ವರದಿ : ದುಗ್ಗಳ ಸದಾನಂದ.
ನಾಪೋಕ್ಲು, ನ. ೩೦: ನಾಪೋಕ್ಲುವಿನ ಬಿದ್ದಾಟಂಡ ವಾಡೆಯ ನೂರಂಬಾಡ ಮಂದ್ನಲ್ಲಿ ಗ್ರಾಮಸ್ಥ ರೆಲ್ಲರ ಸಮಾಗಮದೊಂದಿಗೆ ನಡೆದ ಸಾಂಪ್ರದಾಯಿಕ ಹುತ್ತರಿ ಕೋಲಾಟ ಧಾನ್ಯ ಲಕ್ಷಿö್ಮಯನ್ನು ಬರಮಾಡಿಕೊಳ್ಳುವ ಹಬ್ಬದ ಸಂಭ್ರಮವನ್ನು ವಿಸ್ತರಿಸಿತು.
ನಾಪೋಕ್ಲು, ಬೇತು ಮತ್ತು ಕೋಕೇರಿ ಗ್ರಾಮಗಳನ್ನು ಒಳಗೊಂಡAತೆ ನಡೆಯುವ ಐತಿಹಾಸಿಕ ನೂರಂಬಾಡ ಕೋಲ್ ಮಂದ್ನಲ್ಲಿ ಹುತ್ತರಿ ಕೋಲಾಟಕ್ಕೂ ಮುನ್ನ ಬೇತು ಮಕ್ಕಿ ಶಾಸ್ತಾವು ದೇವಾಲಯದಿಂದ ಸಂಪ್ರದಾಯದAತೆ ತಕ್ಕ ಮುಖ್ಯಸ್ಥರು ದೇವರ ತಿರುವಾಭರಣದೊಂದಿಗೆ ಕಾಪಾಳ ಕಳಿ ವೇಷಧಾರಿಗಳು ಮತ್ತು ಕೊಂಬು ಕೊಟ್ಟ್ ವಾಲಗದೊಂದಿಗೆ ಬೆಳಿಗ್ಗೆ ಮೆರವಣಿಗೆಯ ಮೂಲಕ ನೂರಂಬಾಡ ಮಂದ್ನತ್ತ ಹೆಜ್ಜೆ ಹಾಕಿದರು.
ಅನೂಚಾನವಾಗಿ ನಡೆದುಕೊಂಡು ಬಂದ ಪದ್ಧತಿಯಂತೆ ಮೆರವಣಿಗೆಯ ನಡುವೆ ಕುರುಂಬರಾಟ್ ಬನದಲ್ಲಿ ವಿಶ್ರಾಂತಿಯನ್ನು ಪಡೆದು ಮಧ್ಯಾಹ್ನ ನೂರಂಬಾಡ ಮಂದ್ಗೆ ತಿರುವಾಭರಣದೊಂದಿಗೆ ಆಗಮಿಸಿದ ಬೇತು ಗ್ರಾಮದ ತಕ್ಕಮುಖ್ಯಸ್ಥರನ್ನು ಗ್ರಾಮದ ತಕ್ಕಮುಖ್ಯಸ್ಥರು ಶ್ರೀ ಮಹದೇವರ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಪೂಜೆ ಸಲ್ಲಿಸಿ ಸ್ವಾಗತಿಸಿದ ಬಳಿಕ ಹುತ್ತರಿ ಕೋಲಾಟಕ್ಕೆ ಚಾಲನೆ ದೊರಕಿತು. ನಾದಕ್ಕೆ ತಕ್ಕಂತೆ ಮೂರು ಗ್ರಾಮದ ತಕ್ಕಮುಖ್ಯಸ್ಥರು ಗ್ರಾಮಸ್ಥರು ಮಂದ್ಗೆ ಪ್ರದಕ್ಷಿಣೆ ಬರುವುದರೊಂದಿಗೆ ಲಾಲಿತ್ಯ ಪೂರ್ಣವಾಗಿ ವೈವಿಧ್ಯತೆಗಳನ್ನು ಮಿಳಿತಗೊಳಿಸಿಕೊಂಡ ಕೋಲಾಟ್ನ ನಾದದೊಂದಿಗೆ ‘ಬಪ್ಪಕ ಪುತ್ತರಿ ಬಣ್ಣತೆ ಬಾತ್ ಪೊಯಿಲೆ ಪೊಯಿಲೆ,
