ಸೋಮವಾರಪೇಟೆ, ನ. ೩೦: ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಣ್ಣೀರುಹಳ್ಳ ಗ್ರಾಮದಲ್ಲಿ ಬಸ್ ನಿಲ್ದಾಣವಿದ್ದರೂ ಸಹ, ಇದರ ಅವ್ಯವಸ್ಥೆಯಿಂದಾಗಿ ಪ್ರಯಾಣಿಕರು ರಸ್ತೆ ಬದಿಯಲ್ಲಿ ಮಳೆ, ಬಿಸಿಲೆನ್ನದೇ ಕಾಯುವ ಸ್ಥಿತಿ ನಿರ್ಮಾಣವಾಗಿದೆ.

ತಣ್ಣೀರುಹಳ್ಳ ಗ್ರಾಮದಲ್ಲಿ ೩೦ ವರ್ಷಗಳ ಹಿಂದೆ ನಿರ್ಮಿಸಿರುವ ಪ್ರಯಾಣಿಕರ ತಂಗುದಾಣ ಇದೀಗ ಉಪಯೋಗಕ್ಕೆ ಬಾರದ ಸ್ಥಿತಿಗೆ ತಲುಪಿದ್ದು, ಕೂಡಲೇ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದುರಸ್ತಿ ಕಾರ್ಯಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಸೋಮವಾರಪೇಟೆ-ಕೊಣನೂರು ರಾಜ್ಯ ಹೆದ್ದಾರಿಯಲ್ಲಿರುವ ತಣ್ಣೀರುಹಳ್ಳ ಗ್ರಾಮದ ತಿರುವಿನಲ್ಲಿ ಬಸ್ ನಿಲ್ದಾಣ ನಿರ್ಮಿಸಲ್ಪಟ್ಟಿದ್ದು, ನಿಲ್ದಾಣದ ಅವ್ಯವಸ್ಥೆಯಿಂದಾಗಿ ಬಸ್‌ಗಳನ್ನು ನಿಲ್ಲಿಸುತ್ತಿಲ್ಲ. ಒಳಗಡೆ ಅಶುಚಿತ್ವದಿಂದ ಕೂಡಿದ್ದು, ಹೊರಗೆ ದಾರಿಯಲ್ಲಿ ಮಣ್ಣನ್ನು ಸುರಿಯಲಾಗಿದೆ. ಪ್ರಯಾಣಿಕರಿಗೆ ಉಪಯೋಗಕ್ಕೆ ಬಾರದ ಬಸ್ ನಿಲ್ದಾಣ ಇಂದು ಪುಂಡ ಪೋಕರಿಗಳಿಗೆ ಕಾಲಹರಣ ಮಾಡಲು, ಧೂಮಪಾನ ಮತ್ತು ಮದ್ಯಪಾನಕ್ಕೆ ಸೀಮಿತವಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿಲ್ದಾಣದ ಅವ್ಯವಸ್ಥೆಯ ಬಗ್ಗೆ ಪಂಚಾಯಿತಿ ಅಧಿಕಾರಿಗಳು, ಸದಸ್ಯರು, ಹಾಗೂ ಅಧ್ಯಕ್ಷರು ಗಮನ ಹರಿಸಿ ಸರಿಪಡಿಸಲು ಮುಂದಾಗುತ್ತಿಲ್ಲ ಎಂದು ಸ್ಥಳೀಯ ನಿವಾಸಿ ಆನಂದ್‌ರಾಜ್ ದೂರಿದ್ದಾರೆ.

ಬಸ್ ತಂಗುದಾಣದ ಹಿಂದೆ ಅಂಗನವಾಡಿ ಕೇಂದ್ರವಿದ್ದು, ತಂಗುದಾಣಕ್ಕೆ ಹೊಂದಿಕೊAಡAತಿರುವ ವಿದ್ಯುತ್ ಕಂಬಕ್ಕೆ ರಸ್ತೆ ದೀಪದ ಸ್ವಿಚ್ಚನ್ನು ಅಳವಡಿಸಲಾಗಿದೆ. ಆದರೆ ಇದಕ್ಕೆ ಯಾವುದೇ ಮುಚ್ಚಳವಿಲ್ಲದೆ, ಅಪಾಯ ಎದುರಾಗಿದೆ. ತಿರುವಿನಲ್ಲಿ ಬಸ್ ನಿಲ್ಲಿಸದ ಕಾರಣ, ಪ್ರಯಾಣಿಕರು ಮಳೆ ಬಿಸಿಲೆನ್ನದೆ ಶಾಲಾ ಗೇಟ್ ಬಳಿಯಲ್ಲಿ ಬಸ್‌ಗಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ತಕ್ಷಣ ಪ್ರಯಾಣಿಕರಿಗೆ ಅನುಕೂಲ ವಾಗುವಂತೆ ಬಸ್ ನಿಲ್ದಾಣವನ್ನು ದುರಸ್ತಿಗೊಳಿಸಬೇಕೆಂದು ಗ್ರಾಮದ ಹರೀಶ್ ಸೇರಿದಂತೆ ಇತರರು ಆಗ್ರಹಿಸಿದ್ದಾರೆ.