ಸುAಟಿಕೊಪ್ಪ, ಡಿ.೧ : ಎಲ್ಲಾ ಸಮುದಾಯದವರನ್ನು ಸಮಾನವಾಗಿ ಮತ್ತು ಒಂದಾಗಿ ತೆಗೆದುಕೊಂಡು ಹೋಗುವ ನಾರಾಯಣ ಗುರುಗಳ ಜೀವನ ಸಂದೇಶವು ನಮಗೆಲ್ಲಾರಿಗೂ ನಿತ್ಯ ಸ್ಫೂರ್ತಿದಾಯಕವಾಗಿರಲೆಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್‌ಗೌಡ ಹೇಳಿದರು.

ಸುಂಟಿಕೊಪ್ಪದಲ್ಲಿ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಂಘದ ಪ್ರಮುಖ ಬೇಡಿಕೆಯಾಗಿರುವ ನಿವೇಶನ ಮತ್ತು ಅದಕ್ಕೆ ಅಗತ್ಯವಿರುವ ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕೆ ಸಹಕಾರ ಮತ್ತು ಮಾರ್ಗದರ್ಶನ ನೀಡುವುದಾಗಿ ಭರವಸೆ ನೀಡಿದರು. ಮುಖ್ಯವಾಗಿ ಸಮಾಜದ ಮಹಾನ್ ದಾರ್ಶನಿಕರಲ್ಲಿ ಒಬ್ಬರಾಗಿದ್ದ ನಾರಾಯಣ ಗುರುಗಳ ಜೀವನ ಮತ್ತು ಚಿಂತನೆಯನ್ನು ನಾವೆಲ್ಲರೂ ಪಾಲಿಸಬೇಕಾದ ಕಾಲಘಟ್ಟದಲ್ಲಿ ಇದ್ದೇವೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಶಾಸಕ ಡಾ. ಮಂಥರ್‌ಗೌಡ ಅವರನ್ನು ಸುಂಟಿಕೊಪ್ಪ ಹೋಬಳಿ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ವತಿಯಿಂದ ದೇಯಿ ಬೈದೇತಿ ಬಿಲ್ಲವ ಮಹಿಳಾ ಸಂಘ ಹಾಗೂ ಬಿಲ್ಲವ ವಿದ್ಯಾರ್ಥಿ ಘಟಕದ ಅಧ್ಯಕ್ಷ ಮತ್ತು ಪದಾಧಿಕಾರಿಗಳು ಶಾಲು ಹೊದಿಸಿ, ಪೇಟ ತೊಡಿಸಿ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು. ವೇದಿಕೆಯಲ್ಲಿ ಸುಂಟಿಕೊಪ್ಪ ಹೋಬಳಿ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಬಿ.ಎಂ.ಮಣಿ ಮುಖೇಶ್, ಸಂಘದ ಹಿರಿಯ ಸಲಹೆಗಾರರಾದ ಕೆ.ಪಿ.ಜಗನ್ನಾಥ್, ಕಾರ್ಯದರ್ಶಿ ವೆಂಕಪ್ಪ ಕೊಟ್ಯಾನ್ ಇದ್ದರು.