ವೀರಾಜಪೇಟೆ, ಡಿ. ೪: ಕಡಂಗ ಸಮೀಪದ ಅರಪಟ್ಟು ನೆಲ್ಯಾಳುವಿನಲ್ಲಿ ಇರುವ ದೇವರಕಾಡಿನ ಶ್ರೀ ಅಯ್ಯಪ್ಪ ಸ್ವಾಮಿಯ ವಾರ್ಷಿಕ ಮಹೋತ್ಸವವು ಶ್ರದ್ಧಾ ಭಕ್ತಿಯಿಂದ ನೆರವೇರಿತು. ಸುಮಾರು ಐನೂರು ವರ್ಷಗಳ ಇತಿಹಾಸ ಹೊಂದಿರುವ ಈ ದೇವಸ್ಥಾನ ಅರಣ್ಯದ ಮಧ್ಯೆ ನೆಲೆ ನಿಂತಿದೆ. ವೃಷ್ಚಿಕಮಾಸ ದಿಂದ ಧನುರ್ ಮಾಸದವರೆಗೆ ಈ ದೇವಸ್ಥಾನದಲ್ಲಿ ನಿತ್ಯ ಪೂಜೆ ಮತ್ತು ಶನಿವಾರ ವಿಶೇಷ ಪೂಜಾ ಸೇವೆಗಳು ನಡೆಯುತ್ತವೆ. ವಾರ್ಷಿಕ ಉತ್ಸವದ ಪೂಜಾ ಕಾರ್ಯಕ್ರಮವನ್ನು ಅರ್ಚಕರಾದ ರಾಮ್ ಪ್ರಸಾದ್ ಭಟ್ ಅವರು ನೆರವೇರಿಸಿದರು. ಅರ್ಚಕರು ಶ್ರೀ ಅಯ್ಯಪ್ಪ ಮೂರ್ತಿಗೆ ಅಲಂಕಾರವನ್ನು ಮಾಡಿ ಹಾಲು ಹಾಗೂ ಸೀಯಾಳದ ಅಭಿಷೇಕ ಮಾಡಿದರು. ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿ ಮಹಾ ಮಂಗಳಾರತಿಯನ್ನು ಬೆಳಗಿದರು. ತದನಂತರ ಭಕ್ತರಿಗೆ ಪ್ರಸಾದ ವಿತರಣೆ ಹಾಗೂ ಅನ್ನದಾನವನ್ನು ಮಾಡಲಾಯಿತು. ಭಕ್ತರು ಹರಕೆ ರೂಪದಲ್ಲಿ ನಾಯಿ, ಹಸು, ಬೆಕ್ಕು, ಹಂದಿ, ಹುಲಿಯ ಮೂರ್ತಿಗಳನ್ನು ದೇವಸ್ಥಾನಕ್ಕೆ ಒಪ್ಪಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು ಸಮೀಪದ ಅರಪಟ್ಟು, ಪೊದವಾಡ, ಕಡಂಗ ಗ್ರಾಮದ ಭಕ್ತರುಗಳು ಉಪಸ್ಥಿತರಿದ್ದರು. ಇಲ್ಲಿ ಭಕ್ತರು ತಮ್ಮ ಮನದ ಕೋರಿಕೆಗಳನ್ನು ನೆರವೇರಲು ಹರಕೆಯನ್ನು ಹೊರುವುದು ವಿಶೇಷವಾಗಿದೆ. ಮತ್ತು ಕೋರಿಕೆ ನೆರವೇರಿದರೆ ಮೂರ್ತಿ ರೂಪದಲ್ಲಿ ಹರಕೆಗಳನ್ನು ಈಡೇರಿಸುತ್ತಾರೆ.