ಸುAಟಿಕೊಪ್ಪ, ಡಿ. ೩: ಮಕ್ಕಳಿಗಾಗಿ ಅಸ್ತಿ ಮಾಡುವ ಬದಲು ಅವರಿಗೆ ಉನ್ನತ ವಿದ್ಯಾಭ್ಯಾಸ ಕೊಡಿಸಿ ಅವರನ್ನೇ ಸಮಾಜದ ಅಸ್ತಿಯಾಗಿಸುವ ಕೆಲಸ ಮಾಡಬೇಕೆಂದು ಮಾಜಿ ಸಚಿವ ಎಂಪಿ. ಅಪ್ಪಚ್ಚು ರಂಜನ್ ಕರೆ ನೀಡಿದರು.

ಸುಂಟಿಕೊಪ್ಪ ಹೋಬಳಿ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ವತಿಯಿಂದ ದೇಯಿ ಬೈದೇತಿ ಬಿಲ್ಲವ ಮಹಿಳಾ ಸಂಘ ಹಾಗೂ ಬಿಲ್ಲವ ವಿದ್ಯಾರ್ಥಿ ಘಟಕದ ವತಿಯಿಂದ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಶ್ರೀ ನಾರಾಯಣ ಗುರುಗಳ ಜಯಂತ್ಯೋತ್ಸವ, ಗೌರವ ಸಮಾರ್ಪಣೆ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಾನ್ ಸಂತರಾದ ನಾರಾಯಣ ಗುರುಗಳ ಸಾಧನೆ ಮತ್ತು ಜೀವನವನ್ನು ಸ್ಮರಿಸುವ ಜೊತೆಗೆ ಅವರ ಉದಾತ ಗುಣಗಳನ್ನು ಮುಂದುವರಿಸುವ ನಿಟ್ಟಿನಲ್ಲಿ ಸಮುದಾಯದವರಿಗೆ ಗೌರವ ಮತ್ತು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ.

ಸಂತ ನಾರಾಯಣಗುರುಗಳು ಬಿಲ್ಲವ ಸಮುದಾಯಕ್ಕೆ ಮಾತ್ರ ಗುರುಗಳಾಗದೆ ಸಮಾಜದ ಎಲ್ಲಾ ಸಮುದಾಯದವರು ಅವರ ಆದರ್ಶ ಮೈಗೂಡಿಸಿಕೊಳ್ಳಬೇಕು. ೧೨ನೇ ಶತಮಾನದಲ್ಲಿ ಬಸವಣ್ಣನವರು ಮಾಡಿದ ಸಮಾಜ ಸುಧಾರಣೆ ಮತ್ತು ಅನುಭವ ಮಂಟಪವನ್ನು ಉಲ್ಲೇಖಿಸಿದ ಅವರು ಈ ರೀತಿಯ ದಾರ್ಶನಿಕರಿಂದ ನಾವು ಪ್ರೇರಣೆ ಪಡೆಯಬೇಕೆಂದು ಕಿವಿಮಾತು ಹೇಳಿದರು.

ಸಮುದಾಯದವರು ಹೋಬಳಿ ಮತ್ತು ತಾಲೂಕು ಮಟ್ಟದಲ್ಲಿ ಸಂಘಟಿತರಾಗಿ ಕೆಲಸ ಮಾಡಬೇಕೆಂದು ಹೇಳಿದ ಅವರು, ಸಮಾಜದಲ್ಲಿ ಹಿರಿಯರನ್ನು ಕಡೆಗಣಿಸುವ ಪ್ರವೃತಿ ಹೆಚ್ಚಾಗುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಈಗಾಗಲೇ ೭ನೆ ಹೊಸಕೋಟೆಯ ಬಳಿ ಅನಾಥ ಆಶ್ರಮ ಒಂದನ್ನು ನಿರ್ಮಿಸಲಾಗುತ್ತಿದ್ದು, ತಮ್ಮ ಮಕ್ಕಳ ನೆರವಿನಿಂದ ರೂ.೧ ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು. ಪ್ರತಿಯೊಬ್ಬರು ತಮ್ಮ ಸಂಪಾದನೆಯಲ್ಲಿ ಸ್ವಲ್ಪ ಭಾಗ ಸಮಾಜ ಸೇವೆಗೆ ಮೀಸಲಿಡಬೇಕೆಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ಯುವ ಕೋವಿಡ್ ವಾರಿಯರ್ ರಾಷ್ಟç ಪುರಸ್ಕಾರ ಪುರಸ್ಕೃತ ರಾ.ಸೇ.ಯೋ.ಅತ್ಯುತ್ತಮ ಸ್ವಯಂಸೇವಕ ಅಭಿನ್ ಬಂಗೇರ ನಮ್ಮ ಹಬ್ಬ ಹರಿದಿನಗಳು ಅವುಗಳ ಆಚರಣೆ ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಸೀಮಿತವಾಗದೆ, ನಾವೆಲ್ಲಾರೂ ಆಚರಿಸುವಂತಾಗಬೇಕು. ಪ್ರತಿ ಮನೆ ಮನೆಯಲ್ಲಿ ನಾವೆಷ್ಟು ನಮ್ಮ ಮಕ್ಕಳಿಗೆ ನಮ್ಮ ಪದ್ಧತಿ ಪರಂಪರೆ ಅಚಾರ ವಿಚಾರಗಳನ್ನು ಹೇಳಿಕೊಡಲು ಬಲ್ಲವರಾಗಿದ್ದೇವೆ ಎಂಬುದರ ಆತ್ಮಾವಲೋಕನಾ ಮಾಡಿಕೊಳ್ಳುವಂತೆ ಮಾರ್ಮಿಕವಾಗಿ ನುಡಿದರು.

