*ಸಿದ್ದಾಪುರ, ಡಿ. ೩: ಸಿದ್ದಾಪುರ ಗ್ರಾ.ಪಂ ವ್ಯಾಪ್ತಿಯ ಸಿದ್ದಾಪುರ ವಾರ್ಡ್ನ ಕೆರೆ ಜಾಗ ಒತ್ತುವರಿಯಾಗುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಸಾರ್ವಜನಿಕರಿಂದ ದೂರುಗಳು ಬಂದಿದ್ದರೂ ಗ್ರಾ.ಪಂ ದಿವ್ಯ ಮೌನಕ್ಕೆ ಶರಣಾಗಿರುವ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ.

ಗ್ರಾ.ಪಂ ಮಾಜಿ ಅಧ್ಯಕ್ಷೆ ರೀನಾ ಗಣಪತಿ ಅವರು ತಮ್ಮ ಅಧಿಕಾರವಧಿಯಲ್ಲಿ ಜಲಾನಯನ ಇಲಾಖೆಯ ಸಹಕಾರದಿಂದ ಕೆರೆಯನ್ನು ಅಭಿವೃದ್ಧಿ ಪಡಿಸಿದ್ದರು. ಹೂಳು ತೆಗೆದು ಕೆರೆಯ ಸುತ್ತ ಸ್ವಚ್ಛತೆಗೆ ಆದ್ಯತೆ ನೀಡಿ ಹೂವಿನ ಗಿಡಗಳನ್ನು ನೆಟ್ಟು ಸೌಂದರ್ಯವನ್ನು ಹೆಚ್ಚಿಸಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕೆರೆಯನ್ನು ಕಡೆಗಣಿಸಲಾಗಿದೆ, ಅಲ್ಲದೆ ಸ್ಥಳೀಯ ಕೆಲವು ವ್ಯಕ್ತಿಗಳು ಕೆರೆ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಅನಧಿಕೃತ ಕಟ್ಟಡಗಳು ಕೂಡ ತಲೆ ಎತ್ತುತ್ತಿವೆ.

ಈ ಬಗ್ಗೆ ಗ್ರಾ.ಪಂ ಯ ಕಳೆದ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿದ್ದು, ಕೆರೆ ಒತ್ತುವರಿ ಕುರಿತು ರೀನಾ ಗಣಪತಿ ಗಮನ ಸೆಳೆದಿದ್ದರು. ಇದು ಸರ್ಕಾರಿ ಜಾಗವಾಗಿದ್ದು, ಸೂಕ್ತ ದಾಖಲೆ ಕೂಡ ಇದೆ. ಸರ್ವೆ ಮಾಡಿ ಒತ್ತುವರಿ ತೆರವುಗೊಳಿಸಿ ಎಂದು ಒತ್ತಾಯಿಸಿದ್ದರು.

ಆದರೆ ಕೆರೆ ಇರುವ ವಾರ್ಡ್ನ ಸದಸ್ಯ ಹಾಗೂ ಗ್ರಾ.ಪಂ ಉಪಾಧ್ಯಕ್ಷ ಪಳನಿಸ್ವಾಮಿ ಸೇರಿದಂತೆ ಎಲ್ಲಾ ಪ್ರತಿನಿಧಿಗಳು ಮೌನಕ್ಕೆ ಶರಣಾಗಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತಗೊಂಡಿದೆ.