ನಾಪೋಕ್ಲು, ನ. ೩೦: ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಸಂಯುಕ್ತ ಆಶ್ರಯದಲ್ಲಿ ಸುವರ್ಣ ಕರ್ನಾಟಕ ೫೦ರ ಸಂಭ್ರಮ ಮತ್ತು ೬೮ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಭಾಗಮಂಡಲದ ಕೆವಿಜಿ ತಾಂತ್ರಿಕ ಕಾಲೇಜಿನಲ್ಲಿ ನಡೆಯಿತು.
ಕೆವಿಜಿ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಶ್ರೀಕಾಂತ್ ಕೆ.ವಿ. ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ತಮ್ಮ ಅನಿಸಿಕೆ ವ್ಯಕ್ತಪಡಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಅವರು ಮುಖ್ಯ ಭಾಷಣ ಕಾರರಾಗಿ ಭಾಗವಹಿಸಿ ಮಾತನಾಡಿ, ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣವಾಗಿ ೫೦ ವರ್ಷಗಳು ತುಂಬಿರುವ ಶುಭ ಸಂದರ್ಭದಲ್ಲಿ ಸುವರ್ಣ ಕರ್ನಾಟಕ ೫೦ರ ಸಂಭ್ರಮಾ ಚರಣೆಯನ್ನು ನಡೆಸಲಾಗುತ್ತಿದೆ. ಹಾಗೆಯೇ ಕೊಡಗು ಜಿಲ್ಲೆಯಲ್ಲಿಯೂ ಎಲ್ಲಾ ಹಳ್ಳಿ ಹಳ್ಳಿಗಳಲ್ಲಿರುವ ಶಾಲೆಗಳಲ್ಲಿ ಸುವರ್ಣ ಸಂಭ್ರಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ನಾವು ಕನ್ನಡವನ್ನು ಉಳಿಸಿಕೊಳ್ಳಬೇಕಾದರೆ ಮೊದಲಿಗೆ ವ್ಯಾವಹಾರಿಕವಾಗಿ ಕೂಡ ಕನ್ನಡವನ್ನೇ ಬಳಸಬೇಕು ಎಂದು ಕಿವಿಮಾತು ಹೇಳಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಮುನೀರ್ ಅಹಮದ್ ಮಾತನಾಡಿ, ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಶಿಸ್ತು ಪ್ರದರ್ಶನದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಮತ್ತೊಬ್ಬ ಅತಿಥಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪುದಿಯನೆರವನ ರೇವತಿ ರಮೇಶ್ ಮಾತನಾಡಿ, ಕನ್ನಡ ಭಾಷೆ ಹೆಚ್ಚಾಗಿ ಬಳಕೆಯಾಗಲಿ ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಡಾ. ಅಂಬೇಡ್ಕರ್ ವಸತಿ ಶಾಲೆಯ ಪ್ರಾಚಾರ್ಯೆ ನೀತಾ ಕೆ.ಡಿ. ಮಾತನಾಡಿ, ನಮ್ಮ ಶಾಲೆಯಲ್ಲಿ ಪರಿಷತ್ ವತಿಯಿಂದ ಕನ್ನಡದ ಹಬ್ಬ ಆಚರಿಸುತ್ತಿರುವುದು ಹೆಮ್ಮೆ ತಂದಿದೆ. ವಿದ್ಯಾರ್ಥಿಗಳಿಗೆ ಹಬ್ಬದ ವಾತಾವರಣ ಸೃಷ್ಟಿಯಾಗಿದ್ದು ಇಂಗ್ಲಿಷ್ ಕಲಿಕೆಯ ನಡುವೆ ಕನ್ನಡದ ಕಂಪು ಪಸರಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಕರ್ನಾಟಕ ಸಂಭ್ರಮ ೫೦ ರಲ್ಲಿ ಪರಿಷತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಜಾನಪದ ಸಿರಿ, ಗ್ರಾಮ ಸಿರಿ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಹಾಗೂ ಕನ್ನಡ ಅಭಿಮಾನಿಗಳ ಜೊತೆ ಸೇರಿ ಆಚರಿಸಲಾಗುವುದು ಎಂದರು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಪ್ರಶಂಸನಾ ಪತ್ರ ನೀಡÀಲಾಯಿತು. ವಿದ್ಯಾರ್ಥಿಗಳಿಂದ ಕನ್ನಡ ನಾಡು-ನುಡಿ ಕುರಿತ ಸಮೂಹ ಗೀತ ಗಾಯನ ಹಾಗೂ ಸಮೂಹ ನೃತ್ಯ ಪ್ರದರ್ಶನ ಸೊಗಸಾಗಿ ಮೂಡಿಬಂದವು. ಭಾಗಮಂಡಲ ಕಾವೇರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಕೆ.ಜೆ. ದಿವಾಕರ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧಿಕಾರಿ ಸಂಪತ್ ಕುಮಾರ್, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರಿಶಿತ್ ಮಾದಯ್ಯ, ಸಂಘಟನಾ ಕಾರ್ಯದರ್ಶಿ ತಳೂರು ದಿನೇಶ್ ಕರುಂಬಯ್ಯ, ಚೊಕ್ಕಾಡಿ ಪ್ರೇಮ ರಾಘವಯ್ಯ, ಕಾವೇರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಕುಂಚಡ್ಕ ಕಸ್ತೂರಿ, ಅಂಬೇಡ್ಕರ್ ವಸತಿ ಶಾಲೆಯ ಶಿಕ್ಷಕ ವೃಂದ, ಭಾಗಮಂಡಲ ಹೋಬಳಿಯ ಪರಿಷತ್ ಪದಾಧಿಕಾರಿಗಳು ಸೇರಿದಂತೆ ಕನ್ನಡ ಅಭಿಮಾನಿಗಳು ಭಾಗವಹಿಸಿದ್ದ ಕಾರ್ಯಕ್ರಮವನ್ನು ಶಾಲೆಯ ಕನ್ನಡ ಶಿಕ್ಷಕಿ ರೂಪ ನಿರೂಪಿಸಿ, ಶ್ಯಾಮಿಲಿ ಬಿ.ಬಿ. ಸ್ವಾಗತಿಸಿ, ವಿದ್ಯಾ ಭಾರದ್ವಾಜ್ ವಂದಿಸಿದರು.