ಸುಧೀರ್ ಹೊದ್ದೆಟ್ಟಿ

ಕರಿಕೆ, ನ. ೩೦: ಪರಿಸರ ಸ್ವಚ್ಛತೆ ಕಾರ್ಯದಲ್ಲಿ ದಿನನಿತ್ಯ ಶ್ರಮಿಸುತ್ತಿರುವ ಅರಣ್ಯ ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರಿಂದ ಹಾಗೂ ಪರಿಸರ ಪ್ರಿಯರಿಂದ ಮೆಚ್ಚುಗೆ ವ್ಯಕ್ತವಾಗಿದೆ. ತಲಕಾವೇರಿ ಅಭಯಾರಣ್ಯದಂಚಿನ ಭಾಗಮಂಡಲ- ಕರಿಕೆ ಅಂತರ್‌ರಾಜ್ಯ ಹೆದ್ದಾರಿ ವನ್ಯಜೀವಿ ಅಭಯಾರಣ್ಯದೊಳಗೆ ಹಾದುಹೋಗುತ್ತಿದ್ದು, ಈ ರಸ್ತೆಯಲ್ಲಿ ಪ್ರಯಾಣಿಸುವವರು ಪ್ಲಾಸ್ಟಿಕ್ ಬಾಟಲಿ, ಸ್ಯಾನಿಟರಿ ಪ್ಯಾಡ್‌ಗಳು, ಮದ್ಯದ ಬಾಟಲಿ, ಆಹಾರ ತ್ಯಾಜ್ಯ, ಆಸ್ಪತ್ರೆ ತ್ಯಾಜ್ಯ, ಕೋಳಿ ಅಂಗಡಿ ತ್ಯಾಜ್ಯಗಳನ್ನು ಅರಣ್ಯದೊಳಗೆ ಎಲ್ಲೆಂದರಲ್ಲಿ ಎಸೆದು ವನ್ಯಜೀವಿಗಳ ಪ್ರಾಣಕ್ಕೆ ಸಂಚಕಾರ ತರುವುದಲ್ಲದೆ ಪರಿಸರಕ್ಕೂ ಹಾನಿಯುಂಟು ಮಾಡುತ್ತಿದ್ದರು. ಈ ಬಗ್ಗೆ ‘ಶಕ್ತಿ’ ನಿರಂತರವಾಗಿ ವರದಿ ಪ್ರಕಟಿಸುತ್ತಾ ಬಂದಿತ್ತು. ಇದೀಗ ತಲಕಾವೇರಿ ವನ್ಯ ಧಾಮದ ಸರಹದ್ದಿನಲ್ಲಿ ಅರಣ್ಯ ತಪಾಸಣಾ ಗೇಟ್ ತೆರೆದು ವಾಹನಗಳಿಗೆ ನಿಗದಿತ ಶುಲ್ಕ ವಿಧಿಸುವ ಮೂಲಕ ಕಸ ತ್ಯಾಜ್ಯ ಎಸೆಯದೆ ರಸ್ತೆ ಬದಿಯಲ್ಲಿ ವಾಹನ ನಿಲುಗಡೆಗೊಳಿಸದೆ ತೆರಳುವಂತೆ ಸೂಚನೆ ನೀಡಿ ಕಳಹಿಸಲಾಗುತ್ತಿದೆ. ಸ್ಥಳೀಯ ವಾಹನಗಳಿಗೆ ಶುಲ್ಕ ವಿನಾಯಿತಿ ನೀಡಲಾಗುತ್ತಿದೆ. ಇದರಿಂದಾಗಿ ಅರಣ್ಯದೊಳಗೆ ಒಂದು ರೀತಿಯ ಸ್ವಚ್ಛತಾ ವಾತಾವರಣ ನಿರ್ಮಾಣವಾಗಿದೆ. ಸಿಬ್ಬಂದಿಗಳು ಕೂಡ ದಿನಂಪ್ರತಿ ರಸ್ತೆ ಬದಿಯ ಕಸ, ತ್ಯಾಜ್ಯಗಳನ್ನು ಸಂಗ್ರಹಿಸಿ ವನ್ಯಜೀವಿಗಳಿಗೆ ಮಾರಕವಾದ ಪ್ಲಾಸ್ಟಿಕ್ ತ್ಯಾಜ್ಯ ನಿಯಂತ್ರಣ ಮಾಡಿ, ಸ್ವಚ್ಛ ಪರಿಸರ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಶ್ಲಾಘನೀಯ. ಇದಲ್ಲದೇ ಈ ಭಾಗದಲ್ಲಿ ಅರಣ್ಯ ಪ್ರದೇಶದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿ, ರಾತ್ರಿ ವಾಹನ ಗಸ್ತು ಹೆಚ್ಚಿಸಿದಲ್ಲಿ ಹರಳು ಕಲ್ಲು ದಂಧೆ, ವನ್ಯಜೀವಿಗಳ ಅಕ್ರಮ ಬೇಟೆ, ಮಾಂಸ ಸಾಗಾಟದಂತಹ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಣ ಮಾಡಲು ಸಾಧ್ಯವಾಗುತ್ತದೆ. ಚೆಕ್‌ಪೋಸ್ಟ್ನಲ್ಲಿ ವಾರಕ್ಕೆ ಹದಿನೈದು ಸಾವಿರ ರೂಪಾಯಿ ಸಂಗ್ರಹವಾಗುತ್ತಿದ್ದು, ಪ್ರತಿ ತಿಂಗಳು ತಿಂಗಳಿನಲ್ಲಿ ಅರವತ್ತು ಸಾವಿರ ಶುಲ್ಕ ಸಂಗ್ರಹವಾಗುತ್ತಿದ್ದು, ಇದನ್ನು ಅರಣ್ಯ ಇಲಾಖೆಯ ಆನೆ - ಮಾನವ ಸಂಘರ್ಷ ನಿಧಿಗೆ ಬಳಕೆ ಮಾಡಲಾಗುತ್ತಿದೆ.