ಈಶಾನ್ವಿ ಕಿರಣ್

ವೀರಾಜಪೇಟೆ, ನ. ೩೦: ಜಿಲ್ಲೆಯಲ್ಲಿ ಅದರಲ್ಲೂ ಹೆಚ್ಚಾಗಿ ವೀರಾಜಪೇಟೆ ತಾಲೂಕಿನಲ್ಲಿ ಮಾನವ-ವನ್ಯಜೀವಿ ಸಂಘರ್ಷ ಮಿತಿ ಮೀರಿದ್ದು ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳೆಗಾರರು, ಕಾರ್ಮಿಕರು, ವನ್ಯಜೀವಿಗಳ ದಾಳಿಯಿಂದ ಸಾವನ್ನಪ್ಪಿದ್ದು ಕಾಡಾನೆ, ಹುಲಿ ಸೇರಿದಂತೆ ಇತರೆ ವನ್ಯಜೀವಿಗಳ ಹಾವಳಿ ತಡೆಗಟ್ಟುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ.

ಬಹುತೇಕ ಪ್ರದೇಶಗಳಲ್ಲಿ ಆನೆ-ಮಾನವ ಸಂಘರ್ಷ ಸಾಮಾನ್ಯ ಎಂಬAತಾಗಿದೆ. ಹಾಡಹಗಲೇ ಜನವಸತಿ ಪ್ರದೇಶಗಳಿಗೆ ಕಾಡಾನೆಗಳು ಲಗ್ಗೆ ಇಡುತ್ತಿರುವುದು ಸ್ಥಳೀಯರನ್ನು ಭೀತಿಗೊಳಿಸಿದೆ. ಆನೆಗಳ ಹೆದರಿಕೆಯಿಂದ ಕಾರ್ಮಿಕರು ಕೆಲಸಕ್ಕೆ ಬರಲೂ ಹಿಂದೇಟು ಹಾಕುತ್ತಿದ್ದಾರೆ.

ಬಿದಿರಿನ ಕೊರತೆ

ಆನೆಗೆ ಆಹಾರ ಸಿಕ್ಕಿದರೆ ಅದು ಕಾಡು ಬಿಟ್ಟು ಬರುತ್ತದೆಯೇ ಎನ್ನುವ ಪ್ರಶ್ನೆ ನಮ್ಮ ಎದುರು ಬಂದೇ ಬರುತ್ತದೆ. ಅದಕ್ಕೆ ಸುಲಭ ಪರಿಹಾರ ಕಾಡಲ್ಲೇ ಅವುಗಳಿಗೆ ಆಹಾರ ಸಿಗುವಂತೆ ಮಾಡುವುದು.

ಒಂದೆರಡು ದಶಕಗಳಲ್ಲಿ ಅರಣ್ಯದಂಚಿನ ಕೃಷಿಯಲ್ಲೂ ಭಾರೀ ಬದಲಾವಣೆಯಾಗಿದೆ. ಹಿಂದೆಲ್ಲಾ ಖಾಲಿ ಬಿದ್ದಿದ್ದ ಜಮೀನುಗಳಲ್ಲೆಲ್ಲಾ ಜನ ಬಾಳೆ, ತರಕಾರಿ, ಶುಂಠಿ ಇನ್ನಿತರ ಬೆಳೆ ಬೆಳೆಯತೊಡಗಿದ್ದಾರೆ. ಕಾಡಲ್ಲಿ ಆಹಾರ ಸಿಗದೆ ಪಕ್ಕದಲ್ಲೇ ತನಗಿಷ್ಟವಾದ ಆಹಾರ ಸಿಗುವಾಗ ಆನೆ ಎಲ್ಲವನ್ನೂ ತಿಂದು ತುಳಿದು ಧ್ವಂಸ ಮಾಡುತ್ತದೆ.

ಆನೆ ನಿಯಂತ್ರಣ

ದಶಕಗಳಿAದ ಆನೆ ನಿಯಂತ್ರಣಕ್ಕೆ ಅಳವಡಿಸುತ್ತಿರುವ ಮಾರ್ಗಗಳೂ ಭಿನ್ನವಾಗಿವೆ. ಹಿಂದೆಲ್ಲಾ ಆನೆಗಳು ಬಾರದಂತೆ ಕಾಡಂಚಿನಲ್ಲಿ ಪರಿಸರ ಸ್ನೇಹಿ ಗುಂಡಿಗಳನ್ನು ತೋಡಲಾಗಿತ್ತು. ಸೋಲಾರ್ ತಂತಿ ಬೇಲಿಗಳು, ಜತೆಗೆ ರೈಲ್ವೆ ಕಂಬಿಗಳು, ಉಪಯೋಗದ ಪರಿಣಾಮ ಮಾತ್ರ ನಿರೀಕ್ಷೆಯಷ್ಟಿಲ್ಲ.

ಆನೆಗಳ ಉಸ್ತುವಾರಿ ನೋಡಿ ಕೊಳ್ಳಲೆಂದೇ ರೂಪಿಸಿರುವ ಆನೆ ಯೋಜನೆಯೂ ಕರ್ನಾಟಕದಲ್ಲಿದೆ. ಕಾಡಾನೆಗಳ ಹಾವಳಿ ತಡೆಯಲು ಶಾಶ್ವತ ಯೋಜನೆಗಳನ್ನು ರೂಪಿಸಲು ಸರಕಾರ ಚಿಂತನೆ ಮಾಡಬೇಕು ಎನ್ನುವುದು ಕೊಡಗಿನವರ ದೀರ್ಘಕಾಲದ ಬೇಡಿಕೆ.

ಸ್ಥಳಗಳು: ತಾಲೂಕಿನ ಅಮ್ಮತ್ತಿ, ಒಂಟಿಯAಗಡಿ, ಕಣ್ಣಂಗಾಲ, ಚೆಂಬೆಬೆಳ್ಳೂರು, ಮೈತಾಡಿ, ಮಗ್ಗುಲ, ಕಂಡAಗಾಲ, ಬಾಡಗ, ಶೆಟ್ಟಿಗೇರಿ, ಕೆದಮುಳ್ಳೂರು, ಪಾಲಂಗಾಲ, ತೋರ, ಕರಡ, ಕಕ್ಕಬ್ಬೆ ನೆಲಜಿ, ನಾಲಡಿ, ಚೆಯ್ಯಂಡಾಣೆ, ಚೇಲಾವರ, ಮರಂದೋಡ, ಪಾಲಿಬೆಟ್ಟ, ಬಾಡಗ ಬಾಣಂಗಾಲ, ಚೆನ್ನಯ್ಯನಕೋಟೆ ಸೇರಿದಂತೆ ದಕ್ಷಿಣ ಕೊಡಗಿನ ಅನೇಕ ಪ್ರದೇಶಗಳಲ್ಲಿ ಕಾಡಾನೆಗಳ ಹಿಂಡು ಕಾಫಿ ತೋಟಗಳಲ್ಲಿ ನಿರಂತರವಾಗಿ ದಾಳಿ ನಡೆಸುತ್ತಿದ್ದು, ರೈತರ ಬೆಳೆಗಳನ್ನು ನಾಶಪಡಿಸಿ ಸಾಕಷ್ಟು ನಷ್ಟ ಉಂಟು ಮಾಡುತ್ತಿದೆ. ಆದ್ದರಿಂದ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ

(ಮೊದಲ ಪುಟದಿಂದ) ಕಾಡಾನೆಗಳನ್ನು ಮರಳಿ ಕಾಡಿಗಟ್ಟುವ ವಿಶೇಷ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಕೈಗೆತ್ತಿಕೊಳ್ಳಬೇಕು ಎನ್ನುವುದೇ ಜನರ ಬೇಡಿಕೆಯಾಗಿದೆ.

