ಕುಶಾಲನಗರ, ನ. ೩೦: ನಾಡಿನ ಸಂಸ್ಕೃತಿ ಮತ್ತು ಕಲೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಮುನೀರ್ ಅಹಮದ್ ತಿಳಿಸಿದರು.

ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಪಟ್ಟಣದ ರಥ ಬೀದಿಯಲ್ಲಿ ಆಯೋಜಿಸಿದ್ದ ಸಾರ್ವಜನಿಕರಿಗೆ ರಂಗೋಲಿ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುನೀರ್ ಅಹ್ಮದ್, ಕುಟುಂಬದಲ್ಲಿ ಹಿರಿಯರು ಯುವ ಜನಾಂಗಕ್ಕೆ ಆಚಾರ ವಿಚಾರಗಳನ್ನು ತಿಳಿಸುವ ಮೂಲಕ ಜಾಗೃತಿ ಮೂಡಿಸಬೇಕು. ಸಾರ್ವಜನಿಕವಾಗಿ ಕಾರ್ಯಕ್ರಮ ಮಾಡುವುದರಿಂದ ಪ್ರಸಕ್ತ ವಿಚಾರಗಳು ಮೊಬೈಲ್ ಮೂಲಕ ತಮ್ಮ ಘನತೆಯನ್ನು ಕಳೆದುಕೊಳ್ಳುತ್ತಿದೆ. ಸಂಸ್ಕೃತಿ, ಕಲೆ, ಸಾಹಿತ್ಯ ವಿಚಾರ ಬಂದಾಗ ಜಾಗೃತರಾಗುವುದು ನಮ್ಮೆಲ್ಲರ ಆದ್ಯತೆಯಾಗಬೇಕೆಂದರು.

ಉದ್ಯಮಿ ಎಸ್.ಕೆ. ಸತೀಶ ಮಾತನಾಡಿ, ಕುಶಾಲನಗರ ತಾಲೂಕು ಕಸಾಪ ಉತ್ತಮವಾದ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಜನರಲ್ಲಿ ಸಾಹಿತ್ಯ, ಸಂಸ್ಕೃತಿ, ಪರಂಪರೆ ಬಗ್ಗೆ ಅರಿವು ಮೂಡಿಸುವ ಸದುದ್ದೇಶ ದಿಂದ ರಂಗೋಲಿ ಸ್ಪರ್ಧೆಗಳು ಸಹಕಾರಿ ಎಂದರು.

ಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ನಾಗೇಶ್, ಆಧುನಿಕ ಯುಗದಲ್ಲಿ ಪ್ರಾಚೀನ ಸಂಸ್ಕೃತಿ ಮತ್ತು ಕಲೆಯು ನಶಿಸಿ ಹೋಗುತ್ತಿದೆ. ಈ ದಿಸೆಯಲ್ಲಿ ಇಂತಹ ಸ್ಪರ್ಧೆಗಳ ಮೂಲಕ ರಂಗೋಲಿ ಸಂಸ್ಕೃತಿಯನ್ನು ಇಂದಿನ ಪೀಳಿಗೆಗೆ ಪರಿಚಯಿಸಲು ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು.

ಅತಿಥಿಗಳಾದ ಕೆ.ಜೆ. ಚಿನ್ನಸ್ವಾಮಿ, ಎಸ್.ಎಲ್. ಶ್ರೀಪತಿ, ದಿನೇಶ್, ವಿ.ವಿ. ನಾಗೇಂದ್ರ ಶೆಟ್ಟಿ, ಕಾರ್ಯ ದರ್ಶಿಗಳಾದ ಎಸ್.ನಾಗರಾಜ್, ಟಿ.ವಿ. ಶೈಲಾ, ಖಜಾಂಚಿ ಕೆ.ವಿ. ಉಮೇಶ್, ನಿರ್ದೇಶಕರಾದ ಎಂ.ಎನ್. ಕಾಳಪ್ಪ, ಹೇಮಲತಾ, ಟಿ.ಬಿ. ಮಂಜುನಾಥ್, ಡಿ.ಎಸ್. ಸೋಮಶೇಖರ್, ಜಿಲ್ಲಾ ಸಮಿತಿಯ ಕೆ.ಎನ್. ದೇವರಾಜ್, ಹೆಬ್ಬಾಲೆ ಘಟಕ ಅಧ್ಯಕ್ಷ ಎಂ.ಎನ್. ಮೂರ್ತಿ, ದೇವಿ ಪ್ರಸಾದ್, ಹರೀಶ್ ಗುಡ್ಡೆಮನೆ ಇತರರು ಇದ್ದರು.