ಮಡಿಕೇರಿ, ಡಿ. ೩: ಜನರು ಮತ್ತು ನ್ಯಾಯಾಲಯಗಳ ಮಧ್ಯೆ ಸೌಹಾರ್ದದ ಸೇತುವೆಗಳಂತೆ ಕಾರ್ಯನಿರ್ವಹಿಸುವ ಮಹತ್ವದ ಹೊಣೆಗಾರಿಕೆ ಹೊಂದಿರುವ ವಕೀಲರು ಸಮಾಜದಲ್ಲಿ ಗುರುತರ ಬದಲಾವಣೆ ತರುವಲ್ಲಿಯೂ ಪ್ರಮುಖ ಪಾತ್ರ ವಹಿಸಬೇಕೆಂದು ರಾಜ್ಯ ಸರ್ಕಾರದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಕರೆ ನೀಡಿದರು.

ನಗರದ ಹೊರವಲಯದಲ್ಲಿನ ಕ್ಯಾಪಿಟಲ್ ವಿಲೇಜ್ ರೆಸಾರ್ಟ್ನಲ್ಲಿ ಮಡಿಕೇರಿ ವಕೀಲರ ಸಂಘದ ವತಿಯಿಂದ ಆಯೋಜಿತವಾದ ವಕೀಲರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಇತರ ವೃತ್ತಿಗಳಿಗೆ ಹೋಲಿಸಿದರೆ ವಕೀಲ ವೃತ್ತಿಯು ಅತ್ಯಂತ ಘನತೆ, ಗೌರವ ಹೊಂದಿರುವ ಮಹತ್ವದ ವೃತ್ತಿಯಾಗಿದೆ. ವಕೀಲ ವೃತ್ತಿಯಲ್ಲಿ ಇರುವವರು ಸ್ವಾತಂತ್ರ‍್ಯ ಹೋರಾಟದ ಕಾಲಘಟ್ಟದಿಂದಲೂ ಸಾಮಾಜಿಕ ವಿಚಾರಗಳಲ್ಲಿನ ಹೋರಾಟಗಳಲ್ಲಿ ತಮ್ಮದೇ ಆದ ರೀತಿಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ಈಗಲೂ ಕೂಡ ವಕೀಲರು ಸಾಮಾಜಿಕವಾಗಿ ಬದಲಾವಣೆ ತರುವಂಥ ಹೋರಾಟಗಳಲ್ಲಿ ಕಾನೂನಾತ್ಮಕವಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಅವರು ಕರೆ ನೀಡಿದರು.

ಭಾರತದಲ್ಲಿ ಕಾನೂನು ಕಾಲೇಜುಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಾರಂಭವಾಗುತ್ತಿರುವುದು ಕೂಡ ವಕೀಲ ವೃತ್ತಿಯನ್ನು ಅತೀ ಹೆಚ್ಚು ಯುವಕ, ಯುವತಿಯರು ಆಯ್ಕೆ ಮಾಡಿಕೊಳ್ಳುತ್ತಿರುವುದಕ್ಕೆ ನಿದರ್ಶನದಂತಿದೆ ಎಂದು ಹೇಳಿದ ಶಶಿಕಿರಣ್ ಶೆಟ್ಟಿ, ವಕೀಲ ವೃತ್ತಿಯ ಪ್ರಾಮುಖ್ಯತೆ ಹೆಚ್ಚಳವಾಗುತ್ತಿರುವುದನ್ನು ಇದು ಸಾಬೀತುಪಡಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.

ಸೇನೆಯಲ್ಲಿ ಶಿಸ್ತಿನ ಸಿಪಾಯಿಗಳಾಗಿ ಖ್ಯಾತಿ ಗಳಿಸಿರುವ ಕೊಡಗಿನ ವಕೀಲ ವೃಂದ ಕೂಡ ಶಿಸ್ತಿಗೆ ಹೆಸರಾಗಿದ್ದಾರೆ ಎಂದು ಶ್ಲಾಘಿಸಿದ ಶಶಿಕಿರಣ್ ಶೆಟ್ಟಿ, ಯಾವುದೇ ವೃತ್ತಿಯಾಗಿರಲಿ ಮನಸ್ಸಿನಲ್ಲಿ ಸಂತೋಷದಿAದ ವೃತ್ತಿಯನ್ನು ನಿರ್ವಹಿಸಬೇಕು. ಆಗ ಯಶಸ್ಸು ಖಂಡಿತಾ ಸಾಧ್ಯ ಎಂದು ಕಿವಿಮಾತು ಹೇಳಿದರು.

ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಎಚ್.ಎಲ್. ವಿಶಾಲರಘು ಮಾತನಾಡಿ, ಮಡಿಕೇರಿ ವಕೀಲರ ಸಂಘದ ಕೋರಿಕೆ ಮೇರೆಗೆ ಮಡಿಕೇರಿಯಲ್ಲಿ ೫ ದಿನಗಳ ಕಾಲ ವಕೀಲರಿಗಾಗಿ ವೃತ್ತಿ ಪರ ಕಾರ್ಯಾಗಾರ ಆಯೋಜಿಸಲು ೧ ಲಕ್ಷ ರೂ. ಅನುದಾನವನ್ನು ವಕೀಲರ ಪರಿಷತ್‌ನಿಂದ ನೀಡುವುದಾಗಿ ಹೇಳಿದರು. ಪ್ರಸ್ತುತ ಕರ್ನಾಟಕದಲ್ಲಿ ೧.೧೫ ಲಕ್ಷ ವಕೀಲರು ಕಾರ್ಯಪ್ರವೃತ್ತರಾಗಿದ್ದು, ಈ ಪೈಕಿ ೨೭.೭೫೦ ಮಹಿಳಾ ವಕೀಲರಿದ್ದಾರೆ. ಪ್ರತೀ ವರ್ಷವೂ ರಾಜ್ಯದಲ್ಲಿ ೭.೫೦೦ ವಕೀಲರು ನೂತನವಾಗಿ ಸೇರ್ಪಡೆಯಾಗುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಹಾಲಿ ವಕೀಲರ ಪರಿಷತ್ ನಲ್ಲಿ ೧೧೬ ಕೋಟಿ ರೂ. ಹಣ ಠೇವಣಿ ಇದೆ. ಮರಣವನ್ನಪ್ಪಿದ ವಕೀಲರ ಕುಟುಂಬಸ್ಥರಿಗೆ ಮತ್ತು ಅನಾರೋಗ್ಯಪೀಡಿತ ವಕೀಲರಿಗೆ ರಾಜ್ಯ ಪರಿಷತ್ ನಿಂದ ಸೂಕ್ತ ಆರ್ಥಿಕ ನೆರವು ನೀಡಲಾಗುತ್ತದೆ ಎಂದೂ ವಿಶಾಲ ರಘು ವಿವರಿಸಿದರು.

ಕೊಡಗು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಎಚ್.ಸಿ.ಶ್ಯಾಮ್ ಪ್ರಸಾದ್ ಮಾತನಾಡಿ, ಯಾವುದೇ ವಕೀಲರು ರಸ್ತೆಗಿಳಿದು ಕಕ್ಷಿದಾರರನ್ನು ಹುಡುಕುವ ಸ್ಥಿತಿ ನಿರ್ಮಾಣವಾಗಬಾರದು. ನ್ಯಾಯದ ಅಗತ್ಯತೆ ಉಳ್ಳವರು ಘನವೆತ್ತ ನ್ಯಾಯಾಲಯಗಳಿಗೆ ಬಂದು ವಕೀಲರ ನೆರವು ಪಡೆಯಬೇಕು. ವಕೀಲರು ಕಕ್ಷಿದಾರರೊಂದಿಗೆ ಪ್ರಾಮಾಣಿಕತೆಯಿಂದ ವ್ಯವಹರಿಸುವಂತೆ ಸಲಹೆ ನೀಡಿದರು. ವಕೀಲರು ತನ್ನ ವೃತ್ತಿ ಗೌರವ ಮತ್ತು ವೃತ್ತಿ ಧರ್ಮವನ್ನು ಪ್ರಾಮಾಣಿಕ ರೀತಿಯಲ್ಲಿ ಪಾಲಿಸುವಂತೆಯೂ ಶ್ಯಾಮ್ ಪ್ರಸಾದ್ ಕರೆ ನೀಡಿದರು. ಎಲ್ಲಾ ವಕೀಲರು ಸಂತೋಷದ ಜೀವನ ನಡೆಸುತ್ತಿಲ್ಲ. ಅನೇಕ ವಕೀಲರ ಜೀವನ ಸಂಕಷ್ಟದಿAದಲೇ ಕೂಡಿದೆ. ಇಂಥವರಿಗೆ ವಕೀಲರ ಸಂಘಗಳು ನೆರವಿಗೆ ಮುಂದಾಗುವAತೆಯೂ ಶ್ಯಾಮ್ ಪ್ರಸಾದ್ ಸೂಚಿಸಿದರು.

ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಎಂ.ಎ. ನಿರಂಜನ್ ಮಾತನಾಡಿ, ಡಾ. ರಾಜೇಂದ್ರಪ್ರಸಾದ್ ಅವರ ಜನ್ಮದಿನದ ಪ್ರಯುಕ್ತ ಪ್ರತೀವರ್ಷ ಡಿಸೆಂಬರ್ ೩ ರಂದು ವಕೀಲರ ದಿನವನ್ನಾಗಿ ಆಚರಿಸುತ್ತಾ ಬರಲಾಗುತ್ತಿದೆ. ಅತ್ಯಂತ ಮಹತ್ವದ್ದಾದ ವಕೀಲರ ವೃತ್ತಿಗೆ ಕಾಲಿಡುತ್ತಿರುವ ಯುವ ವಕೀಲರಿಗೆ ಸ್ಫೂರ್ತಿದಾಯಕವಾಗಿ ಕೂಡ ವಕೀಲರ ದಿನದ ಆಚರಣೆ ಕಾರಣವಾಗುತ್ತದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.

