ಶನಿವಾರಸಂತೆ, ನ. ೩೦: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ನೀರುಗುಂದ ಗ್ರಾಮದ ಶ್ರೀ ವೀರಭದ್ರ ಸ್ವಾಮಿ ದೇವಾಲಯ, ಶ್ರೀಮಲ್ಲೇಶ್ವರ ಸ್ವಾಮಿ ದೇವಾಲಯ ಹಾಗೂ ಶ್ರೀ ಕನ್ನಂಬಾಡಿ ಅಮ್ಮನವರ ದೇವಾಲಯಗಳಲ್ಲಿ ಕಾರ್ತಿಕ ಮಾಸದ ವಿಶೇಷ ಪೂಜಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು.

ಬೆಳಿಗ್ಗೆಯಿಂದಲೇ ವೀರಭದ್ರ ಸ್ವಾಮಿಗೆ ಶತ ರುದ್ರಾಭಿಷೇಕ ಮಾಡಿ, ವಿವಿಧ ತರಕಾರಿಗಳಿಂದ ಅಲಂಕಾರಿಸಲಾಗಿತ್ತು. ೩ ದೇವಾಲಯಗಳನ್ನು ಹೂಗುಚ್ಛಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಮಹಾ ಮಂಗಳಾರತಿ ನೆರವೇರಿಸಿ, ತೀರ್ಥ-ಪ್ರಸಾದ ವಿನಿಯೋಗವಾಯಿತು.

ರಾತ್ರಿ ೩ ದೇವಾಲಯಗಳಲ್ಲಿ ದೀಪಾಲಂಕಾರ, ಕಾರ್ತಿಕ ಪೂಜೆ, ಆಕಾಶದಲ್ಲಿ ವರ್ಣರಂಜಿತ ಪಟಾಕಿ ಸಿಡಿಸುವ ಕಾರ್ಯಕ್ರಮ ನಡೆಯಿತು. ನಂತರ ಮಹಾ ಮಂಗಳಾರತಿಯಾಗಿ ಪ್ರಸಾದ ವಿನಿಯೋಗವಾಯಿತು. ಪೂಜಾ ಕೈಂಕರ್ಯಗಳನ್ನು ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ, ಅರ್ಚಕರಾದ ಮಣಿಕಂಠ ಹಾಗೂ ಚಂದ್ರಯ್ಯ ನೆರವೇರಿಸಿದರು. ಪೂಜಾ ಕಾರ್ಯಕ್ರಮಗಳಲ್ಲಿ ಸಾವಿರಾರು ಮಂದಿ ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು. ನೀರುಗುಂದ ಗ್ರಾಮದಿಂದ ಹೊರ ಜಿಲ್ಲೆಗಳಲ್ಲಿ, ರಾಜ್ಯಗಳಲ್ಲಿ ವೃತ್ತಿ ಜೀವನ ನಡೆಸುತ್ತಿರುವವರು ಪ್ರತಿವರ್ಷ ಕುಟುಂಬ ಸದಸ್ಯರೊಂದಿಗೆ ಗ್ರಾಮಕ್ಕೆ ಆಗಮಿಸಿ ಪೂಜಾ ಕಾರ್ಯಕ್ರಮಗಳಲ್ಲಿ ಸಾಮರಸ್ಯದಿಂದ, ಒಗ್ಗಟ್ಟಿನಿಂದ ಪಾಲ್ಗೊಳ್ಳುವುದು ಗ್ರಾಮದ ವಿಶೇಷವಾಗಿದೆ.