ತಾ. ೪ ರಿಂದ ಸಂಸತ್ತಿನ ಚಳಿಗಾಲ ಅಧಿವೇಶನ

ನವದೆಹಲಿ, ಡಿ. ೨: ರಚನಾತ್ಮಕ ಚರ್ಚೆಗೆ ಸರ್ಕಾರ ಸಂಪೂರ್ಣವಾಗಿ ಸಿದ್ಧವಾಗಿದೆ. ಸಂಸತ್ತಿನ ಚಳಿಗಾಲ ಅಧಿವೇಶನ ಸುಗಮವಾಗಿ ನಡೆಯಲು ಪ್ರತಿಪಕ್ಷಗಳಿಗೆ ಮನವಿ ಮಾಡಿದ್ದೇವೆ ಎಂದು ದೆಹಲಿಯಲ್ಲಿ ಶನಿವಾರ ಸರ್ವಪಕ್ಷ ಸಭೆ ಬಳಿಕ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ತಾ. ೪ ರಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ೧೫ ಅಧಿವೇಶನಗಳು ನಡೆಯಲಿವೆ. ಇಂದು ಸರ್ವಪಕ್ಷ ಸಭೆ ಕರೆದಿದ್ದೆವು. ೨೩ ಪಕ್ಷಗಳ ೩೦ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು. ಈ ಬಾರಿ ಕೂಡ ಸದನದಲ್ಲಿ ಶೂನ್ಯ ವೇಳೆ ನಿಯಮಿತವಾಗಿ ನಡೆಯುತ್ತದೆ ಎಂದರು. ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಮುನ್ನ ಇಂದು ಪಾರ್ಲಿಮೆಂಟ್ ಲೈಬ್ರರಿ ಕಟ್ಟಡದಲ್ಲಿ ನಡೆದ ಸರ್ವಪಕ್ಷ ಸಭೆಯ ಅಧ್ಯಕ್ಷತೆಯನ್ನು ಜೋಶಿ ವಹಿಸಿದ್ದರು. ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೈಗೆತ್ತಿಕೊಳ್ಳಬಹುದಾದ ಮಸೂದೆಗಳ ಪಟ್ಟಿಯಲ್ಲಿ ಭಾರತೀಯ ನ್ಯಾಯ ಸಂಹಿತಾ ಮಸೂದೆ ೨೦೨೩, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮಸೂದೆ ೨೦೨೩ ಮತ್ತು ಭಾರತೀಯ ಸಾಕ್ಷಿ ಮಸೂದೆ ೨೦೨೩ ಸೇರಿವೆ.

ಸಂಸದ ಸಂಜಯ್ ಸಿಂಗ್ ವಿರುದ್ಧ ಚಾರ್ಜ್ ಶೀಟ್

ನವದೆಹಲಿ, ಡಿ. ೨: ರದ್ದುಗೊಂಡಿರುವ ದೆಹಲಿ ಅಬಕಾರಿ ನೀತಿಗೆ ಸಂಬAಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬAಧಿಸಿದAತೆ ಬಂಧನಕ್ಕೊಳಗಾಗಿರುವ ಎಎಪಿ ಸಂಸದ ಸಂಜಯ್ ಸಿಂಗ್ ವಿರುದ್ಧ ಜಾರಿ ನಿರ್ದೇಶನಾಲಯ ಶನಿವಾರ ಚಾರ್ಜ್ ಶೀಟ್ ಸಲ್ಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಸ್ಥಳೀಯ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಈ ಪ್ರಕರಣಕ್ಕೆ ಪೂರಕವಾದ ಚಾರ್ಜ್ ಶೀಟ್ ಇದಾಗಿದ್ದು, ತನಿಖಾ ಸಂಸ್ಥೆಯು ಈ ಹಿಂದೆ ಇಂತಹ ಐದು ಚಾರ್ಜ್ ಶೀಟ್‌ಗಳನ್ನು ಸಲ್ಲಿಸಿದೆ. ಅಬಕಾರಿ ನೀತಿ ಪ್ರಕರಣಕ್ಕೆ ಸಂಬAಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬAಧ ಅಕ್ಟೋಬರ್ ೪ ರಂದು ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು, ಸತತ ೧೧ ಗಂಟೆಗಳ ವಿಚಾರಣೆ ಬಳಿಕ ಅವರನ್ನು ಬಂಧಿಸಿತ್ತು. ಆರೋಪಿ ಉದ್ಯಮಿ ದಿನೇಶ್ ಅರೋರಾ ಅವರು ಎಎಪಿ ರಾಜ್ಯಸಭಾ ಸಂಸದ ಸಿಂಗ್ ಅವರಿಗೆ ಅವರ ನಿವಾಸದಲ್ಲಿ ಎರಡು ಹಂತಗಳಲ್ಲಿ ೨ ಕೋಟಿ ರೂಪಾಯಿ ನಗದು ನೀಡಿದ್ದಾರೆ ಎಂದು ಇಡಿ ಆರೋಪಿಸಿದೆ. ಸಿಂಗ್ ಈ ಹೇಳಿಕೆಯನ್ನು ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ.

