ವೀರಾಜಪೇಟೆ, ನ. ೨೯: ವೀರಾಜಪೇಟೆ ಪಟ್ಟಣದ ಸಂತ ಅನ್ನಮ್ಮ ಪ್ರೌಢಶಾಲೆಯ ವತಿಯಿಂದ ಆಯೋಜಿಸಲಾಗಿದ್ದ ಎರಡು ದಿನಗಳ ವಿಜ್ಞಾನ ವಸ್ತು ಪ್ರದರ್ಶನವನ್ನು ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ಪ್ರಾದ್ಯಾಪಕ ಡಾ. ಸತೀಶ್ ಬಿ.ಎನ್. ಉದ್ಘಾಟಿಸಿದರು.
ಜೀವನದಲ್ಲಿ ಎಲ್ಲರೂ ಹೊಸ ಆಲೋಚನೆಯನ್ನು ಮಾಡಬೇಕು. ಸಕಾರಾತ್ಮಕವಾಗಿ ಸಾಧನೆಯನ್ನು ಮಾಡಬೇಕು. ವಿಜ್ಞಾನದಿಂದ ಪ್ರಗತಿ ಹೊಂದಲು ಸಾಧ್ಯವಿದೆ ಎಂದು ಅವರು ಹೇಳಿದರು. ಸಂತ ಅನ್ನಮ್ಮ ಪಿ. ಯು. ಕಾಲೇಜಿನ ಪ್ರಾಂಶುಪಾಲ ರೆ.ಫಾ. ಮದಲೈಮುತ್ತು ಮಾತನಾಡಿ, ವಿದ್ಯಾರ್ಥಿಗಳು ಎಂದಿಗೂ ಗುರಿ ಅಥವಾ ಧ್ಯೇಯವನ್ನು ಬಿಡಬಾರದು. ಗುರಿ ಮುಟ್ಟಲು ಸತತ ಪ್ರಯತ್ನ ಪಡುತ್ತಿರಬೇಕು. ಆಗ ಮಾತ್ರ ಗುರಿ ತಲುಪಲು ಸಾಧ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ.ಫಾ. ಐಸಾಕ್ ರತ್ನಾಕರ್ ಮಾತನಾಡಿ, ವಿಜ್ಞಾನವು ಇಂದು ತುಂಬಾ ಮುಂದುವರಿದಿದೆ. ವಿಜ್ಞಾನದ ಮಹತ್ವವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ ಸಲುವಾಗಿ ಈ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದರು.
ಈ ಸಂದರ್ಭ ಉದ್ಘಾಟಕರಾದ ಡಾ. ಸತೀಶ್ ಅವರನ್ನು ವಿದ್ಯಾಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸಂತ ಅನ್ನಮ್ಮ ದೇವಾಲಯದ ಪ್ರಧಾನ ಗುರುಗಳಾದ ರೆ.ಫಾ. ಡಾ. ದಯಾನಂದ ಪ್ರಭು, ಸಹಾಯಕ ಗುರು ಫಾ. ಚಾರ್ಲ್ಸ್, ಪದವಿ ಕಾಲೇಜು ಪ್ರಾಂಶುಪಾಲೆ ತೃಪ್ತಿ ಬೋಪಣ್ಣ, ಪ್ರೌಢಶಾಲೆ ಮುಖ್ಯ ಶಿಕ್ಷಕ ಬೆನ್ನಿ ಜೋಸೆಫ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿಯರಾದ ಸಿಸ್ಟರ್ ರೋಸಿ, ಸಿಸ್ಟರ್ ಐಡಾ ಡಿಸೋಜಾ ಉಪಸ್ಥಿತರಿದ್ದರು. ಶಿಕ್ಷಕಿ ಟೀನಾ ಫೆರ್ನಾಂಡಿಸ್ ಸ್ವಾಗತಿಸಿ, ಮುಖ್ಯ ಶಿಕ್ಷಕ ಬೆನ್ನಿ ಜೋಸೆಫ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿಯರಾದ ರೂಪ, ವೈಲಾ ನಿರೂಪಿಸಿ, ಶಿಕ್ಷಕಿ ಜಶಿತಾ ವಂದಿಸಿದರು.