೯೭ ತೇಜಸ್, ೧೫೬ ಪ್ರಚಂಡ ಖರೀದಿಗೆ ಕೇಂದ್ರ ಅನುಮೋದನೆ

ನವದೆಹಲಿ, ನ. ೩೦: ಸಶಸ್ತç ಪಡೆಗಳ ಒಟ್ಟಾರೆ ಯುದ್ಧ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ೯೭ ತೇಜಸ್ ಲಘು ಯುದ್ಧ ವಿಮಾನಗಳು ಮತ್ತು ಸುಮಾರು ೧೫೬ ಪ್ರಚಂಡ್ ಹೆಲಿಕಾಪ್ಟರ್‌ಗಳನ್ನುಖರೀದಿಸಲು ಕೇಂದ್ರ ಸರ್ಕಾರ ಗುರುವಾರ ಆರಂಭಿಕ ಅನುಮೋದನೆಯನ್ನು ನೀಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಡಿಫೆನ್ಸ್ ಅಕ್ವಿಸಿಷನ್ ಕೌನ್ಸಿಲ್(ಡಿಎಸಿ) ಭಾರತೀಯ ವಾಯುಪಡೆಯ ಎಸ್‌ಯು -೩೦ ಫೈಟರ್ ಫ್ಲೀಟ್ ಅನ್ನು ಮೇಲ್ದರ್ಜೆಗೆ ಏರಿಸುವ ಪ್ರಸ್ತಾಪವನ್ನು ಸಹ ಅಂಗೀಕರಿಸಿದೆ ಎಂದು ಮೂಲಗಳು ತಿಳಿಸಿವೆ. ೯೭ ತೇಜಸ್ ಯುದ್ಧ ವಿಮಾನ, ೧೫೬ ಪ್ರಚಂಡ ಹೆಲಿಕಾಪ್ಟರ್ ಖರೀದಿ ಯೋಜನೆ ಹಾಗೂ ಎಸ್‌ಯು-೩೦ ಅಪ್‌ಗ್ರೇಡ್ ಯೋಜನೆಗೆ ೧.೬ ಲಕ್ಷ ಕೋಟಿ ರೂಪಾಯಿ ಖರ್ಚಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ರಕ್ಷಣಾ ಸಚಿವಾಲಯವು, ಡಿಎಸಿಯಿಂದ ಅನುಮತಿ ಪಡೆದ ಯೋಜನೆಗಳ ವಿವರಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ನಿರೀಕ್ಷೆಯಿದೆ.

೧೮೮ ಇಂದಿರಾ ಕ್ಯಾಂಟೀನ್ ಆರಂಭ: ಸಿದ್ದರಾಮಯ್ಯ

ಬೆಂಗಳೂರು, ನ. ೩೦: ಜನರ ಅನುಕೂಲಕ್ಕಾಗಿ ಈ ವರ್ಷ ಹೊಸದಾಗಿ ೧೮೮ ಇಂದಿರಾ ಕ್ಯಾಂಟೀನ್‌ಗಳನ್ನು ತೆರೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಹೇಳಿದ್ದಾರೆ. ಇಂದು ಶಾಸಕರ ಭವನದ ಆವರಣದಲ್ಲಿ ಸಂತ ಕನಕದಾಸರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಈ ವೇಳೆ ಇಂದಿರಾ ಕ್ಯಾಂಟೀನ್ ಕುರಿತ ಪ್ರಶ್ನೆಗೆ ಉತ್ತರಿಸಿದ ಸಿಎಂ, ಬೆಂಗಳೂರಿನಲ್ಲಿ ೨೨೫ ವಾರ್ಡ್ಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲಾಗುವುದು. ಇದಲ್ಲದೇ ಅಗತ್ಯ ಇರುವ ಕಡೆ ಕ್ಯಾಂಟೀನ್ ಆರಂಭಿಸಲಾಗುವುದು. ಇಂದಿರಾ ಕ್ಯಾಂಟೀನ್‌ಗೆ ಜಾಗದ ಕೊರತೆ ಇರುವ ಕಡೆ ಸಂಚಾರಿ ಕ್ಯಾಂಟೀನ್‌ಗಳನ್ನು ಸ್ಥಾಪಿಸಲಾಗುವುದು ಎಂದರು. ರಾಜ್ಯದ ಜನತೆಗೆ ಕನಕದಾಸ ಜಯಂತಿಯ ಶುಭಾಶಯ ಕೋರಿದ ಸಿಎಂ, ಕನಕದಾಸರು ಸಮಾಜ ಸುಧಾರಕರಾಗಿದ್ದರು. ಸಾಹಿತ್ಯದ ಮೂಲಕ ಮಾನವೀಯತೆ ಸಾರಿದ್ದರು. ತಾರತಮ್ಯವಿಲ್ಲದೆ ಸಮಾನತೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ವಿಶ್ವಮಾನವನ ಜಯಂತಿಯನ್ನು ಇಂದು ಸರ್ಕಾರ ಆಚರಿಸುತ್ತಿದೆ ಎಂದು ಹೇಳಿದರು. ಶಾಸಕ ಬಿ.ಆರ್. ಪಾಟೀಲ್ ಅವರು ತಮ್ಮನ್ನು ಭೇಟಿ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಬಿ.ಆರ್. ಪಾಟೀಲ್ ಅವರಿಗೆ ಅಧಿವೇಶನಕ್ಕೆ ಹಾಜರಾಗುವಂತೆ ಮನವೊಲಿಸಲಾಗಿದೆ ಎಂದು ತಿಳಿಸಿದರು. ಬಳಿಕ ೨೬೨ ಆಧುನಿಕ ಜೀವ ರಕ್ಷಕ ಆ್ಯಂಬುಲೆನ್ಸ್ಗಳನ್ನು ನಾಡಿಗೆ ಅರ್ಪಿಸಿದ ಸಿಎಂ ಸಿದ್ದರಾಮಯ್ಯ, ನಾಡಿನ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಸರ್ಕಾರ ಬದ್ದವಾಗಿದೆ. ಚಿಕಿತ್ಸೆ ಸಿಗದೆ ಯಾರೂ ಪ್ರಾಣ ಕಳೆದುಕೊಳ್ಳು ವಂತಾಗಬಾರದು ಎನ್ನುವ ಕಾರಣಕ್ಕೇ ತುರ್ತು ೧೦೮ ಆ್ಯಂಬುಲೆನ್ಸ್ಗಳನ್ನು ಆರೋಗ್ಯ ಸೇವೆಗೆ ಒದಗಿಸಲಾಗಿದೆ ಎಂದರು.