ಪಂಜಾಬ್‌ನ ಇಬ್ಬರು ಮಾಜಿ ಸಚಿವರ ಮೇಲೆ ಇ.ಡಿ ದಾಳಿ

ನವದೆಹಲಿ, ಡಿ. ೨: ಅರಣ್ಯ ಇಲಾಖೆಯ ಹಗರಣದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬAಧಿಸಿದAತೆ ಪಂಜಾಬ್‌ನ ಇಬ್ಬರು ಮಾಜಿ ಅರಣ್ಯ ಸಚಿವರು ಮತ್ತು ಇತರರಿಗೆ ಸೇರಿದ ಸ್ಥಳಗಳಲ್ಲಿ ಶೋಧ ನಡೆಸಿರುವ ಜಾರಿ ನಿರ್ದೇಶನಾಲಯ (ಇ.ಡಿ), ದಾಖಲೆಗಳು, ಮೊಬೈಲ್ ಮತ್ತು ಎಲೆಕ್ಟಾçನಿಕ್ ಉಪಕರಣಗಳನ್ನು ವಶಪಡಿಸಿಕೊಂಡಿದೆ. ಕಾಂಗ್ರೆಸ್ ನಾಯಕರಾದ ಸಾಧು ಸಿಂಗ್ ಧರ್ಮ್ಸೋತ್ ಮತ್ತು ಸಂಗತ್ ಸಿಂಗ್ ಗಿಲ್ಟಿಯಾ ವಿರುದ್ಧ ಇ.ಡಿ ಕಾರ್ಯಾಚರಣೆ ನಡೆಸಿದೆ. ರಾಜ್ಯ ಅರಣ್ಯ ಇಲಾಖೆಯಲ್ಲಿ ಮರಗಳನ್ನು ಕಡಿಯಲು ಪರವಾನಿಗೆ ನೀಡುವುದು ಸೇರಿದಂತೆ ಇಲಾಖೆಯಲ್ಲಿ ವರ್ಗಾವಣೆ ಹಾಗೂ ಪೋಸ್ಟಿಂಗ್‌ನಲ್ಲಿ ಲಂಚ ಪಡೆದಿರುವುದಕ್ಕೆ ಸಂಬAಧಿಸಿದAತೆ ತನಿಖೆ ನಡೆಸಲಾಗುತ್ತಿದೆ ಎಂದು ಇ.ಡಿ ಹೇಳಿದೆ. ನವೆಂಬರ್ ೩೦ರಂದು ಪಂಜಾಬ್, ಹರಿಯಾಣ ಮತ್ತು ದೆಹಲಿಯಲ್ಲಿ ಧರ್ಮ್ಸೋತ್, ಗಿಲ್ಟಿಯಾ ಅವರ ಆಪ್ತರು, ಅರಣ್ಯ ಅಧಿಕಾರಿಗಳು ಮತ್ತು ಕೆಲವು ಖಾಸಗಿ ವ್ಯಕ್ತಿಗಳ ಮನೆ ಮೇಲೂ ಇ.ಡಿ ದಾಳಿ ನಡೆಸಿತ್ತು. ಐದು ಬಾರಿ ಶಾಸಕ ಧರ್ಮ್ಸೋತ್ (೬೩) ಅವರನ್ನು ಈ ವರ್ಷದ ಆರಂಭದಲ್ಲಿ ಅಕ್ರಮ ಆಸ್ತಿ ಪ್ರಕರಣದಲ್ಲಿ ವಿಜಿಲೆನ್ಸ್ ಬಂಧಿಸಿತ್ತು. ಗಿಲ್ಟಿಯಾ ಅವರು ಹೋಶಿಯಾಪುರದ ಶಾಸಕರಾಗಿದ್ದಾರೆ.