ನಾವು ಜೀವನದಲ್ಲಿ ಏನೇ ಸಾಧಿಸಿದರೂ ಎಷ್ಟೇ ಉನ್ನತ ಸ್ಥಾನಮಾನಗಳಿಗೆ ಹೋದರು ನಮ್ಮ ಮಾತೃಭೂಮಿ, ಮಾತೃಭಾಷೆಯನ್ನು ಮರೆಯಬಾರದು ಎಂದರು.

ಸುಂಟಿಕೊಪ್ಪ ಗ್ರೇಡ್ ೧ ಗ್ರಾ.ಪಂ. ಅಧ್ಯಕ್ಷ ಪಿ.ಆರ್. ಸುನಿಲ್‌ಕುಮಾರ್ ಮಾತನಾಡಿ, ಬಿಲ್ಲವ ಸಮುದಾಯದ ಸಮಸ್ಯೆಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಹರಿಸುವ ನಿಟ್ಟಿನಲ್ಲಿದ್ದರೆ ತಾವು ಶ್ರಮಿಸುವುದಾಗಿ ಭರವಸೆ ನೀಡಿದರು. ಎಲ್ಲಾ ಸಂಘ ಸಂಸ್ಥೆಗಳು ಮತ್ತು ಸಮಾಜಗಳು ತಮ್ಮ ವ್ಯಾಪ್ತಿಯಲ್ಲಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸುವುದರೊಂದಿಗೆ ನಾವೆಲ್ಲಾರೂ ಒಂದು ಎಂಬ ಸಮಗ್ರ ಹಿಂದೂ ಸಮಾಜದ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ಕರೆ ನೀಡಿದರು. ಸುಂಟಿಕೊಪ್ಪದಲ್ಲಿ ಹಿಂದೂ ರುದ್ರಭೂಮಿಯನ್ನು ಅಭಿವೃದ್ಧಿಗೊಳಿಸಲು ಮುಂದಾಗಿದ್ದೇವೆ ಸಮಾಜದ ಉಪಯೋಗಕ್ಕಾಗಿ ಸರ್ವರು ಕೈಜೋಡಿಸುವಂತೆ ಕೋರಿದರು.

ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ರಾಜೇಶ್ ಕೋಟ್ಯಾನ್ ಮಾತನಾಡಿ ಯುವ ಜನಾಂಗ ಉನ್ನತ ವಿದ್ಯಾಭ್ಯಾಸದೊಂದಿಗೆ ಜೀವನದಲ್ಲಿ ಉನ್ನತ ಹುದ್ದೆಗಳನ್ನು ಪಡೆಯಲು ಶ್ರಮ ಹಾಕಬೇಕು. ಆದರೆ ಯುವಜನಾಂಗ ದುಶ್ಚಟಗಳ ದಾಸರಾಗುತ್ತಿದ್ದು ಇದು ಸಮಾಜಕ್ಕೆ ಮಾರಕವಾಗಿದ್ದು, ಯುವಜನತೆ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ವಿಷಾದಿಸಿದರು.

