ಸೋಮವಾರಪೇಟೆ, ನ. ೩೦: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ೬ ವರ್ಷಗಳ ಹಿಂದೆ ಕಾರ್ಯಾರಂಭ ಮಾಡಿ ರೋಗಿಗಳಿಗೆ ಸೇವೆ ಒದಗಿಸುತ್ತಿದ್ದ ಡಯಾಲಿಸಿಸ್ ಘಟಕ, ಸಿಬ್ಬಂದಿಗಳ ಮುಷ್ಕರದಿಂದ ಸ್ಥಗಿತಗೊಂಡಿದ್ದು, ರೋಗಿಗಳು ಪರದಾಡುವಂತಾಗಿದೆ.
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಇಂದಿನಿAದ ಡಯಾಲಿಸಿಸ್ ಕೇಂದ್ರದ ಸಿಬ್ಬಂದಿಗಳು ರಾಜ್ಯದಾದ್ಯಂತ ಅನಿರ್ದಿಷ್ಟಾವಧಿ ಯವರೆಗೆ ಮುಷ್ಕರ ಹಮ್ಮಿಕೊಂಡಿದ್ದು, ಸೋಮವಾರಪೇಟೆ ಕೇಂದ್ರದ ಸಿಬ್ಬಂದಿಗಳೂ ಸಹ ಮುಷ್ಕರಕ್ಕೆ ಕೈ ಜೋಡಿಸಿರುವ ಹಿನ್ನೆಲೆ ಇಲ್ಲಿನ ಡಯಾಲಿಸಿಸ್ ಘಟಕ ಸ್ಥಗಿತಗೊಂಡಿದೆ.
ಸೋಮವಾರಪೇಟೆ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಐವರು ಸಿಬ್ಬಂದಿಗಳು ಬೆಂಗಳೂರಿನಲ್ಲಿ ನಡೆಯುತ್ತಿರುವ ಮುಷ್ಕರದಲ್ಲಿ ಭಾಗಿಯಾಗಿದ್ದಾರೆ.
ರಾಜ್ಯದಾದ್ಯಂತ ಇರುವ ಸರ್ಕಾರಿ ಆಸ್ಪತ್ರೆಗಳ ಡಯಾಲಿಸಿಸ್ ಘಟಕದ ನಿರ್ವಹಣೆಯ ಉಸ್ತುವಾರಿಯನ್ನು ಖಾಸಗಿಯಾಗಿ ಸಂಜೀವಿನಿ ಸಂಸ್ಥೆಯವರು ಗುತ್ತಿಗೆ ಪಡೆದಿದ್ದು, ಸಿಬ್ಬಂದಿಗಳಿಗೆ ಕಳೆದ ಎರಡು ವರ್ಷಗಳಿಂದ ಸರಿಯಾಗಿ ವೇತನ ನೀಡುತ್ತಿಲ್ಲ. ಇಎಸ್ಐ, ಪಿಎಫ್ ಮತ್ತು ಇತರ ಭತ್ಯೆಯೊಂದಿಗೆ ವೇತನವನ್ನು ಕಡಿತ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಿಬ್ಬಂದಿಗಳು ಮುಷ್ಕರದ ಹಾದಿ ಹಿಡಿದಿರುವುದರಿಂದ ಘಟಕ ಸ್ಥಗಿತವಾಗಿದೆ.
ಡಯಾಲಿಸಿಸ್ ಘಟಕದಲ್ಲಿ ನುರಿತ ಸಿಬ್ಬಂದಿಗಳೇ ಕರ್ತವ್ಯ ನಿರ್ವಹಿಸಬೇಕಿದೆ. ಸೋಮವಾರ ಪೇಟೆಯಲ್ಲಿ ಆರಂಭ ದಿಂದಲೂ ಉತ್ತಮ ಸೇವೆಯನ್ನೇ ನೀಡುತ್ತಾ ಬಂದಿರುವ ಸಿಬ್ಬಂದಿಗಳು ತಮ್ಮ ನ್ಯಾಯೋಚಿತ ಬೇಡಿಕೆಗಾಗಿ ಅನಿವಾರ್ಯವಾಗಿ ಮುಷ್ಕರದಲ್ಲಿ ಭಾಗಿಯಾಗಿರುವುದರಿಂದ, ಇಲ್ಲಿ ಚಿಕಿತ್ಸೆಗೆ ಒಳಗಾಗುತ್ತಿರುವ ೩೫ ರೋಗಿಗಳ ಸ್ಥಿತಿ ಚಿಂತಾಜನಕ ಸ್ಥಿತಿಗೆ ತಲುಪಿದೆ.
ಸೋಮವಾರಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿರುವ ಡಯಾಲಿಸಿಸ್ ಘಟಕದಲ್ಲಿ ಪ್ರಸ್ತುತ ೩೫ ಮಂದಿ ರೋಗಿಗಳು ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಪ್ರತಿ ದಿನ ಒಂದು ಪಾಳಿಯಲ್ಲಿ ಮೂವರು ರೋಗಿಗಳಂತೆ ದಿನಕ್ಕೆ ೩ ಪಾಳಿಯಲ್ಲಿ ಡಯಾಲಿಸಿಸ್ ಮಾಡಲಾಗುತ್ತಿತ್ತು. ಇದರಿಂದಾಗಿ ಸುತ್ತಮುತ್ತಲಿನ ರೋಗಿಗಳಿಗೆ ವರದಾನವಾಗಿತ್ತು.
ಸೋಮವಾರಪೇಟೆ ಪಟ್ಟಣ ಮಾತ್ರವಲ್ಲದೆ ಕೊಡ್ಲಿಪೇಟೆ, ಐಗೂರು, ಕುಶಾಲನಗರ, ಹೆಬ್ಬಾಲೆ, ಶಿರಂಗಾಲ, ಶನಿವಾರಸಂತೆ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗಗಳಿಂದ ಬಡ ರೋಗಿಗಳು ಡಯಾಲಿಸಿಸ್ ಚಿಕಿತ್ಸೆಗೆ ತಪ್ಪದೇ ಒಳಪಡುತ್ತಿದ್ದು, ಇದೀಗ ಘಟಕ ಸ್ಥಗಿತ ಗೊಂಡಿರುವುದರಿAದ ಆರೋಗ್ಯದಲ್ಲಿ ಏರುಪೇರಾಗುತ್ತಿದೆ. ಜೀವ ಉಳಿಸಿಕೊಳ್ಳಬೇಕಾದರೆ ಅನಿವಾರ್ಯ ವಾಗಿ ಖಾಸಗಿ ಕೇಂದ್ರಗಳಿಗೆ ತೆರಳಬೇಕಿದೆ.
ಒಮ್ಮೆ ಡಯಾಲಿಸಿಸ್ಗೆ ಒಳಪಡಬೇಕಾದರೆ ಸಾವಿರಾರು ರೂಪಾಯಿ ವೆಚ್ಚವಾಗಲಿದೆ. ಈ ಹಣವನ್ನು ಭರಿಸಲು ಬಹುತೇಕ ಮಂದಿಗೆ ಸಾಧ್ಯವಾಗುತ್ತಿಲ್ಲ. ಪರಿಣಾಮ ರೋಗಿಗಳ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ ಎಂದು ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಅಳಲು ತೋಡಿಕೊಂಡಿದ್ದಾರೆ.