ಪೋಪಕ ಪುತ್ತರಿ ಎಣ್ಣತೆ ಪೋಚಿ ಪೊಯಿಲೆ ಪೊಯಿಲೆ.. ಉದ್ಘೋಷ ಮಂದ್ನುದ್ದಕ್ಕೂ ಪಸರಿಸಿತು. ಗ್ರಾಮಸ್ಥರ ಉತ್ಸಾಹ, ಹರ್ಷೋದ್ಗಾರಗಳ ನಡುವೆ ನೂರಂಬಾಡ ಮಂದ್ನ ಹುತ್ತರಿ ಕೋಲಾಟ ಸಂಭ್ರಮವನ್ನು ನೆರೆದ ಮಂದಿ ಮನದುಂಬಿಕೊAಡರು. ನಾಪೋಕ್ಲು, ಕೊಳಕೇರಿ, ಬೇತು ೩ ಗ್ರಾಮದ ತಕ್ಕ ಮುಖ್ಯಸ್ಥರು, ಊರು ಹಾಗೂ ಪರ ಊರಿನ ಸಾರ್ವಜನಿಕರು ಭಾಗವಹಿಸಿದ್ದರು. ಈ ನಾಡ್ ಮಂದ್ನಲ್ಲಿ ದೊಡ್ಡ ಕೋಲು ಮತ್ತು ಸಣ್ಣ ಕೋಲು ಎಂದು ಎರಡು ದಿನ ಕೋಲಾಟ ನಡೆಸಿ ನಂತರ ಮಕ್ಕಿ ದೇವಾಲಯದಲ್ಲಿ ಕೋಲು ಒಪ್ಪಿಸುವ ಪದ್ಧತಿ ಇರುತ್ತದೆ.
ಕಾಪಳ ಕಳಿ : ಹುತ್ತರಿ ಕೋಲಾಟದ ಹಬ್ಬದಲ್ಲಿ ಕಾಪಳ ಕಳಿಗೆ ಹೆಚ್ಚು ಮಹತ್ವ ಇದೆ. ಹುತ್ತರಿ ಹಬ್ಬದಂದು ಬೇತು ಗ್ರಾಮದ ಮಕ್ಕಿ ದೇವಾಲಯಕ್ಕೆ ಅಡಗಿದ ಕೆಂಬಟ್ಟಿ ಜನಾಂಗದವರು ಕಾಪಳ ವೇಷವನ್ನು ಧರಿಸುತ್ತಾರೆ. ಮೈಗೆ ಕಪ್ಪು ಬಣ್ಣದ ಮಸಿಯನ್ನು ಬಳಿದು ಕೈಯಲ್ಲಿ ಅಂಗರೇ ಕೋಲು ಹಿಡಿದು ವಾದ್ಯಕ್ಕೆ ತಕ್ಕಂತೆ ಕುಣಿಯುತ್ತಾರೆ. ಈ ವೇಷ ಎರಡು ಮೂರು ದಿನಗಳ ಕಾಲ ಇದ್ದು ಸಾಂಪ್ರದಾಯಿಕವಾಗಿ ನಡೆದು ಬಂದಿರುತ್ತದೆ. ಕೋಲಾಟದಲ್ಲಿ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡು ಕೋಲಾಟ ಕಾರ್ಯಕ್ರಮಕ್ಕೆ ಮೆರುಗು ನೀಡುತ್ತಾರೆ.