ಕಾಡಿಗೆ ಅಟ್ಟುವ ನಾಟಕ-ಕಾಯಕ

ಕೊಡಗಿನಲ್ಲಿ ಕಾಡಾನೆಗಳೇ ಇಲ್ಲ. ಎಲ್ಲವೂ ನಾಡಾನೆಗಳು ಎಂಬAತಾಗಿದೆ. ಅವುಗಳಿಗೆ ಜನತೆಯ, ಪಟಾಕಿಗಳ ಭಯವಿಲ್ಲ. ಇವುಗಳು ಕಾಡಿನಲ್ಲಿರದೆ ಜನವಸತಿ ಪ್ರದೇಶದಲ್ಲೆ ಉಳಿದುಕೊಳ್ಳುತ್ತಿವೆ.

ಬಹುತೇಕ ಅಭಯಾರಣ್ಯಗಳು, ಮೀಸಲು ಅರಣ್ಯಗಳಲ್ಲಿ ಅನಧಿಕೃತವಾಗಿ ತೇಗದ ಮರಗಳು ತಲೆ ಎತ್ತಿರುವುದರ ಪರಿಣಾಮ ಕಾಡುಪ್ರಾಣಿಗಳಿಗೆ ಅಲ್ಲಿ ಆಹಾರದ ಕೊರತೆ ಎದುರಾಗಿದೆ. ಆಹಾರ ಹುಡುಕುತ್ತಾ ಬರುವ ಕಾಡಾನೆಗಳು ಕಾಫಿ ತೋಟಗಳಲ್ಲಿಯೇ ವಾಸಿಸುತ್ತವೆ. ಅವುಗಳನ್ನು ಕಾಡಿಗೆ ಅಟ್ಟುವ ನಾಟಕವನ್ನು ಅರಣ್ಯ ಇಲಾಖೆ ಮಾಡುತ್ತಿದೆ ಎಂದು ರೈತರು ತಮ್ಮ ಅಸಹನೆ ವ್ಯಕ್ತಪಡಿಸಿದ್ದಾರೆ.

ತಾಲೂಕಿನಾದ್ಯಂತ ಕಾಫಿ ಬೆಳೆಗಾರರಿಗೆ ಮತ್ತು ಕಾರ್ಮಿಕರಿಗೆ ಕಾಡಾನೆಗಳ ಹಾವಳಿ ಬಹುದೊಡ್ಡ ಸವಾಲಾಗಿದೆ. ಇದರಿಂದ ವನ್ಯಪ್ರಾಣಿಗಳ ಹಾವಳಿ ಪೀಡಿತ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ರಸ್ತೆಗಳಲ್ಲಿ ಮುಕ್ತವಾಗಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ವಾಹನ ಚಾಲಕರು ಜೀವಭಯದಿಂದ ವಾಹನ ಚಾಲಿಸಬೇಕಾಗಿದೆ. ಆದ್ದರಿಂದ ಇನ್ನಾದರೂ ಅರಣ್ಯ ಇಲಾಖೆ ಕಾಡಾನೆಗಳ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಅರಣ್ಯ ಇಲಾಖೆ ವೈಜ್ಞಾನಿಕ ಪರಿಶೀಲನೆ ನಡೆಸಿ ಕಾಡಾನೆಗಳು ನಿರಂತರವಾಗಿ ಸಂಚರಿಸುವ ಮಾರ್ಗವನ್ನು ಗುರುತಿಸಬೇಕು. ಕಾಡಾನೆಗಳ ನಿರಂತರ ದಾಳಿಗೆ ತೋಟ ಕಾರ್ಮಿಕರು ಬಲಿಯಾಗುತ್ತಿರುವ ಪ್ರದೇಶಗಳಲ್ಲೂ ವಿಶೇಷ ನಿಯಂತ್ರಣ ಕ್ರಮಗಳನ್ನು ಜರುಗಿಸಬೇಕು ಎಂದು ಬೆಳೆಗಾರರು ಹೇಳುತ್ತಾರೆ.

ಹುಲಿ ಉಪಟಳಕ್ಕೆ ಮಾನವ ಜಾನುವಾರುಗಳು ಬಲಿ

ದಕ್ಷಿಣ ಕೊಡಗಿನಲ್ಲಿ ಹುಲಿ ದಾಳಿಗೆ ಬಾಲಕ ಸೇರಿದಂತೆ ಅನೇಕ ಕಾರ್ಮಿಕರು ಬಲಿಯಾಗಿದ್ದು ರೈತರು ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ ಜಾನಾವಾರುಗಳ ಜೊತೆಗೆ ತೋಟಗಳಲ್ಲಿ ಮೇಯುತ್ತಿರುವ ಜಾನುವಾರುಗಳನ್ನು ಹುಲಿ ದಾಳಿ ನಡೆಸಿ ಕೊಂದು ತಿನ್ನುತ್ತಿದೆ.

ಕಾಡಾನೆ ದಾಳಿಯಿಂದ ಪ್ರಾಣ ಹಾನಿ ಬೆಳೆ ನಾಶ

ಕೊಡಗು ಜಿಲ್ಲೆಯ ಕಾಫಿ ತೋಟಗಳು ಕಾಡಾನೆಗಳ ಆವಾಸಸ್ಥಾನವಾಗಿ ಮಾರ್ಪಾಡುಗೊಂಡಿವೆ. ಜಿಲ್ಲೆಯ ಕಾಫಿ ತೋಟಗಳು ಕಾಡಾನೆಗಳ ಬೀಡಾಗಿವೆ. ಕಾಡಿನಿಂದ ನಾಡಿಗೆ ಆಹಾರ ಅರಸಿ ಬರುತ್ತಿರುವ ಕಾಡಾನೆಗಳು, ತೋಟದಲ್ಲೇ ಬೀಡುಬಿಟ್ಟಿವೆ. ತೋಟದಲ್ಲಿ ಆನೆಗಳಿಗೆ ಬೇಕಾದ ಆಹಾರ ಸಿಗುತ್ತಿರುವುದರಿಂದ, ಕಾಡಾನೆಗಳು ತೋಟವನ್ನೇ ತಮ್ಮ ವಾಸಸ್ಥಳವಾಗಿ ಮಾಡಿಕೊಂಡು ತೋಟದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರು, ಬೆಳೆಗಾರರ ಮೇಲೆ ದಾಳಿ ನಡೆಸುತ್ತಿವೆ. ಕಾಡಾನೆ ದಾಳಿಯಿಂದ ಹಲವು ಬೆಳೆಗಾರರು, ಕಾರ್ಮಿಕರು ಸಾವನ್ನಪ್ಪಿದ್ದು ಅದೆಷ್ಟೊ ಮಂದಿ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗಿ ಇಂದಿಗೂ ಸಂಕಷ್ಟದ ಬದುಕು ಸಾಗಿಸುತ್ತಿದ್ದಾರೆ. ತೋಟದಲ್ಲಿ ಆಹಾರ ಅರಸಿ ಬರುವ ಕಾಡಾನೆಗಳು ಬೆಳೆಗಳನ್ನು ನಾಶ ಪಡಿಸುವುದು ಒಂದೆಡೆಯಾದರೆ ಕಾರ್ಮಿಕರು ತೋಟಗಳಲ್ಲಿ ಕಾರ್ಯನಿರ್ವಹಿಸಲು ಹಿಂದೇಟು ಹಾಕುತ್ತಿರುವುದರಿಂದ ಬೆಳೆಗಾರರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪರಿಹಾರಕ್ಕಿಂತ ವೆಚ್ಚವೇ ಅಧಿಕ

