ಮಡಿಕೇರಿ, ಡಿ. ೩: ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳನ್ನು ಒಳಗೊಂಡ ಮರೆನಾಡ್ ಕೊಡವ ಸಮಾಜದ ವತಿಯಿಂದ ಸಮಾಜದ ಆವರಣದಲ್ಲಿ ಸಂಭ್ರಮದ ಪುತ್ತರಿ ಕೋಲ್ಮಂದ್ ಕಾರ್ಯಕ್ರಮ ಜರುಗಿತು.
ಪುತ್ತರಿ ಕೋಲಾಟ್, ಉಮ್ಮತ್ತಾಟ್, ಬೊಳಕಾಟ್, ಪರೆಯಕಳಿ, ಕಪ್ಪೆಯಾಟ್, ಕೊಡವ ನೃತ್ಯ ಮತ್ತಿತರ ಜಾನಪದ ಕಾರ್ಯಕ್ರಮಗಳ ಪ್ರದರ್ಶನ ನಡೆಯಿತು. ಮರೆನಾಡ್ ವ್ಯಾಪ್ತಿಯ ಜನರು ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು. ಮೂರು ಗ್ರಾಮಗಳ ತಕ್ಕ ಮುಖ್ಯಸ್ಥರು ಮಂದ್ ಪುಡಿಪ ಕಾರ್ಯದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದಕ್ಕೂ ಮುನ್ನ ಆಯಾ ಗ್ರಾಮದಿಂದ ಜನರು ಸಂಪ್ರದಾಯ ಬದ್ದವಾಗಿ ಆಗಮಿಸಿದ್ದರು.
ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೊಡವ ಸಮಾಜಗಳ ಒಕ್ಕೂಟದ ಮಾಜಿ ಅಧ್ಯಕ್ಷ ಹಾಗೂ ಸ್ಥಳೀಯರಾದ ಮಲ್ಲೇಂಗಡ ದಾದಾ ಬೆಳ್ಯಪ್ಪ ಅವರು ಮಾತನಾಡಿ, ಮರೆನಾಡ್ ವಿಭಾಗದ ಅಭಿವೃದ್ಧಿ ಸಮಾಜದ ಅಭಿವೃದ್ಧಿಯ ಕುರಿತು ಅಭಿಪ್ರಾಯ ವ್ಯಕ್ತಪಡಿಸಿ ಅಗತ್ಯ ಸಹಕಾರ ನೀಡುವ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಸಮಾಜದ ಮಾಜಿ ಅಧ್ಯಕ್ಷ ಮಲ್ಲೇಂಗಡ ಪೆಮ್ಮಯ್ಯ ಹಾಗೂ ಕ್ರೀಡೆಯಲ್ಲಿ ಸಾಧನೆ ಮಾಡಿದ ಮೀದೇರಿರ ಕವಿತಾ ಅವರುಗಳನ್ನು ಸನ್ಮಾನಿಸಲಾಯಿತು. ಬಿರುನಾಣಿಯ ಸುಜ್ಯೋತಿ ವಿದ್ಯಾಸಂಸ್ಥೆ, ಟಿ.ಶೆಟ್ಟಿಗೇರಿಯ ರೂಟ್ಸ್ ಶಾಲೆ, ಚಂಗಡಮಾಡ ಬೋಪಣ್ಣ ತಂಡ ಹಾಗೂ ಪೊರಾಡ್ನ ಬಾಲಕರಿಂದ ಜನಪದ ಕಲೆಗಳ ಪ್ರದರ್ಶನ ಜರುಗಿತು.
ತಕ್ಕ ಕುಟುಂಬಗಳಾದ ಕಾಯಪಂಡ, ಬೊಳ್ಳೆರ, ಚಂಗಣಮಾಡ, ಅಣ್ಣೀರ, ಅಣ್ಣಮಾಡ, ಮೂಕಳಮಾಡ ಸೇರಿದಂತೆ ಇತರ ಕುಟುಂಬಸ್ಥರು, ಸಾರ್ವಜನಿಕರು ಪಾಲ್ಗೊಂಡಿದ್ದರು. ಮರೆನಾಡ್ ಕೊಡವ ಸಮಾಜದ ಅಧ್ಯಕ್ಷರಾದ ಕುಪ್ಪುಡೀರ ಪೊನ್ನು ಮುತ್ತಪ್ಪ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು.
ವೇದಿಕೆಯಲ್ಲಿ ಸಮಾಜದ ಗೌರವ ಅಧ್ಯಕ್ಷ ಬೊಳ್ಳೆರ ಕೆ. ಪೊನ್ನಪ್ಪ, ಸಲಹೆಗಾರ ಕಾಳಿಮಾಡ ಮುತ್ತಣ್ಣ, ಉಪಾಧ್ಯಕ್ಷರಾದ ಕರ್ತಮಾಡ ಮಿಲನ್, ಅಣ್ಣಳಮಾಡ ಲಾಲ ಅಪ್ಪಣ್ಣ, ಕಾರ್ಯದರ್ಶಿ ಅಯ್ಯಮಾಡ ಮುತ್ತಣ್ಣ, ಖಜಾಂಚಿ ಕಾಯಪಂಡ ಮಧು ಮೋಟಯ್ಯ, ಚೋನಿರ ಮಧು, ಜಂಟಿ ಕಾರ್ಯದರ್ಶಿ ಬುಟ್ಟಿಯಂಡ ಸುನಿತಾ, ತಕ್ಕ ಕುಟುಂಬದ ಪರವಾಗಿ ಕಾಯಪಂಡ ಅಯ್ಯಪ್ಪ, ಅಣ್ಣೀರ ದಾದ ಗಣಪತಿ, ಅಣ್ಣೀರ ಲವ, ಅಣ್ಣಳಮಾಡ ಗಿರೀಶ್, ಮೂಕಳಮಾಡ ವೀಟು, ಚಂಗಡಮಾಡ ಮೊಣ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ ಮೃತ್ಯುಂಜಯ ದೇವಸ್ಥಾನ ಸಮಿತಿಯಿಂದ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.