ಬಾಂಗ್ಲಾದೇಶದಲ್ಲಿ ಪ್ರಬಲ ಭೂಕಂಪನ

ಕಲ್ಕತ್ತಾ, ಡಿ. ೨: ಶನಿವಾರ ಬೆಳಿಗ್ಗೆ ಬಾಂಗ್ಲಾದೇಶದಲ್ಲಿ ಪ್ರಬಲ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ೫.೬ ತೀವ್ರತೆಯ ಪ್ರಮಾಣ ದಾಖಲಾಗಿದ್ದು, ಪಶ್ಚಿಮ ಬಂಗಾಳದ ವಿವಿಧ ಭಾಗಗಳಲ್ಲಿಯೂ ಕಂಪನದ ಅನುಭವವಾಗಿದೆ. ಆಗ್ನೇಯ ಬಾಂಗ್ಲಾದೇಶದಲ್ಲಿ ೫೫ ಕಿ.ಮೀ. ಆಳದಲ್ಲಿ ಬೆಳಿಗ್ಗೆ ೯.೦೫ಕ್ಕೆ ಭೂಕಂಪ ಸಂಭವಿಸಿದೆ ಎಂದು ಭೂಕಂಪನದ ರಾಷ್ಟಿçÃಯ ಕೇಂದ್ರ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಮಾಹಿತಿ ನೀಡಿದೆ. ಸದ್ಯ ದೇಶದ ಯಾವುದೇ ಪ್ರದೇಶದಲ್ಲಿ ಹಾನಿ ಸಂಭವಿಸಿಲ್ಲ ಎಂದು ಪಶ್ಚಿಮ ಬಂಗಾಳದ ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿದೆ.

ಯುಎಇ ಅಧ್ಯಕ್ಷರೊಂದಿಗೆ ಮೋದಿ ಮಾತುಕತೆ

ದುಬೈ, ಡಿ. ೨: ಇಸ್ರೇಲ್-ಹಮಾಸ್ ಸಂಘರ್ಷ ತಾರಕಕ್ಕೇರಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ದುಬೈನಲ್ಲಿ ನಡೆಯುತ್ತಿರುವ ಸಿಒಪಿ-೨೮ರ ವಿಶ್ವ ಹವಾಮಾನ ಕ್ರಿಯಾ ಶೃಂಗಸಭೆಯ ಸಂದರ್ಭದಲ್ಲಿ ಮೋದಿ ಹಾಗೂ ಮೊಹಮ್ಮದ್ ಬಿನ್ ಜಾಯೆದ್ ಭೇಟಿಯಾದರು. ಈ ವೇಳೆ ಉಭಯ ನಾಯಕರು ಇಸ್ರೇಲ್-ಹಮಾಸ್ ಸಂಘರ್ಷದ ಬಗ್ಗೆ ಚರ್ಚಿಸಿದರು. ನನ್ನ ಸಹೋದರ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಭೇಟಿಯಾಗಲು ನಾನು ಯಾವಾಗಲೂ ಸಂತೋಷಪಡುತ್ತೇನೆ. ಸಿಒಪಿ-೨೮ ಶೃಂಗ ಸಭೆಗಾಗಿ ಅವರ ಆತ್ಮೀಯ ಆತಿಥ್ಯಕ್ಕಾಗಿ ಧನ್ಯವಾದಗಳು. ಭಾರತ ಹಾಗೂ ಯುಎಇ ಸ್ನೇಹವನ್ನು ಬಲಪಡಿಸುವುದು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಪ್ರಧಾನಿ ಮೋದಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.