ವೀರಾಜಪೇಟೆ, ನ. ೩೦: ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು, ಪದವಿ ಶಿಕ್ಷಣ ಪಡೆದು ಸಮಾಜ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಆದರೇ ಮೌಲ್ಯಯುತ ಶಿಕ್ಷಣ, ಶ್ರದ್ಧೆ ಭಕ್ತಿಯಿಂದ ಪಡೆದ ಶಿಕ್ಷಣವು ಸಮಾಜದಲ್ಲಿ ಉತ್ತಮ ವ್ಯಕ್ತಿಯನ್ನು ರೂಪುಗೊಳಿಸುತ್ತದೆ ಎಂದು ಮೂರ್ನಾಡು ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ದೇವಕಿ ಪಿ.ಎಂ. ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾವೇರಿ ಶಿಕ್ಷಣ ಸಂಸ್ಥೆಗಳು ಮತ್ತು ವೀರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಆವರಣದಲ್ಲಿ ನಡೆದ ಪ್ರತಿಭೋತ್ಸವ-೨೦೨೩ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು ಪ್ರಸ್ತುತ ಸಮಾಜವು ಆಧುನಿಕತೆಯ ಅಂಧಕಾರದಲ್ಲಿದೆ. ಸಮಾಜದಲ್ಲಿ ಮೌಲ್ಯಗಳನ್ನು ಮೈಗೂಡಿಸಿಕೊಂಡು ಮುಂದುವರೆದಲ್ಲಿ ಮಾತ್ರ ಸರ್ವ ಗೌರವಾದಾರಗಳನ್ನು ಪಡೆದು ಉತ್ತಮ ಸಮಾಜ, ದೇಶ ಕಟ್ಟಲು ಸಾಧ್ಯವಾಗುತ್ತದೆ. ಪಠ್ಯದ ಶಿಕ್ಷಣ ಮಾತ್ರವಲ್ಲದೆ ಇತರ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಕಲಿಕೆಯೊಂದಿಗೆ ಗ್ರಹಿಸುವ ಶಿಕ್ಷಣವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು. ಕಾವೇರಿ ವಿದ್ಯಾಸಂಸ್ಥೆಗಳ ಪ್ರಧಾನ ಕಾರ್ಯದರ್ಶಿ ಕುಲ್ಲಚಂಡ ಪಿ. ಬೋಪಣ್ಣ ಅವರು ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಗುರಿಹೊಂದಬೇಕು. ಗುರಿಯನ್ನು ತಲುಪಲು ಕಠಿಣ ಪರಿಶ್ರಮ ಪಡಬೇಕು. ಉತ್ತಮ ಭವಿಷ್ಯ ನಿರ್ಮಾಣ ಮಾಡಲು ಕಲಿಕೆಯೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಭಾಗವಹಿ ಸುವುದರಿಂದ ಮನಸ್ಸಿನಲ್ಲಿ ಹುದುಗಿ ರುವ ಪ್ರತಿಭೆಯು ಪ್ರದರ್ಶನವಾಗುತ್ತದೆ ಎಂದು ಹೇಳಿದರು.

ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಆನಂದ್ ಕಾರ್ಲ ಅವರು ಮಾತನಾಡಿ ಕೇವಲ ಪಠ್ಯ ಪುಸ್ತಕದ ಶಿಕ್ಷಣ ಪಡೆದು ಲೋಕ ಕಲ್ಯಾಣ ಮಾಡಲು ಅಸಾಧ್ಯ. ಕಲೆ, ಸಾಹಿತ್ಯ, ಕ್ರೀಡೆ ಮತ್ತು ಇತರ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿ ಪ್ರತಿಭೆಯನ್ನು ಜಗತ್ತಿಗೆ ತೋರುವಂತಾಗಬೇಕು ಎಂದರು.

ಕಾವೇರಿ ವಿದ್ಯಾಸಂಸ್ಥೆಗಳ ಅಧ್ಯಕ್ಷ ಪ್ರೋ. ಇಟ್ಟಿರ ಬಿದ್ದಪ್ಪ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿ ಯಲ್ಲೂ ಪ್ರತಿಭೆಗಳು ಅಡಕ ವಾಗಿರುತ್ತವೆ.

