ವಿಶೇಷ ವರದಿ : ಚಂದ್ರಮೋಹನ್

ಕುಶಾಲನಗರ, ನ. ೨೯ : ಅತಿ ವೇಗವಾಗಿ ಬೆಳೆಯುತ್ತಿರುವ ಕುಶಾಲನಗರ ತಾಲೂಕಿನ ಕೇಂದ್ರ ಸ್ಥಾನ ಕುಶಾಲನಗರ ಪಟ್ಟಣವನ್ನೂ ವಿವಿಧ ಅಪರಾಧಗಳಿಗೆ ಕೇಂದ್ರವಾಗಿ ಮಾಡಿಕೊಳ್ಳುತ್ತಿರುವುದು ಇತ್ತೀಚಿನ ಆತಂಕಕಾರಿ ಬೆಳವಣಿಗೆ ಆಗಿದೆ. ಎರಡು ಜಿಲ್ಲೆಗಳ ಗಡಿಭಾಗ ಹಾಗೂ ಜಿಲ್ಲೆಗಳ ಸಂಪರ್ಕ ಕೇಂದ್ರವಾಗಿರುವ ಕುಶಾಲನಗರ ಪಟ್ಟಣದಲ್ಲಿ ಅಪರಾಧ ಲೋಕದ ಚಟುವಟಿಕೆಗಳು ಆಗಾಗ ನಡೆಯುತ್ತಿರುವುದು ಜನರ ನಿದ್ದೆಗೆಡಿಸುತ್ತಿದೆ.

ಇತ್ತೀಚೆಗೆ ನಡೆದ ಗುಡ್ಡೆಹೊಸೂರು ಹೈವೇ ವಾಹನ ದರೋಡೆ ಪ್ರಕರಣ, ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿ ನಡೆದ ಲಕ್ಷಾಂತರ ಹಣ ಅಪಹರಣ ಪ್ರಕರಣ, ಕುಶಾಲನಗರ ದಂತ ವೈದ್ಯರ ಮನೆಗೆ ನಕಲಿ ಐಟಿ ಅಧಿಕಾರಿಗಳ ದಾಳಿ, ಕುಶಾಲನಗರ ತಾಲೂಕಿನ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಯಿಂದ ಉಸ್ತುವಾರಿ ಸಚಿವರ ಪಿಎ ಎಂದುಕೊAಡು ನಡೆದ ವಸೂಲಿ ಪ್ರಕರಣ, ಹಾಡುಹಗಲೇ ಗೋಮಾಂಸ ಸಾಗಾಟ, ಮನೆ ಕಳ್ಳತನ... ಹೀಗೆ ದಿನನಿತ್ಯ ಹಲವು ಪ್ರಕರಣಗಳು ನಡೆಯುತ್ತಿದ್ದು, ಪೊಲೀಸರು ಈ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾದರೂ ಮತ್ತೆ ಮತ್ತೆ ಪ್ರಕರಣಗಳು ಮರುಕಳಿಸುತ್ತಿವೆ.

ಬ್ಯಾಂಕಿನಿAದ ನಗದು ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭ ರೈತನೊಬ್ಬನ ಲಕ್ಷಾಂತರ ನಗದು ಅಪಹರಣ ಪ್ರಕರಣದ ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ. ನಕಲಿ ಐಟಿ ಅಧಿಕಾರಿಗಳೆಂದುಕೊAಡವರು ಕುಶಾಲನಗರದ ಹೃದಯ ಭಾಗದಲ್ಲಿರುವ ಲಾಡ್ಜ್ ಒಂದರಲ್ಲಿ ಆಪರೇಷನ್ ಐಟಿ ಯೋಜನೆ ರೂಪಿಸಿ ಹಾಡು ಹಗಲೇ ಮನೆ ಒಂದಕ್ಕೆ ದಾಳಿ ಮಾಡುತ್ತಿದ್ದಾರೆ ಎಂದರೆ ಪಾತಕ ಲೋಕಕ್ಕೆ ಪೊಲೀಸ್ ಇಲಾಖೆಯ ಕಾನೂನಿನ ಭಯ ಕ್ಷೀಣವಾಗುತ್ತಿದೆ ಎನ್ನುವಂತಾಗಿದೆ. ಈ ಪ್ರಕರಣಕ್ಕೆ ಸಂಬAಧಿಸಿದAತೆ ಮಹಿಳೆಯೊಬ್ಬರು ತಮ್ಮ ತಂಡಕ್ಕೆ ಆನ್‌ಲೈನ್ ಮೂಲಕ ಕುಶಾಲನಗರ ಲಾಡ್ಜ್ನಲ್ಲಿ ರೂಮ್ ಕಾದಿರಿಸಿರುವ ವಿಷಯ ಕೂಡ ಬೆಳಕಿಗೆ ಬಂದಿದೆ. ಇನ್ನು ಕೆಲವು ಪ್ರಕರಣಗಳಲ್ಲಿ ಹೊರ ಜಿಲ್ಲೆ ವ್ಯಕ್ತಿಗಳು ಸ್ಥಳೀಯರನ್ನು ಬಳಸಿಕೊಂಡು ಅಪರಾಧ ಎಸಗಲು ಸ್ಕೆಚ್ ರೂಪಿಸುತ್ತಿರುವುದು ಕೂಡ ಬಹುತೇಕ ಪ್ರಕರಣಗಳಲ್ಲಿ ಕಂಡು ಬಂದಿದೆ. ಬುರ್ಖಾ ಧರಿಸಿ ಹಾಡುಹಗಲೇ ಚಿನ್ನದ ಅಂಗಡಿಗಳಿಗೆ ನುಗ್ಗಿ ಚಿನ್ನಾಭರಣ ಅಪಹರಣದ ಪ್ರಕರಣಗಳು ಕೂಡ ನಡೆದಿವೆ.

