, ಸಾಹಿತಿ ಜಲಾಕಾಳಪ್ಪ, ಮಡಿಕೇರಿ ತಾಲ್ಲೂಕು ಅಧ್ಯಕ್ಷೆ ಕಡ್ಲೆರ ತುಳಸಿ, ಕ.ಸಾ.ಪ. ಜಿಲ್ಲಾ ಸಮಿತಿ ಪದಾಧಿಕಾರಿಗಳಾದ ಮುನೀರ್ ಅಹಮ್ಮದ್, ರೇವತಿ ರಮೇಶ್ ಮತ್ತಿತರರು ಇದ್ದರು.

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಶೇ.೧೦೦ ರಷ್ಟು ಅಂಕ ಪಡೆದ ವಿದ್ಯಾರ್ಥಿಗಳು, ಅವರಿಗೆ ಕಲಿಸಿದ ಶಿಕ್ಷಕರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.