ಮಡಿಕೇರಿ, ನ. ೩೦: ಕುರುಬ ಸಮುದಾಯದ ಅಭ್ಯುದಯಕ್ಕಾಗಿ ಜಿಲ್ಲೆಯಲ್ಲಿ ಕುರುಬ ಸಮುದಾಯ ಭವನ ನಿರ್ಮಾಣ ಮಾಡಲಾಗುವ ದೆಂದು ಶಾಸಕ ಡಾ. ಮಂಥರ್ ಗೌಡ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕೊಡಗು ಜಿಲ್ಲಾ ಕುರುಬ ಸಮಾಜದ ಸಹಕಾರದಲ್ಲಿ ನಗರದ ಗಾಂಧಿ ಭವನದಲ್ಲಿ ಗುರುವಾರ ನಡೆದ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಸೂಕ್ತ ಸ್ಥಳದಲ್ಲಿ ಕುರುಬ ಸಮುದಾಯ ಭವನ ನಿರ್ಮಾಣ ಮಾಡಲಾಗುವದು, ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಜಾಗ ಒದಗಿಸಲಾಗುವದೆಂದು ಭರವಸೆ ನೀಡಿದರು.

ಕನ್ನಡ ನಾಡಿನ ಸಾಹಿತ್ಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಭಕ್ತ ಕನಕದಾಸರ ಕೊಡುಗೆ ಅಪಾರವಾಗಿದ್ದು, ಕನಕದಾಸರ ಚಿಂತನೆಗಳು ಸಾರ್ವಕಾಲಿಕವಾಗಿವೆ. ಇಂದಿನ ಮೊಬೈಲ್ ತಂತ್ರಜ್ಞಾನ ಯುಗದಲ್ಲಿಯೇ ಸಮಾಜದಲ್ಲಿ ಹಲವು ತಾರತಮ್ಯಗಳನ್ನು ನೋಡುತ್ತೇವೆ. ಆದರೆ, ಹಲವು ಶತಮಾನಗಳ ಹಿಂದೆ ಬಸವಣ್ಣ, ಅಲ್ಲಮಪ್ರಭು ಸೇರಿದಂತೆ ಹಲವು ವಚನಕಾರರು, ಹಾಗೆಯೇ ದಾಸ ಶ್ರೇಷ್ಠ ಕನಕದಾಸರು ಸೇರಿದಂತೆ ಹಲವರು ಸಾಮಾಜಿಕ ನ್ಯೂನತೆಗಳನ್ನು ಸರಿಪಡಿಸಲು ಶ್ರಮಿಸಿರುವುದು ಶ್ಲಾಘನೀಯ ಕಾರ್ಯ, ಸಾಹಿತ್ಯ, ಕೀರ್ತನೆಗಳ ಮೂಲಕ ಜಾಗೃತಿ ಮೂಡಿಸಿದ್ದಾರೆ ಎಂದು ಅವರು ಹೇಳಿದರು.

ಶರಣರು, ದಾಸರ ವಿಚಾರಧಾರೆ ಗಳನ್ನು ಪ್ರತಿಯೊಬ್ಬರೂ ತಿಳಿದು ಕೊಳ್ಳುವಂತಾಗಬೇಕು. ದಾಸರ ಕೀರ್ತನೆಗಳು ಸಮಾಜದಲ್ಲಿನ ಅಂಕುಡೊAಕುಗಳನ್ನು ತಿದ್ದುವಲ್ಲಿ ಸಹಕಾರಿಯಾಗಿವೆ. ಅನ್ಯಾಯದ ವಿರುದ್ಧ ಬೆಳಕು ಚೆಲ್ಲುವುದನ್ನು ಕಾಣುತ್ತೇವೆ.

ಭಕ್ತಿ, ಶ್ರದ್ಧೆ, ಜ್ಞಾನ ಹೀಗೆ ಪ್ರತಿಯೊಂದು ಸಹ ಸಮತೋಲನ ದಿಂದ ಕೂಡಿದಾಗ ಉತ್ತಮ ಬದುಕು ನಡೆಸಲು ಸಾಧ್ಯ. ವಿದ್ಯಾರ್ಥಿಗಳು ವಿದ್ಯಾರ್ಜನೆ ಕಡೆ ಹೆಚ್ಚಿನ ಗಮನಹರಿಸಬೇಕು. ಉತ್ತಮ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.