ಆರೋಗ್ಯ ಕವಚ ಅಡಿ ೨೬೨ ಹೊಸ ಆ್ಯಂಬ್ಯುಲೆನ್ಸ್ಗಳಿಗೆ ಚಾಲನೆ

ಬೆಂಗಳೂರು, ನ. ೩೦: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ೧೦೮ ಆ್ಯಂಬ್ಯುಲೆನ್ಸ್ ಸೇವೆಗಳ ನೂತನ ೨೬೨ ಆ್ಯಂಬ್ಯುಲೆನ್ಸ್ಗಳನ್ನು ಗುರುವಾರ ವಿಧಾನಸೌಧ ಮುಂದೆ ನಡೆದ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಧಾನಸೌಧದ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ೨೬೨ ಆಧುನಿಕ ಜೀವ ರಕ್ಷಕ ಆ್ಯಂಬ್ಯುಲೆನ್ಸ್ಗಳನ್ನು ಜನಸೇವೆಗೆ ಅರ್ಪಿಸಿದರು. ೮೨.೦೨ ಕೋಟಿ ರೂಪಾಯಿ ವೆಚ್ಚದಲ್ಲಿ ೨೬೨ ಆಂಬ್ಯುಲೆನ್ಸ್ ಗಳು ಖರೀದಿಸಲಾಗಿದೆ. ೨೬೨ ಪೈಕಿ ೧೫೭ ಆ್ಯಂಬ್ಯುಲೆನ್ಸ್ಗಳಲ್ಲಿ ಬಿಎಲ್‌ಎಸ್ ಹಾಗೂ ೧೦೫ ಆ್ಯಂಬ್ಯುಲೆನ್ಸ್ ಅಡ್ವಾನ್ಸ್ ಲೈಫ್ ಸಪೋರ್ಟ್ ಸೌಲಭ್ಯವಿದ್ದು, ಹೃದಯ ಮತ್ತು ಉಸಿರಾಟದ ತುರ್ತು ಪರಿಸ್ಥಿಗಳಲ್ಲಿ ಇವು ಸಹಕರಿಯಾಗಿವೆ. ಆಂಬ್ಯುಲೆನ್ಸ್ಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಿದ್ದರಾಮಯ್ಯ, ಜಯದೇವ ಆಸ್ಪತ್ರೆಯಲ್ಲಿರುವ ಗುಣಮಟ್ಟದ ಆರೋಗ್ಯ ಸೇವೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ಸಿಗಬೇಕು ಎನ್ನುವುದು ನಮ್ಮ ಸರ್ಕಾರದ ಗುರಿ. ಹಳೆ ಬಟ್ಟೆ-ಕೊಳಕು ಬಟ್ಟೆ ಹಾಕಿಕೊಂಡು ಬರುವ ಬಡವರನ್ನೂ ಮಾನವೀಯವಾಗಿ ನಡೆಸಿಕೊಂಡು ತಾರತಮ್ಯ ಇಲ್ಲದ ಉತ್ತಮ ಆರೋಗ್ಯ ಸೇವೆ ನೀಡಬೇಕು ಎಂದರು. ನಾಡಿನ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಸರ್ಕಾರ ಬದ್ಧವಾಗಿದೆ. ಚಿಕಿತ್ಸೆ ಸಿಗದೆ ಯಾರೂ ಪ್ರಾಣ ಕಳೆದು ಕೊಳ್ಳುವಂತಾಗಬಾರದು ಎಂಬ ಕಾರಣಕ್ಕೆ ತುರ್ತು ೧೦೮ ಆ್ಯಂಬ್ಯುಲೆನ್ಸ್ಗಳನ್ನು ಆರೋಗ್ಯ ಸೇವೆಗೆ ಒದಗಿಸಲಾಗಿದೆ. ರಾಜ್ಯದಲ್ಲಿ ೮೪೦ಕ್ಕೂ ಹೆಚ್ಚು ಆ್ಯಂಬ್ಯುಲೆನ್ಸ್ಗಳ ಅಗತ್ಯವಿದೆ. ಪ್ರತಿ ತಾಲೂಕಿನಲ್ಲಿ ೪ ಆ್ಯಂಬ್ಯುಲೆನ್ಸ್ಗಳು ಕಾರ್ಯನಿರ್ವಹಿಸುತ್ತಾ ಪ್ರತಿ ದಿನ ನೂರಾರು ಮಂದಿಗೆ ತುರ್ತು ಆರೋಗ್ಯ ಸೇವೆ ಒದಗಿಸುತ್ತಿವೆ. ಪ್ರಾಥಮಿಕ ತುರ್ತು ಚಿಕಿತ್ಸೆ ಪ್ರಾಣ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಹೇಳಿದರು.

