ಮಡಿಕೇರಿ, ನ. ೩೦: ಕೊಡವ ಅಭಿವೃದ್ಧಿ ನಿಗಮಕ್ಕೆ ೧೦ ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ನೀಡಿರುವ ಹೇಳಿಕೆ ಸುಳ್ಳು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ತಿಳಿಸಿದ್ದಾರೆ.
ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕೊಡವ ಸಮಾಜಗಳ ಅಭಿವೃದ್ಧಿಗಾಗಿ ದೇವರಾಜು ಅರಸು ನಿಗಮದ ಮೂಲಕ ಬಿಡುಗಡೆಯಾಗಿರುವ ೧೦ ಕೋಟಿ ಅನುದಾನವನ್ನು ಕೊಡವ ಅಭಿವೃದ್ಧಿ ನಿಗಮಕ್ಕೆ ಬಿಡುಗಡೆ ಆಗಿರುವ ಅನುದಾನ ಎಂಬುದಾಗಿ ಸಂಸದ ಪ್ರತಾಪ್ಸಿಂಹ ಸುಳ್ಳು ಹೇಳುತ್ತಿದ್ದಾರೆ. ಚುನಾವಣೆ ಸಂದರ್ಭ ಮಾತ್ರ ಕೊಡಗಿನಲ್ಲಿ ಪ್ರತ್ಯಕ್ಷವಾಗುವ ಪ್ರತಾಪ್ಸಿಂಹ ಅವರಿಗೆ ಉಳಿದ ಸಂದರ್ಭಗಳಲ್ಲಿ ಕೊಡಗಿನ ಅಭಿವೃದ್ಧಿ ಬಗ್ಗೆ ಕಾಳಜಿ ಇರುವುದಿಲ್ಲ. ಹಾಲಿ ಶಾಸಕರ ಬಗ್ಗೆ ವೃಥಾ ಆರೋಪ ಮಾಡುವುದನ್ನು ಪ್ರತಾಪ್ಸಿಂಹ ಅವರು ನಿಲ್ಲಿಸಬೇಕು. ಸುಳ್ಳು ಆರೋಪಗಳನ್ನು ಮಾಡುವುದನ್ನು ಮುಂದುವರಿಸಿದರೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಧರ್ಮಜ ಉತ್ತಪ್ಪ ಎಚ್ಚರಿಸಿದರು.
ಕಾಂಗ್ರೆಸ್ ರಾಜ್ಯ ವಕ್ತಾರ ಸಂಕೇತ್ ಪೂವಯ್ಯ ಮಾತನಾಡಿ, ಸಂಸದ ಪ್ರತಾಪ್ಸಿಂಹ ಅವರು ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿಲ್ಲ. ಕಾಡಾನೆ ದಾಳಿಯಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ಸಾಂತ್ವನ ಹೇಳುವ ಸೌಜನ್ಯವನ್ನು ಕೂಡ ತೋರಿಲ್ಲ. ಲೋಕಸಭೆಯಲ್ಲಿ ಕೊಡಗಿನ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಲು ಅವರಿಗೆ ಆಸಕ್ತಿ ಇಲ್ಲ ಎಂದು ದೂರಿದರು.
ಜಿಲ್ಲೆಯ ಹಾಲಿ ಶಾಸಕರುಗಳು ಜನರ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ ಎಂದ ಅವರು ಈ ಬಾರಿ ಲೋಕಸಭಾ ಚುನಾವಣೆ ಯಲ್ಲಿ ಪ್ರತಾಪ್ಸಿಂಹ ಅವರಿಗೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ನುಡಿದರು. ಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೊಲ್ಯದ ಗಿರೀಶ್, ವಿ.ಕೆ. ಸತೀಶ್, ಮಡಿಕೇರಿ ಬ್ಲಾಕ್ ಅಧ್ಯಕ್ಷ ಹಂಸ ಉಪಸ್ಥಿತರಿದ್ದರು.