(ಮೊದಲ ಪುಟದಿಂದ) ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಶರಣರು ಹಾಗೂ ದಾಸರ ಕೊಡುಗೆ ಅಪಾರ. ಕನಕದಾಸರು ಶೋಷಿತ ಜನರ ಬಗ್ಗೆ ಕೀರ್ತನೆ ಮೂಲಕ ಬೆಳಕು ಚೆಲ್ಲಿದ್ದಾರೆ. ಭಕ್ತ ಕನಕದಾಸ ಚಲನಚಿತ್ರದ ಮೂಲಕ ಕನಕದಾಸರ ಜೀವನ ಚರಿತ್ರೆಯನ್ನು ತಿಳಿದುಕೊಳ್ಳಬಹುದಾಗಿದೆ ಎಂದು ಹೇಳಿದರು.

ಹುಣಸೂರು ಡಿ.ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸ್ನಾತಕೋತ್ತರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಎಂ.ಆರ್.ರಾಶಿ ಮಾತನಾಡಿ, ಕನಕ ಎಂದರೆ ಚಿನ್ನ, ಭಕ್ತ ಕನಕದಾಸರ ಕೀರ್ತನೆಗಳು ಇಂದಿಗೂ ಪ್ರಸ್ತುತವಾಗಿವೆ. ಸಮಾಜದಲ್ಲಿ ಮೌಡ್ಯವನ್ನು ಹೋಗಲಾಡಿಸಲು ಕನಕದಾಸರು ಪ್ರಯತ್ನಿಸಿದ್ದಾರೆ. ಕುಲಕುಲವೆಂದು ಹೊಡೆದಾಡದಿರಿ ಎಂಬ ಸಂದೇಶ ನೀಡಿದ್ದಾರೆ. ಕೀರ್ತನೆಗಳ ಮೂಲಕ ಬದುಕಿನ ಅಸಮತೋಲನ ಬಗ್ಗೆ ಬೆಳಕು ಚೆಲ್ಲಿದ್ದಾರೆ ಎಂದು ತಿಳಿಸಿದರು.

ಸಕಲಜೀವಿಗಳು ಸಹ ಬದುಕುವ ಹಕ್ಕು ಇದೆ ಎಂಬುದನ್ನು ಕನಕದಾಸರು ಪ್ರತಿಪಾದಿಸಿದ್ದಾರೆ. ವೈಜ್ಞಾನಿಕ ಚಿಂತನೆಯತ್ತ ಪ್ರತಿಯೊಬ್ಬರನ್ನೂ ಕೊಂಡೊಯ್ಯುತ್ತಾರೆ ಎಂದು ಹೇಳಿದರು.

ಕುರುಬ ಸಮಾಜದ ಪ್ರಮುಖರಾದ ನಂಜುAಡಸ್ವಾಮಿ ಮಾತನಾಡಿ ಜನವರಿ ೩ ರಂದು ಮುಖ್ಯಮಂತ್ರಿ ಕೊಡಗು ಜಿಲ್ಲೆಗೆ ಆಗಮಿಸಲಿದ್ದು, ಕುಶಾಲನಗರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಆ ನಿಟ್ಟಿನಲ್ಲಿ ಎಲ್ಲರೂ ಸಹಕರಿಸುವಂತೆ ಕೋರಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ತಹಶೀಲ್ದಾರ್ ಪ್ರವೀಣ್ ಕುಮಾರ್, ಕೊಡಗು ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ಎಚ್.ಎಸ್.ಮಹೇಶ್, ಪ್ರಧಾನ ಕಾರ್ಯದರ್ಶಿ ಬಿ.ಎ.ಗಂಗಾಧರ, ಉಪಾಧ್ಯಕ್ಷ ಟಿ.ಕೆ.ವಸಂತ, ಖಜಾಂಜಿ ಶಿವಣ್ಣ, ಪ್ರಮುಖರಾದ ಭರಮಣ್ಣ, ರವಿಗೌಡ, ಗಣೇಶ್ ಎಂ.ಟಿ., ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ರೇಣುಕಾ ದೇವಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಶಿಕ್ಷಣಾಧಿಕಾರಿ ಮಹದೇವ ಸ್ವಾಮಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸದಾಶಿವ ಪಲ್ಲೇದ್, ಕೃಷ್ಣಪ್ಪ, ಭಾಗಮಂಡಲ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಲೋಕೇಶ್, ಹಿಂದುಳಿದ ವರ್ಗಗಳ ತಾಲೂಕು ಅಧಿಕಾರಿ ಮೋಹನ್ ಕುಮಾರ್ ಇತರರು ಇದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಸ್ವಾಗತಿಸಿದರು. ಕಲಾವಿದ ಬಿ.ಸಿ. ಶಂಕರಯ್ಯ ಕನಕದಾಸರ ಕೀರ್ತನೆಗಳನ್ನು ಹಾಡಿದರು. ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು.