ಸಿದ್ದಾಪುರ, ನ. ೩೦: ಜಿಲ್ಲಾ ಹಾಗೂ ವೀರಾಜಪೇಟೆ ತಾಲೂಕು ಮತ್ತು ಅಮ್ಮತ್ತಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಚೆನ್ನಯ್ಯನ ಕೋಟೆ ಸರಕಾರಿ ಪ್ರೌಢ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಹಿರಿಯ ಸಾಹಿತಿ ದಿ. ಎ.ಎನ್. ರಾಮಕೃಷ್ಣ ಮತ್ತು ದಿ. ಬಿ.ಜಿ. ರಘುನಾಥ್ ನಾಯಕ್ ಜ್ಞಾಪಕಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮ ತಾ. ೨ ರಂದು ಬೆಳಿಗ್ಗೆ ೧೦ ಗಂಟೆಗೆ ಪ್ರೌಢಶಾಲಾ ಸಭಾಂಗಣದಲ್ಲಿ ನಡೆಯಲಿದೆ.

ಅಮ್ಮತ್ತಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಟಿ.ಹೆಚ್. ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಶಾಲಾ ಮುಖ್ಯ ಶಿಕ್ಷಕಿ ಕೆ.ಎ. ಕಾವೇರಮ್ಮ ಉದ್ಘಾಟನೆ ಮಾಡುವುದು. ಕೊಡಗು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಪ್ರಾಸ್ತಾವಿಕ ಭಾಷಣ ಮಾಡಲಿದ್ದು, ಕನ್ನಡ ರಾಜ್ಯೋತ್ಸವ ಎಂಬ ವಿಷಯದ ಮೇಲೆ ಸಾಹಿತಿ ರಜಿತ ಕಾರ್ಯಪ್ಪ ಉಪನ್ಯಾಸ ನೀಡಲಿದ್ದಾರೆ.

ಕನ್ನಡ ಸೇವೆಯಲ್ಲಿ ಪೂರ್ವಾಧ್ಯಕ್ಷರ ಸೇವೆ ಎಂಬ ವಿಚಾರವಾಗಿ ಬಿ.ಜಿ.ಎಸ್ ಪದವಿ ಪೂರ್ವ ಕಾಲೇಜು ಕನ್ನಡ ಉಪನ್ಯಾಸಕಿ ಉಮಾರಾಣಿ ಉಪನ್ಯಾಸ ನೀಡಲಿದ್ದಾರೆ. ನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್, ವೀರಾಜಪೇಟೆ ತಾಲೂಕು ಕಸಾಪ ಅಧ್ಯಕ್ಷ ರಾಜೇಶ್ ಪದ್ಮನಾಭ, ಚನ್ನಯ್ಯನಕೋಟೆ ಗ್ರಾ.ಪಂ. ಅಧ್ಯಕ್ಷ ಮೇಕೇರಿರ ಅರುಣ್ ಕುಮಾರ್, ಪ್ರೌಢ ಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷೆ ಸಜಿತಾ, ಗ್ರಾ.ಪಂ. ಸದಸ್ಯರಾದ ಶೀಲಾ, ವಿಜು ಭಾಗವಹಿಸಲಿದ್ದಾರೆ.