(ಮೊದಲ ಪುಟದಿಂದ) ಬಹುತೇಕ ಪ್ರಕರಣಗಳನ್ನು ಭೇದಿಸುವಲ್ಲಿ ಕುಶಾಲನಗರ ಪೊಲೀಸರು ಯಶಸ್ವಿಯಾಗಿದ್ದು ನಿಜಕ್ಕೂ ಶ್ಲಾಘನೀಯ ಅಂಶವಾಗಿದ್ದರೂ, ಪ್ರಕರಣಗಳು ಮತ್ತೆ ಮರುಕಳಿಸುವುದು ಮಾತ್ರ ಆತಂಕಕಾರಿ ಬೆಳವಣಿಗೆ.

ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಪಟ್ಟಣ, ಗ್ರಾಮಾಂತರ ಸಂಚಾರಿ ಪೊಲೀಸ್ ಠಾಣೆ, ಅಪರಾಧ ವಿಭಾಗದ ಅಧಿಕಾರಿ, ಸಿಬ್ಬಂದಿಗಳು ಒಂದೆಡೆಯಾದರೆ ಪಟ್ಟಣದ ಹೃದಯ ಭಾಗದಲ್ಲಿ ಇಬ್ಬರು ಇನ್ಸ್ಪೆಕ್ಟರ್ ಮತ್ತು ಓರ್ವ ಡಿವೈಎಸ್‌ಪಿ ಹುದ್ದೆಯ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದರು. ಈ ನಡುವೆ ಅಪರಾಧ ಲೋಕ ರಾಜಾರೋಷವಾಗಿ ತಮ್ಮ ಕಾಯಕವನ್ನು ನಡೆಸುವಲ್ಲಿ ಯಶಸ್ವಿಯಾಗುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಅಪರಾಧ ಮಾಡುವ ಮುನ್ನವೇ ಆರೋಪಿಗಳನ್ನು ಪತ್ತೆ ಹಚ್ಚುವಂತಹ ಕಾರ್ಯವೈಖರಿ ಗಮನಿಸಬೇಕಾದ ಗುಪ್ತಚರ ಪೊಲೀಸ್ ವಿಭಾಗದ ಸಿಬ್ಬಂದಿಗಳು ಇತ್ತೀಚಿನ ದಿನಗಳಲ್ಲಿ ಸಂಭಾವ್ಯ ಅಪರಾಧಗಳನ್ನು ಗ್ರಹಿಸುವಲ್ಲಿ ಸಂಪೂರ್ಣ ವಿಫಲರಾಗುತ್ತಿದ್ದಾರೆ ಎನ್ನುವುದು ಸಾರ್ವಜನಿಕರ ದೂರು. ಈ ಎಲ್ಲ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ಸಣ್ಣಮಟ್ಟಿಗೆ ಸರ್ಜರಿಯ ಅವಶ್ಯಕತೆ ಇದೆ ಎನ್ನುವುದು ಕೂಡ ಸ್ಥಳೀಯರ ಬೇಡಿಕೆಯಾಗಿದೆ.

