ಸೋಮವಾರಪೇಟೆ, ನ. ೩೦: ತಾಲೂಕಿನ ಕಿರಗಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ನಿಸರ್ಗ ರಮಣೀಯ ತಾಣವಾದ ಮಕ್ಕಳಗುಡಿ ಬೆಟ್ಟಕ್ಕೆ ಶಾಸಕ ಡಾ. ಮಂಥರ್ ಗೌಡ ಅವರು ಭೇಟಿ ನೀಡಿ, ಮುಂದಿನ ದಿನಗಳಲ್ಲಿ ಪ್ರವಾಸಿ ತಾಣಕ್ಕೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಭರವಸೆ ನೀಡಿದರು.
ಕಿರಗಂದೂರು ಗ್ರಾ.ಪಂ. ವ್ಯಾಪ್ತಿಯ ಮಕ್ಕಳಗುಡಿ ಬೆಟ್ಟವು ಪ್ರವಾಸಿ ತಾಣವಾಗಿ ಮಾರ್ಪಟ್ಟಿದ್ದು, ಇಲ್ಲಿನ ವೀಕ್ಷಣಾ ಗೋಪುರ ದುರಸ್ತಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದರೆ ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಬಹುದಾಗಿದೆ ಎಂದು ಸ್ಥಳೀಯರು, ಶಾಸಕರ ಗಮನ ಸೆಳೆದ ಸಂದರ್ಭ, ಮುಂದಿನ ದಿನಗಳಲ್ಲಿ ಮಕ್ಕಳಗುಡಿ ಬೆಟ್ಟಕ್ಕೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದರು. ಕ್ಷೇತ್ರ ವ್ಯಾಪ್ತಿಯಲ್ಲಿ ಅನೇಕ ಪ್ರವಾಸಿ ತಾಣಗಳಿದ್ದು, ಮೂಲಭೂತ ಸೌಕರ್ಯಗಳನ್ನು ಒದಗಿಸಿದರೆ ಉತ್ತಮ ಪ್ರವಾಸಿ ಕೇಂದ್ರಗಳಾಗಿ ರೂಪುಗೊಳ್ಳುತ್ತವೆ. ಆ ಮೂಲಕ ಪ್ರವಾಸೋದ್ಯಮದ ಬೆಳವಣಿಗೆ ಸಾಧ್ಯವಾಗಲಿದೆ. ಮಕ್ಕಳ ಗುಡಿ ಬೆಟ್ಟದ ಅಭಿವೃದ್ಧಿಗೆ ವಿಶೇಷ ಗಮನ ಹರಿಸುವುದಾಗಿ ಶಾಸಕರು ತಿಳಿಸಿದರು. ಈ ಸಂದರ್ಭ ಪ್ರಮುಖರಾದ ಎಸ್.ಎಂ. ಚಂಗಪ್ಪ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.