ಹಿರಿಯ ವಕೀಲರಾದ ಮಡಿಕೇರಿಯ ಕೊಕ್ಕೆಂಗಡ ಸೌಭಾಗ್ಯ ಪೊನ್ನಪ್ಪ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸೌಭಾಗ್ಯ ಪೊನ್ನಪ್ಪ, ಸದಾ ನಿಸ್ವಾರ್ಥಿಗಳಾಗಿ ವಕೀಲರು ಕಾರ್ಯನಿರ್ವಹಿಸಬೇಕು. ವಕೀಲರ ಮೇಲೆ ಕಕ್ಷಿದಾರರು ಮಾತ್ರವಲ್ಲದೇ ಸಮಾಜ ಕೂಡ ಸಾಕಷ್ಟು ನಿರೀಕ್ಷೆ ಹೊಂದಿರುತ್ತದೆ. ನಿರೀಕ್ಷೆಗಳು ಹುಸಿಯಾಗದಂತೆ ನಿಸ್ವಾರ್ಥದಿಂದ ವಕೀಲರು ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಒಂದನೇ ಹೆಚ್ಚುವರಿ ನ್ಯಾಯಾಧೀಶರಾದ ಜಿ.ಪ್ರಶಾಂತಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಜಯಲಕ್ಷ್ಮಿ, ಹೆಚ್ಚುವರಿ ಕಿರಿಯ ಸಿವಿಲ್ ನ್ಯಾಯಾಧೀಶರಾದ ನಾಗೇಶ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಬಿ. ಪ್ರಸಾದ್, ಕೊಡಗು ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷೆ ರೇಣುಕಾಂಭ, ಆಯೋಗದ ಸದಸ್ಯೆ ಗೌರಮ್ಮಣ್ಣಿ, ವಿಧಾನಸಭೆಯ ಮಾಜಿ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ, ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಎ.ಲೋಕೇಶ್ ಕುಮಾರ್, ಮಡಿಕೇರಿ ನಗರಸಭೆಯ ಅಧ್ಯಕ್ಷೆ ಅನಿತಾ ಪೂವಯ್ಯ, ಪಬ್ಲಿಕ್ ಪ್ರಾಸಿಕ್ಯೂಟರ್ ಶ್ರೀಧರನ್ ನಾಯರ್, ಲೋಕಾಯುಕ್ತ ಪಬ್ಲಿಕ್ ಪ್ರಾಸಿಕ್ಯೂಟರ್ ಎಂ.ಎA.ಕಾರ್ಯಪ್ಪ, ಮಡಿಕೇರಿ ವಕೀಲರ ಸಂಘದ ಉಪಾಧ್ಯಕ್ಷ ಎಂ.ಪಿ. ನಾಗರಾಜ್, ಸಹಕಾರ್ಯದರ್ಶಿ ಪವನ್ ಪೆಮ್ಮಯ್ಯ, ಕ್ರೀಡಾಸಮಿತಿ ಸಂಚಾಲಕ ಕಪಿಲ್ ಕುಮಾರ್, ವಕೀಲರ ಸಂಘದ ಪದಾಧಿಕಾರಿಗಳು ಹಾಜರಿದ್ದರು.

ವಕೀಲರ ಸಂಘದ ಖಜಾಂಜಿ ಜಿ.ಆರ್.ರವಿಶಂಕರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಕೃಷ್ಣಮೂರ್ತಿ, ಪ್ರತಾಪ್, ನಳಿನಿ, ಕುಮುದಾ ಪ್ರಾರ್ಥಿಸಿ, ಸಂಘದ ಕಾರ್ಯದರ್ಶಿ ಡಿ.ಎಂ. ಕೇಶವ ವಂದಿಸಿದರು. ಮಡಿಕೇರಿ ವಕೀಲರ ಸಂಘದ ಅನೇಕ ಹಿರಿಯ ಸದಸ್ಯರೂ ಸೇರಿದಂತೆ ನೂರಾರು ಸದಸ್ಯರು ಕುಟುಂಬ ವರ್ಗದೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೂ ಮುನ್ನ ಅತಿಥಿಗಳು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಮನರಂಜನಾ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ವಿವಿಧ ಸ್ಪರ್ಧೆಗಳನ್ನು ವಕೀಲರ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿತ್ತು.