ಸೋಮವಾರಪೇಟೆ, ನ. ೨೯: ಸಮಾಜದಲ್ಲಿನ ಅಸ್ಪೃಶ್ಯತೆಯ ಪಿಡುಗಿಗೆ ನಾರಾಯಣ ಗುರುಗಳು ತಮ್ಮದೆ ಆದ ನಿಲುವನ್ನು ಗಟ್ಟಿಯಾಗಿ ತೋರಿದ ಪರಿಣಾಮ ಸಮಾಜದಲ್ಲಿ ಬದಲಾವಣೆ ಸಾಧ್ಯವಾಯಿತು ಎಂದು ಮಾಜಿ ಸಚಿವ ಅಪ್ಪಚ್ಚು ರಂಜನ್ ಹೇಳಿದರು.

ಇಲ್ಲಿನ ಶ್ರೀ ನಾರಾಯಣ ಗುರು ಸೇವಾ ಸಮಿತಿ, ತುಳುನಾಡು ಬಿಲ್ಲವ ಮಹಿಳಾ ಸಂಘ ವತಿಯಿಂದ ಪಟ್ಟಣದ ಶಂಕಪ್ಪ ಹಾಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ನಾರಾಯಣ ಗುರುಗಳ ಸ್ಮರಣೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣದಿಂದ ಮಾತ್ರ ಎಲ್ಲವನ್ನು ಪಡೆದುಕೊಳ್ಳಲು ಸಾಧ್ಯ. ಉನ್ನತ ಶಿಕ್ಷಣವೆಂಬ ಸಂಪತ್ತನ್ನು ಮಕ್ಕಳಿಗೆ ಕಲ್ಪಿಸುವ ಮೂಲಕ ಗುರುಗಳ ಚಿಂತನೆಯನ್ನು ಮುಂದಿನ ಪೀಳಿಗೆಗೂ ತಲುಪಿಸುವ ಕಾರ್ಯವಾಗಬೇಕು ಎಂದರು.

ಮುಖ್ಯ ಭಾಷಣಕಾರರಾಗಿ ಉಪಸ್ಥಿತರಿದ್ದ ಮೈಸೂರು ಎನ್‌ಐಇ ಸಹಾಯಕ ಪ್ರಾಧ್ಯಾಪಕ ಡಾ. ಸಂಜಿತ್ ಎಸ್. ಅಂಜನ್ ಮಾತನಾಡಿ, ೨೦ನೇ ಶತಮಾನದಲ್ಲಿ ನಾರಾಯಣ ಗುರುಗಳು ಅವತಾರ ಪುರುಷರಂತೆ ಜನ್ಮತಾಳಿದರು. ಒಂದೇ ಜಾತಿ, ಒಂದೇ ದೇವರು, ಒಂದೇ ಧರ್ಮ ಇವುಗಳ ಮೂಲಕ ಮಾನವ ಸಮಾಜವನ್ನು ಎತ್ತರಕ್ಕೆ ಕೊಂಡೊಯ್ದರು ಎಂದರು.

ಜನಾAಗ ಬಾಂಧವರು ಒಗ್ಗಟ್ಟಿನ ಹೋರಾಟದ ಮೂಲಕ ನಮ್ಮ ಬೇಡಿಕೆಯನ್ನು ಈಡೇರಿಸಿಕೊಳ್ಳಬೇಕಾಗಿದೆ ಎಂದರು. ಶ್ರೀ ನಾರಾಯಣಗುರು ಸೇವಾ ಸಮಿತಿಯ ಅಧ್ಯಕ್ಷ ಬಿ.ಎ. ಭಾಸ್ಕರ್ ಮಾತನಾಡಿ, ಕಳೆದ ೨೪ ವರ್ಷಗಳ ಹಿಂದೆ ಜನ್ಮತಾಳಿದ ಸೇವಾ ಸಮಿತಿ ಇವತ್ತು ಅರ್ಧ ಎಕರೆ ನಿವೇಶನವನ್ನು ಹೊಂದಿದೆ. ರೂ. ೨.೬೦ ಕೋಟಿ ವೆಚ್ಚದಲ್ಲಿ ಭವನ ನಿರ್ಮಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸರ್ಕಾರದಿಂದ ಈಗಾಗಲೇ ೨೫ ಲಕ್ಷ ರೂ.ಗಳು ಬಿಡುಗಡೆಯಾಗಿದ್ದು, ಹಣಕಾಸು ಇಲಾಖೆಯ ಒಪ್ಪಿಗೆ ಸಿಕ್ಕ ತಕ್ಷಣ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ. ೮೫ಕ್ಕಿಂದ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಬಾಲನಟ ಅರುಶ್ ಉಮೇಶ್ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಶ್ರೀ ನಾರಾಯಣ ಗುರು ಸೇವಾ ಸಮಿತಿಯ ಗೌರವಾಧ್ಯಕ್ಷ ಲಕ್ಷö್ಮಣ ಪೂಜಾರಿ, ಹಿಂದೂ ಮಲೆಯಾಳಿ ಸಮಾಜದ ಜಿಲ್ಲಾಧ್ಯಕ್ಷ ವಿ.ಎಂ. ವಿಜಯ, ಮಡಿಕೇರಿ ಬಿಲ್ಲವ ಸೇವಾ ಸಮಾಜದ ತಾಲೂಕು ಅಧ್ಯಕ್ಷೆ ಬಿ.ಎಸ್. ಲೀಲಾವತಿ, ವೀರಾಜಪೇಟೆ ಅಧ್ಯಕ್ಷ ಬಿ.ಎಂ. ಗಣೇಶ್, ಕುಶಾಲನಗರ ಅಧ್ಯಕ್ಷ ಸುದೀರ್, ಸೋಮವಾರಪೇಟೆ ತುಳುನಾಡು ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಬೇಬಿ ಚಂದ್ರಹಾಸ್, ಸಮಿತಿ ಮಾಜಿ ಅಧ್ಯಕ್ಷ ಬಿ.ಆರ್. ಚಂದ್ರಹಾಸ್ ಉಪನ್ಯಾಸಕರಾದ ತೇಜಸ್, ಮೋಹನ್ ಇದ್ದರು.