ಪನ್ನುನ್ ಹತ್ಯೆಗೆ ಸಂಚು; ಅಮೆರಿಕ ಆರೋಪಕ್ಕೆ ಭಾರತ ಪ್ರತಿಕ್ರಿಯೆ

ನವದೆಹಲಿ, ನ. ೩೦: ಕೆನಡಾದಲ್ಲಿ ನೆಲೆಸಿರುವ ಖಲಿಸ್ತಾನಿ ಉಗ್ರ ಭಾರತ ವಿರೋಧಿ ಕೃತ್ಯಗಳಲ್ಲಿ ತೊಡಗಿರುವ ಗುರುಪತ್ವಂತ್ ಸಿಂಗ್ ಪನ್ನುನ್‌ನನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿದೆ ಎಂಬ ಅಮೆರಿಕ ಆರೋಪದ ಬೆನ್ನಲ್ಲೇ ಈ ಕುರಿತು ಭಾರತ ಸರ್ಕಾರ ಪ್ರತಿಕ್ರಿಯಿಸಿದೆ. ಭಾರತದ ಪ್ರಜೆ ನಿಖಿಲ್ ಗುಪ್ತಾ ಎಂಬುವರು ಖಲಿಸ್ತಾನಿ ಉಗ್ರ, ಕೆನಡಾ, ಅಮೆರಿಕ, ಬ್ರಿಟನ್ ಸೇರಿ ಹಲವು ದೇಶಗಳಲ್ಲಿ ಭಾರತ ವಿರೋಧಿ ಕೃತ್ಯಗಳಲ್ಲಿ ತೊಡಗಿರುವ ಗುರುಪತ್ವಂತ್ ಸಿಂಗ್ ಪನ್ನುನ್‌ನನ್ನು ಅಮೆರಿಕದಲ್ಲಿಯೇ ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆ ಎಂದು ಅಮೆರಿಕ ಆರೋಪಿಸಿತ್ತು. ಈ ಆರೋಪಕ್ಕೆ ಭಾರತ ಪ್ರತಿಕ್ರಿಯೆ ನೀಡಿದ್ದು, ಇದೊಂದು ಕಳವಳಕಾರಿ ವಿಷಯವಾಗಿದೆ ಎಂದು ಹೇಳಿದೆ. ಅಲ್ಲದೆ, ಭಾರತದ ನೀತಿಗೆ ಇದು ವಿರುದ್ಧವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅರಿಂದಮ್ ಬಾಗ್ಚಿ, ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಗೆ ಭಾರತದ ಪ್ರಜೆ ಸಂಚು ರೂಪಿಸಿದ್ದಾರೆ ಎಂಬ ವಿಷಯವಳು ಆತಂಕ ಹುಟ್ಟಿಸುವಂತಿದೆ. ಇಂತಹ ಪ್ರಕರಣಗಳು ಭಾರತದ ನೀತಿಗೆ ವಿರುದ್ಧವಾಗಿವೆ. ಅಲ್ಲದೆ, ಭದ್ರತೆ ವಿಷಯದಲ್ಲಿ ಭಾರತವು ಅಮೆರಿಕಕ್ಕೆ ಸಕಲ ರೀತಿಯಲ್ಲಿ ಸಹಕಾರ ನೀಡುತ್ತದೆ. ಸಹಕಾರ ತತ್ವದಲ್ಲಿ ಅಮೆರಿಕವು ಭಾರತಕ್ಕೆ ಅಪರಾಧಿಗಳು, ಉಗ್ರರು, ಶಾರ್ಪ್ಶೂಟರ್‌ಗಳ ಕುರಿತು ಮಾಹಿತಿ ನೀಡಿದೆ. ನಾವು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಅಲ್ಲದೆ, ಸಮಗ್ರ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.