ಮಡಿಕೇರಿ, ನ. ೩೦: ಪೊಲೀಸರು ದೈಹಿಕ ಸಾಮರ್ಥ್ಯವನ್ನು ಕಾಪಾಡಿಕೊಳ್ಳಬೇಕೆಂದು ದಕ್ಷಿಣ ವಲಯ ಪೊಲೀಸ್ ಉಪ ಮಹಾ ನಿರೀಕ್ಷಕರಾದ ಡಾ.ಎಂ.ಬಿ. ಬೋರಲಿಂಗಯ್ಯ ಸಲಹೆಯಿತ್ತರು.

ನಗರದ ಡಿಎಆರ್ ಕವಾಯತು ಮೈದಾನದಲ್ಲಿ ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ಮೂರು ದಿನಗಳ ಕಾಲ ನಡೆದ ಪೊಲೀಸರ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಪೊಲೀಸರು

(ಮೊದಲ ಪುಟದಿಂದ) ಕ್ರೀಡೆ, ವ್ಯಾಯಾಮಗಳ ಮೂಲಕ ತಮ್ಮ ದೈಹಿಕ ಸಾಮರ್ಥ್ಯವನ್ನು ಸದಾ ಉತ್ತಮವಾಗಿ ಇಟ್ಟುಕೊಳ್ಳಬೇಕೆಂದು ಅವರು ಹೇಳಿದರು. ಪೊಲೀಸ್ ಇಲಾಖೆಯಲ್ಲೂ ಕ್ರೀಡೆಗೆ ಪ್ರಾಮುಖ್ಯತೆ ಇದ್ದು, ಈ ನಿಟ್ಟಿನಲ್ಲಿ ವಾರ್ಷಿಕ ಕ್ರೀಡಾಕೂಟಗಳನ್ನು ಪೊಲೀಸರಿಗಾಗಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ವೇದಿಕೆಯಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸುಂದರ್ ರಾಜ್ ಉಪಸ್ಥಿತರಿದ್ದರು.

ಕ್ರೀಡಾಕೂಟದಲ್ಲಿ ಪೊಲೀಸರಿಗೆ ಕಬಡ್ಡಿ, ಕ್ರಿಕೆಟ್, ವಾಲಿಬಾಲ್, ಹಗ್ಗಜಗ್ಗಾಟ, ಥ್ರೋಬಾಲ್, ಗುಂಡು ಹಾರಿಸುವುದು, ರಿಲೇ, ಓಟ, ಉದ್ದ ಜಿಗಿತ, ಎತ್ತರ ಜಿಗಿತ ಮತ್ತಿತರ ಸ್ಪರ್ಧೆಗಳು ನಡೆದವು. ಕಬಡ್ಡಿಯಲ್ಲಿ ಡಿಎಆರ್ ಪ್ರಥಮ, ಸೋಮವಾರಪೇಟೆ ಉಪ ವಿಭಾಗ ದ್ವಿತೀಯ, ಹಗ್ಗಜಗ್ಗಾಟದಲ್ಲಿ ಸೋಮವಾರಪೇಟೆ ಉಪ ವಿಭಾಗ ಪ್ರಥಮ, ಮಡಿಕೇರಿ ಉಪ ವಿಭಾಗ ದ್ವಿತೀಯ, ವಾಲಿಬಾಲ್‌ನಲ್ಲಿ ಡಿಎಆರ್ ಪ್ರಥಮ, ವಿಶೇಷ ಘಟಕ ದ್ವಿತೀಯ, ಕ್ರಿಕೆಟ್‌ನಲ್ಲಿ ವೀರಾಜಪೇಟೆ ಉಪ ವಿಭಾಗ ಪ್ರಥಮ, ಡಿಎಆರ್ ದ್ವಿತೀಯ ಸ್ಥಾನ ಗಳಿಸಿತು. ಮಹಿಳೆಯರ ವಿಭಾಗದ ಥ್ರೋಬಾಲ್‌ನಲ್ಲಿ ಮಡಿಕೇರಿ ಉಪ ವಿಭಾಗ ಪ್ರಥಮ, ಸೋಮವಾರಪೇಟೆ ಉಪ ವಿಭಾಗ ದ್ವಿತೀಯ, ಹಗ್ಗಜಗ್ಗಾಟದಲ್ಲಿ ಮಡಿಕೇರಿ ಉಪ ವಿಭಾಗ ಪ್ರಥಮ, ಸೋಮವಾರಪೇಟೆ ಉಪ ವಿಭಾಗ ದ್ವಿತೀಯ ಸ್ಥಾನಗಳಿಸಿತು.

ಕ್ರೀಡಾಕೂಟದ ವೈಯಕ್ತಿಕ ಚಾಂಪಿಯನ್ ಆಗಿ ಪುರುಷ ವಿಭಾಗದಲ್ಲಿ ಸಿದ್ದಾಪುರ ಠಾಣೆಯ ಸಂಜು ಹೆಚ್.ಎಸ್., ಮಹಿಳೆಯರ ವಿಭಾಗದಲ್ಲಿ ವೀರಾಜಪೇಟೆ ಗ್ರಾಮಾಂತರ ಠಾಣೆಯ ಅನಿತಾ ವಡ್ಡರ್ ಬಹುಮಾನ ಸ್ವೀಕರಿಸಿದರು. ಡಿಎಆರ್ ತಂಡÀ ಕ್ರೀಡಾಕೂಟದ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು.