ಬೆಂಗಳೂರು, ನ. ೩೦: ಮೊದಲನೇ ಕಂತಿನಲ್ಲಿ ರೂ. ೨,೦೦೦ವರೆಗೆ ಬೆಳೆ ಪರಿಹಾರ ಬಿಡುಗಡೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಸುದ್ದಿಗೋಷ್ಠಿಯಲ್ಲಿಂದು ಘೋಷಣೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರ ರಾಜ್ಯದ ರೈತರಿಗೆ ಪರಿಹಾರ ಕೊಡಲು ಇನ್ನೂ ಪ್ರಾಥಮಿಕ ಸಭೆಯನ್ನೇ ನಡೆಸದ ಹಿನ್ನೆಲೆಯಲ್ಲಿ ರಾಜ್ಯದಿಂದ ತುರ್ತು ಕ್ರಮ ಕೈಗೊಳ್ಳಲಾಗಿದೆ. ಕೇಂದ್ರಕ್ಕೆ ಬರೆದ ಪತ್ರಗಳಿಗೂ ಪ್ರತಿಕ್ರಿಯೆ ಇಲ್ಲ. ರಾಜ್ಯದಿಂದ ಮೂವರು ಸಚಿವರು ದೆಹಲಿಗೆ ಹೋದರೂ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ. ಉದ್ಯೋಗ ಖಾತರಿ ಯೋಜನೆಯಡಿ ೧೫೦ ಮಾನವ ದಿನ ಉದ್ಯೋಗ ಕೊಡಲು ಅನುಮತಿ ಕೋರಲಾಗಿತ್ತು. ಕೇಂದ್ರ ಇನ್ನೂ ಅನುಮತಿ ನೀಡಿಲ್ಲ ಎಂದರು. ಈಗ ಮೊದಲ ಕಂತಿನಲ್ಲಿ ಅರ್ಹ ರೈತರಿಗೆ ತಲಾ ರೂ. ೨,೦೦೦ ವರೆಗೆ ಬೆಳೆ ಪರಿಹಾರ ಹಣ ನೀಡಲು ನಿರ್ಧರಿಸಿದ್ದೇವೆ.
ಕೇಂದ್ರದಿAದ ಹಣ ಬರುವವರೆಗೂ ಕಾಯಲು ಸಾಧ್ಯವಿಲ್ಲ ಎನ್ನುವ ಕಾರಣದಿಂದ ರಾಜ್ಯ ಸರ್ಕಾರ ಮೊದಲ ಕಂತು ಬಿಡುಗಡೆ ಮಾಡಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. ರಾಜ್ಯದ ೨೨೩ ತಾಲೂಕುಗಳನ್ನು ಬರಪೀಡಿತ ಎಂದು ಮೂರು ಹಂತದಲ್ಲಿ ಘೋಷಿಸಿದ್ದೇವೆ. ೪೮.೧೯ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಆಗಿದೆ. ೧೮೧೭೧.೪೪ ಕೋಟಿ ಪರಿಹಾರದ ಆರ್ಥಿಕ ನೆರವು ನೀಡಲು ಕೇಂದ್ರಕ್ಕೆ ಪತ್ರ ಬರೆದಿದ್ದೇವೆ. ಕೇಂದ್ರ ನಮ್ಮ ತೆರಿಗೆ ಹಣದ ಪಾಲನ್ನು ನಮಗೆ ವಾಪಸ್ ಕೊಟ್ಟರೂ ಸಾಕು ಎಂದರು. ದೇಶದಲ್ಲಿ ೧೨ ರಾಜ್ಯಗಳಲ್ಲಿ ಬರಗಾಲದ ಸ್ಥಿತಿ ಇದೆ. ರೂ. ೪,೬೬೩ ಕೋಟಿ ಬೆಳೆ ನಷ್ಟ ಪರಿಹಾರ ಕೇಂದ್ರಕ್ಕೆ ಕೇಳಿದ್ದೆವು. ಕೇಂದ್ರ ಸಚಿವರಿಗೂ ಮನವಿ ಮಾಡಿದ್ದೇವೆ. ಇದುವರೆಗೂ ಕೇಂದ್ರ ಸಭೆಯನ್ನೇ ನಡೆಸಿಲ್ಲ. ಸಮಯ ಕೇಳಿದರೂ ಭೇಟಿಗೆ ಅವಕಾಶ ಕೊಟ್ಟಿಲ್ಲ. ಹಣಕಾಸು ಸಚಿವರನ್ನು ನಮ್ಮ ಸಚಿವರು ಭೇಟಿ ಮಾಡಿದ್ದಾರೆ. ಕೇಂದ್ರ ಇದುವರೆಗೆ ಸಭೆ ನಡೆಸಿಲ್ಲ. ಪರಿಹಾರ ನೀಡುವ ಪ್ರಕ್ರಿಯೆಯನ್ನೇ ಶುರು ಮಾಡಿಲ್ಲ ಎಂದು ಆರೋಪಿಸಿದರು. ರಾಜ್ಯದ ೪೮.೧೯ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಆಗಿದೆ. ಕೇಂದ್ರ ಕೃಷಿ ಮತ್ತು ಗೃಹ ಸಚಿವರನ್ನು ಭೇಟಿ ಮಾಡಿ ಸಮಯ ಕೊಡಿ ಎಂದು ಪತ್ರ ಬರೆದಿದ್ದೇನೆ. ಇದುವರೆಗೂ ಸಮಯ ಕೊಟ್ಟಿಲ್ಲ. ಬಿತ್ತನೆ ವೈಫಲ್ಯ ಮತ್ತು ಮಧ್ಯಂತರ ವಿಮೆ ಪರಿಹಾರಕ್ಕೆ ರಾಜ್ಯ ಸರ್ಕಾರ ಈಗಾಗಲೇ ೬.೫ ಲಕ್ಷ ರೈತರಿಗೆ ೪೬೦ ಕೋಟಿ ನಮ್ಮ ಸರ್ಕಾರ ಬಿಡುಗಡೆ ಮಾಡಿದೆ.
ಕುಡಿಯುವ ನೀರು, ಮೇವಿಗೆ ೩೨೭ ಕೋಟಿ ಬಿಡುಗಡೆ, ೭೮೦ ಕೋಟಿ ಡಿಸಿಗಳ ಪಿಡಿ ಖಾತೆಯಲ್ಲಿದೆ. ಅವರೂ ತಹಶೀಲ್ದಾರ್ಗಳಿಗೆ ಬಿಡುಗಡೆ ಮಾಡಿದ್ದಾರೆ ಎಂದು ತಿಳಿಸಿದರು. ಯಾವದೇ ತಾಲೂಕುಗಳಲ್ಲೂ ಕುಡಿಯುವ ನೀರಿಗೆ ಸಮಸ್ಯೆ ಇಲ್ಲದಂತೆ ನಿರ್ವಹಿಸಿದ್ದೇವೆ, ಹಲವು ತಾಲೂಕುಗಳ ೬೦ ಹಳ್ಳಿಗಳಲ್ಲಿ ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡಿದ್ದೇವೆ. ಹೊರ ರಾಜ್ಯಕ್ಕೆ ಮೇವು ಹೋಗದಂತೆ ತಡೆದಿದ್ದೇವೆ. ಮೇವಿನ ಬೀಜ ವಿತರಣೆ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದ್ದಾರೆ.