ಕುಶಾಲನಗರ, ಡಿ. ೧: ಪ್ರೀತಿಸಿ ಮದುವೆಯಾದ ಯುವಕನೋರ್ವ ತನ್ನ ಪತ್ನಿಯ ತವರು ಮನೆಗೆ ತೆರಳಿ ಅವಳನ್ನು ಚಾಕುವಿನಿಂದ ಇರಿದು, ಪರಾರಿಯಾಗಿ ತಾನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಶಾಲನಗರ ಸಮೀಪದ ಪಿರಿಯಾಪಟ್ಟಣ ತಾಲೂಕು ಮುತ್ತಿನ ಮುಳ್ಳುಸೋಗೆ ಗ್ರಾಮದಲ್ಲಿ ನಡೆದಿದೆ. ಮುತ್ತಿನ ಮುಳ್ಳುಸೋಗೆ ಗ್ರಾಮದ ಪ್ರಸನ್ನ (೨೬) ನೇಣಿಗೆ ಶರಣಾಗಿದ್ದು, ತೀವ್ರ ಇರಿತಕ್ಕೆ ಒಳಗಾದ ಪತ್ನಿ ಶ್ವೇತಾ (೨೨) ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಬೈಲುಕೊಪ್ಪ ಪೊಲೀಸರು ತಿಳಿಸಿದ್ದಾರೆ. ಶ್ವೇತಾ ಕುಶಾಲನಗರದ ಬಟ್ಟೆ ಅಂಗಡಿಯೊAದರಲ್ಲಿ ಕೆಲಸ ಮಾಡುತ್ತಿದ್ದು, ಪ್ರಸನ್ನ ಖಾಸಗಿ ಫೈನಾನ್ಸ್ನಲ್ಲಿ ಕೆಲಸ ಮಾಡುತ್ತಿದ್ದ. ಇಬ್ಬರು ಮುತ್ತಿನ ಮುಳ್ಳುಸೋಗೆ ಗ್ರಾಮದಲ್ಲಿ ನೆರೆಕೆರೆಯ ಮನೆಯಲ್ಲಿ ವಾಸಿಸುತ್ತಿದ್ದು, ೨೦೨೨ರಲ್ಲಿ ಕುಟುಂಬದ ಸಮ್ಮತಿಯೊಂದಿಗೆ ವಿವಾಹ ಆಗಿದ್ದರು. ವಿವಾಹದ ನಂತರ ಇವರ ನಡುವೆ ಕಲಹ ನಡೆಯುತ್ತಿದ್ದು, ಈ ಬಗ್ಗೆ ಪತಿ ಪ್ರಸನ್ನ ತನ್ನ ಪತ್ನಿಯ ಮೇಲೆ ಸಂಶಯಗೊAಡು ಪದೇಪದೇ ಜಗಳ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಅನುಮಾನ ಪ್ರಸಂಗ ಮಿತಿಮೀರಿ ಪ್ರಸನ್ನ ತನ್ನ ಪತ್ನಿ ಮೇಲೆ ಪದೇಪದೇ ಗಲಾಟೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಬೈಲುಕೊಪ್ಪ ಪೊಲೀಸರು ರಾಜಿ ತೀರ್ಮಾನ ಮಾಡಿ ಪತ್ನಿ ಶ್ವೇತಾಳನ್ನು ಆಕೆಯ ತವರು ಮನೆಯಲ್ಲಿ ಬಿಡುವಂತೆ ಸಲಹೆ ನೀಡಿದ್ದರು. ಇದರಿಂದ ಸಹನೆ ಕಳೆದುಕೊಂಡ ಪ್ರಸನ್ನ ಏಕಾಏಕಿ ಶ್ವೇತಾಳ ತವರು ಮನೆಗೆ ತೆರಳಿ ತನ್ನೊಂದಿಗೆ ಬರುವಂತೆ ಒತ್ತಾಯಿಸಿದ ಸಂದರ್ಭ ಆಕೆ ಒಪ್ಪದಿದ್ದ ಕಾರಣ ಪ್ರಸನ್ನ ಕೋಪಗೊಂಡು ತನ್ನ ಪತ್ನಿಯ ಮೇಲೆ ಚಾಕುನಿಂದ ಹಲವು ಬಾರಿ ಇರಿದು ನಂತರ ಪರಾರಿಯಾಗಿದ್ದಾನೆ. ತನ್ನ ಪತ್ನಿ ಸಾವನ್ನಪ್ಪಿರುವುದಾಗಿ ಭೀತಿಗೊಂಡ ಪ್ರಸನ್ನ ತನ್ನ ಮನೆಗೆ ಬಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತ ತೀವ್ರ ಗಾಯಗೊಂಡಿದ್ದ ಶ್ವೇತಾಳನ್ನು ಕುಶಾಲನಗರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಮಡಿಕೇರಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬೈಲುಕೊಪ್ಪ ಠಾಣೆಯ ಅಪರಾಧ ವಿಭಾಗದ ಸಬ್ ಇನ್ಸ್ಪೆಕ್ಟರ್ ಮಹಾಲಿಂಗಯ್ಯ ಮತ್ತು ಸಿಬ್ಬಂದಿಗಳು ಮಹಜರು ನಡೆಸಿ ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಗೊಂಡಿದ್ದಾರೆ.