ಬೆಳಿಗ್ಗೆ ಗಣಹೋಮ, ೮ ಗಂಟೆಗೆ ಉಪ್ಪಿನಂಗಡಿಯ ವಿನಯ್ ಶಾಂತಿ ಮತ್ತು ತಂಡದವರಿAದ ವಿಶೇಷ ಆಕರ್ಷಣೀಯವಾದ ನಾರಾಯಣ ಗುರುಗಳ ಮಂಡಲ ಕಲಾಕೃತಿಯೊಂದಿಗೆ ಗುರುಪೂಜೋತ್ಸವ ನಡೆಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಕುಶಾಲನಗರ ತಾಲೂಕು ಆಹಾರ ನಿರೀಕ್ಷಕರು ಎಂ.ಎಸ್.ಸ್ವಾತಿ, ಪೆರಾಜೆ ಸೋಮವಾರಪೇಟೆ ಶ್ರೀ ನಾರಾಯಣ ಗುರುಗಳ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಬಿ.ಎ.ಭಾಸ್ಕರ್, ವೀರಾಜಪೇಟೆ ಬಿಲ್ಲವ ಸಂಘದ ಅಧ್ಯಕ್ಷ ಗಣೇಶ್, ಕುಶಾಲನಗರ ಕೋಟಿಚೆನ್ನಯ್ಯ ಬಿಲ್ಲವ ಸಂಘದ ಅಧ್ಯಕ್ಷ ಸುಧೀರ್ ಎಸ್., ಮಡಿಕೇರಿ ಬಿಲ್ಲವ ಸಂಘದ ಅಧ್ಯಕ್ಷೆ ಲೀಲಾವತಿ, ಸುಂಟಿಕೊಪ್ಪ ಹೋಬಳಿ ದೇಯಿಬೈದೇತಿ ಬಿಲ್ಲವ ಮಹಿಳಾ ಸಂಘದ ಮಧುನಾಗಪ್ಪ, ಸುಂಟಿಕೊಪ್ಪ ಹೋಬಳಿ ಬಿಲ್ಲವ ವಿದ್ಯಾರ್ಥಿ ಘಟಕದ ಅಧ್ಯಕ್ಷ ಪ್ರೀತಮ್ ಬಿ.ಎಸ್. ಅವರುಗಳು ಉಪಸ್ಥಿತರಿದ್ದರು.

ಸುಂಟಿಕೊಪ್ಪ ಹೋಬಳಿ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಬಿ.ಎಂ. ಮುಖೇಶ್ ಅಧ್ಯಕ್ಷತೆ ವಹಿಸಿದ್ದರು.

ಚಂದ್ರಾವತಿ ಮತ್ತು ಚಿತ್ರಾ ಪ್ರಾರ್ಥಿಸಿ, ಸುಂಟಿಕೊಪ್ಪ ಹೋಬಳಿ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಬಿ.ಎಂ.ಮುಖೇಶ್ ಸ್ವಾಗತಿಸಿ, ಸಂಧ್ಯಾ ಮಂಜುನಾಥ್, ಮತ್ತು ವೆಂಕಪ್ಪ ಕೋಟ್ಯಾನ್ ನಿರೂಪಿಸಿದರು.

ಸಮಾರಂಭಕ್ಕೂ ಮುನ್ನ ಕೋದಂಡ ರಾಮ ಮಂದಿರದಿAದ ಭವ್ಯ ಅಲಂಕೃತ ಮಂಟಪದಲ್ಲಿ ಶ್ರೀ ನಾರಾಯಣ ಗುರುಗಳ ಮತ್ತು ಕೋಟಿ ಚೆನ್ನಯ್ಯ ಅವರ ಭಾವಚಿತ್ರ ಮತ್ತು ಕುಂಭ ಕಳಸದೊಂದಿಗೆ ಮಹಿಳೆಯರು ವಿಶೇಷ ಆಕರ್ಷಕವಾದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಖ್ಯಾತ ವಿಷ್ಣುಮೂರ್ತಿ ಕುಣಿತ ಭಜನಾ ಮಂಡಳಿಯ ತಿರ್ಲೆ ಕುಣಾಲು ಭಜನಾ ಕುಣಿತದೊಂದಿಗೆ ಭಾವಚಿತ್ರವನ್ನು ಇರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿತು.

ನಾರಾಯಣ ಗುರುಗಳ ಭಾವಚಿತ್ರವನ್ನು ರಂಗೋಲಿ ಬಣ್ಣ ಬಣ್ಣದ ಹುಡಿಯನ್ನು ಬಳಸಿ ನಾರಾಯಣ ಗುರುಗಳ ಭಾವಚಿತ್ರ ಉಪ್ಪಿನಂಗಡಿಯ ಖ್ಯಾತ ಜ್ಯೋತಿಷ್ಯರಾದ ವಿನಯ್ ಶಾಂತಿ ಮತ್ತು ತಂಡದವರು ಗುರುಪೂಜೋತ್ಸವವನ್ನು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಪ್ರಸ್ತುತ ವರ್ಷ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ವಯೋನಿವೃತ್ತರಾದ ೭ ಮಂದಿಯನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಸಭಾ ಕಾರ್ಯಕ್ರಮದ ನಂತರ ೩ ವಯೋಮಾನ ವಿಭಾಗದಲ್ಲಿ ಬಲೆ ನಲಿಪುಗ ಜಿಲ್ಲಾ ಮಟ್ಟದ ನೃತ್ಯ ಕಲಾ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಬಹುಮಾನ ವಿತರಣೆಯೊಂದಿಗೆ ಕಾರ್ಯಕ್ರಮಕ್ಕೆ ತೆರಬಿದ್ದಿತ್ತು.