ಪ್ರತಿಭೆಯನ್ನು ಗುರುತಿಸಿ ಪ್ರದರ್ಶನ ಮಾಡುವ ಕಾರ್ಯ ಶಿಕ್ಷಕರಲ್ಲಿರುತ್ತದೆ. ಕಾಲೇಜು ಶಿಕ್ಷಣ ಪೂರೈಸಿ ವೃತ್ತಿ ಜೀವನಕ್ಕೆ ಕಾಲಿಡುವ ಘಟ್ಟದವರೆಗಿನ ಕಾಲ ಯಾವುದಾದರು ಒಂದು ವಿಷಯದಲ್ಲಿ ಪರಿಣತಿಯನ್ನು ಹೊಂದುವುದು ಮುಖ್ಯ. ಕಾರಣ ಇಂದಿನ ವೃತ್ತಿಜೀವನಕ್ಕೆ ಪ್ರತಿಭೆ ಮುಖ್ಯವಾಗಿದೆ ಎಂದರು.

ಕಾವೇರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕರು ಮತ್ತು ಉಪನ್ಯಾಸಕಿ ಡೈನಾ ಸೋಮಯ್ಯ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಎಂ. ನಾಣಯ್ಯ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಕೊಡಗು ಜಿಲ್ಲೆಯ ೧೪ ಪ್ರೌಢ ಶಾಲೆಗಳು ಮತ್ತು ೧೨ ಪದವಿಪೂರ್ವ ಕಾಲೇಜುಗಳು ಸ್ಫರ್ಧೆಗಳಲ್ಲಿ ಭಾಗವಹಿಸಿದ್ದವು. ಪ್ರೌಢಶಾಲೆಯ ವಿಭಾಗಕ್ಕೆ ನಿಧಿ ಹುಡುಕಾಟ, ಹಗ್ಗಜಗ್ಗಾಟ, ಸಮೂಹ ನೃತ್ಯ, ಮಾದರಿ ತಯಾರಿಕೆ (ಮಾಡೆಲ್ ಮೇಕಿಂಗ್) ಸ್ಪರ್ಧೆಗಳು, ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಾಗಿ ಹಗ್ಗಜಗ್ಗಾಟ, ಸಮೂಹ ನೃತ್ಯ, ಸ್ಥಳದಲ್ಲೇ ಉತ್ಪನ್ನ ಪ್ರದರ್ಶನ (ಪ್ರೊಡಕ್ಟ್ ಲಾಂಚ್) ಮತ್ತು ಮೂಕಾಭಿನಯ (ಪ್ರಕೃತಿ ಉಳಿಸು) ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿವಿಧ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳ ಸುಮಾರು ೮೦೦ ಮಂದಿ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಕಾವೇರಿ ಕಾಲೇಜಿನ ವಿದ್ಯಾರ್ಥಿಗಳಿಂದ ವಿವಿಧ ಬಗೆಯ ತಿಂಡಿ ತಿನಿಸುಗಳು ಸಿದ್ಧಗೊಳಿಸಲಾಗಿತ್ತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ರಾದ ತಂಡಗಳಿಗೆ ಅತಿಥಿಗಳಿಂದ ಪ್ರಶಸ್ತಿ ನೀಡಲಾಯಿತು.

ಕಾವೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಎಂ. ನಾಣಯ್ಯ ಅವರು ಸ್ವಾಗತಿಸಿ, ಇತಿಹಾಸ ವಿಭಾಗದ ಉಪನ್ಯಾಸಕಿ ಅನುಪಮಾ ಅವರು ನಿರೂಪಿಸಿ ಕನ್ನಡ ವಿಭಾಗದ ಉಪನ್ಯಾಸಕಿ ಎಂ.ಪಿ. ದಮಯಂತಿ ಅವರು ಸರ್ವರನ್ನು ವಂದಿಸಿದರು.