ಅರಣ್ಯ ಇಲಾಖೆ ವನ್ಯಜೀವಿಗಳ ದಾಳಿಯಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ, ನಷ್ಟ ಅನುಭವಿಸಿದವರಿಗೆ ನೀಡುವ ಪರಿಹಾರ ಸಾಲದು ಎಂಬ ಮಾತುಗಳು ಕೇಳಿ ಬರುತ್ತಿವೆ. ವೀರಾಜಪೇಟೆ ಅರಣ್ಯ ವಿಭಾಗದಲ್ಲಿ ೨೦೧೯ ರಿಂದ ೨೦೨೩ ರವರೆಗಿನ ಅವಧಿಯಲ್ಲಿ ವನ್ಯಜೀವಿಗಳಿಂದಾದ ಹಾನಿಗಳಿಗೆ ನೀಡಿದ ದಯಾತ್ಮಕ ಧನ ಸಹಾಯ ಸುಮಾರು ೬ ಕೋಟಿಯಷ್ಟಿದೆ. ೮೩ಕ್ಕೂ ಅಧಿಕ ಪ್ರಾಣಹಾನಿ ಮತ್ತು ಮಾನವ ಗಾಯ ಪ್ರಕರಣಗಳು ದಾಖಲಾಗಿದ್ದು ೧.೫ ಕೋಟಿಗೂ ಅಧಿಕ ಮೊತ್ತದ ಪರಿಹಾರ ನೀಡಲಾಗಿದೆ.

ಸರ್ಕಾರ ಮತ್ತು ಅರಣ್ಯ ಇಲಾಖೆ ವನ್ಯಜೀವಿ-ಮಾನವ ಸಂಘರ್ಷ ತಡೆಗಟ್ಟಲು ಹಲವು ಕ್ರಮಗಳನ್ನು ಕೈಗೊಂಡರೂ ಸಂಘರ್ಷ ಮಾತ್ರ ಮುಂದುವರೆಯುತ್ತಲೆ ಇದೆ. ಅನೇಕ ಜೀವಗಳು ಬಲಿಯಾಗುತ್ತಲಿವೆ. ಇವುಗಳನ್ನು ತಡೆಯಲು ಮತ್ತಷ್ಟು ಕಠಿಣ ಕ್ರಮಗಳ ಅಗತ್ಯತೆ ಇದೆ.

ಜಿಲ್ಲೆಯಲ್ಲಿ ಆನೆ-ಮಾನವ ಸಂಘರ್ಷ ನಿರಂತರವಾಗಿದೆ. ಅರಣ್ಯ ಇಲಾಖೆ ಸಂಘರ್ಷ ತಡೆಯುವಲ್ಲಿ ವಿಫಲವಾಗಿದ್ದು, ಜಿಲ್ಲೆಯಲ್ಲಿ ಸಾವುಗಳು ಸಂಭವಿಸಿದಾಗ ಇಲಾಖೆಯವರು ಕಾಟಾಚಾರದ ಕ್ರಮಕೈಗೊಳ್ಳುತ್ತಾರೆ. ನಂತರ ಈ ವಿಚಾರಗಳನ್ನೇ ಮರೆತು ಬಿಡುತ್ತಾರೆ. ಆನೆ ಮತ್ತು ಕಾಡುಪ್ರಾಣಿಗಳ ಹಾವಳಿಯಿಂದ ಜನಸಾಮಾನ್ಯರು, ಕಾರ್ಮಿಕರು, ವಿದ್ಯಾರ್ಥಿಗಳು ದಿನನಿತ್ಯ ಸಂಕಷ್ಟವನ್ನು ಎದುರಿಸಬೇಕಾಗಿದೆ. ಕಾರ್ಮಿಕರು ಪ್ರಾಣವನ್ನು ಒತ್ತೆ ಇಟ್ಟು ಕೆಲಸಕ್ಕೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವಿಚಾರದಲ್ಲಿ ಅರಣ್ಯ ಇಲಾಖೆ ಸಂಪೂರ್ಣ ವಿಫಲತೆಯನ್ನು ಹೊಂದಿದ್ದು ಜಿಲ್ಲೆಯಲ್ಲಿ ಕಾಡುಪ್ರಾಣಿ ಮತ್ತು ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರವನ್ನು ಈ ಸರ್ಕಾರ ತಕ್ಷಣವೇ ರೂಪಿಸಿ ಜಾರಿಗೊಳಿಸಬೇಕಿದೆ.