ಆಯಕಟ್ಟಿನ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮಾಡುವ ಮೂಲಕ ಅಪರಾಧ ಲೋಕದ ನಿಯಂತ್ರಣ ಬಹುತೇಕ ಸಾಧ್ಯ ಎನ್ನುವುದು ನಾಗರಿಕರ ಅಭಿಪ್ರಾಯ. ಪ್ರಕರಣದ ಬೆನ್ನಲ್ಲೇ ಪೊಲೀಸರು ಆರೋಪಿಗಳನ್ನು ಬಂಧಿಸಿದ ಸಂದರ್ಭ ಅವರ ಮೇಲೆ ರಾಜಕೀಯ ಒತ್ತಡ ಬರುತ್ತಿರುವುದು ಕೂಡ ಪೊಲೀಸರಿಗೆ ಸಮರ್ಪಕವಾಗಿ ಕಾರ್ಯನಿರ್ವಹಿಸಲು ತೊಡಕು ಉಂಟಾಗುತ್ತಿದೆ ಎನ್ನುವ ಮಾಹಿತಿಗಳು ಕೂಡ ಹೊರ ಬಿದ್ದಿದೆ.

ಕುಶಾಲನಗರ ಮೈಸೂರು ಗಡಿ ಭಾಗದ ಪ್ರದೇಶವಾಗಿದ್ದು ಇಲ್ಲಿ ಗಡಿಯ ಮಿತಿ ಹಿನ್ನೆಲೆಯಲ್ಲಿ ಅಪರಾಧಗಳು ಘಟಿಸಿದ ನಂತರ ಆರೋಪಿಗಳು ಪೊಲೀಸರ ಕಣ್ಣ್ ತಪ್ಪಿಸಿಕೊಳ್ಳಲು ಹೆಚ್ಚಿನ ಅವಕಾಶ ಇರುವುದರಿಂದ ಪೊಲೀಸರಿಗೆ ಕೂಡ ಆರೋಪಿಗಳನ್ನು ಪತ್ತೆಹಚ್ಚಲು ಗಡಿ ಮಿತಿಯ ಸಮಸ್ಯೆ ಕೂಡ ಎದುರಾಗುತ್ತದೆ. ಈ ಬಗ್ಗೆ ‘ಶಕ್ತಿ’ ಇತ್ತೀಚೆಗೆ ದಕ್ಷಿಣ ವಲಯದ ಪೊಲೀಸ್ ಮಹಾ ನಿರೀಕ್ಷಕರಾದ ಡಾ.ಬೋರಲಿಂಗಯ್ಯ ಅವರ ಗಮನಕ್ಕೆ ಕೂಡ ತರಲಾಗಿತ್ತು. ಎರಡು ಜಿಲ್ಲೆಗಳ ಪೊಲೀಸ್ ಅಧಿಕಾರಿಗಳ ಮತ್ತು ನಾಗರಿಕರ ಸಭೆಯನ್ನು ಕರೆದು ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲಾಗುವುದು ಎಂದು ಅವರು ಭರವಸೆ ನೀಡಿದ್ದರು.

ಅಪರಾಧ ಮುಕ್ತ ಸಮಾಜ ನಿರ್ಮಾಣಕ್ಕೆ ನಾಗರಿಕರ ಸಹಾಯ ಕೂಡ ಅಗತ್ಯವಾಗಿದ್ದು ಈ ಹಿನ್ನೆಲೆಯಲ್ಲಿ ತಿಂಗಳಿಗೆ ಒಮ್ಮೆಯಾದರೂ ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ನಾಗರಿಕ ಸಭೆಗಳು ನಡೆದಲ್ಲಿ ಇಂತಹ ಸಮಸ್ಯೆಗಳಿಗೆ ಕನಿಷ್ಠ ಪ್ರಮಾಣದ ಕಡಿವಾಣ ಹಾಕಲು ಸಾಧ್ಯ ಎನ್ನುತ್ತಾರೆ ಸ್ಥಳೀಯ ಪ್ರಮುಖರು. ಒಟ್ಟಾರೆ ಜನಸ್ನೇಹಿ ಪೊಲೀಸ್ ಮೂಲಕ ಈ ಎಲ್ಲಾ ಅಪರಾಧ ಲೋಕಕ್ಕೆ ಕುಶಾಲನಗರ ಮತ್ತು ಜಿಲ್ಲೆಯಲ್ಲಿ ಶಾಶ್ವತ ಕಡಿವಾಣ ಹಾಕಬೇಕಾಗಿದೆ.