ಗೋಣಿಕೊಪ್ಪಲು. ನ. ೨೯ : ಗೋಣಕೊಪ್ಪ ಆಟೋ ಮಾಲೀಕರ ಚಾಲಕರ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ೧೮ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮುಂಜಾನೆ ನಗರದ ಆಟೋ ನಿಲ್ದಾಣದಲ್ಲಿ ಸಂಘದ ಗೌರವ ಅಧ್ಯಕ್ಷ ಕೆ.ಪಿ.ಬೋಪಣ್ಣ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ನಗರದ ಹರಿಶ್ಚಂದ್ರಪುರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಿಂದ ಕನ್ನಡಾಂಬೆ ಭುವನೇಶ್ವರಿಯ ತೇರಿನೊಂದಿಗೆ ಡೊಳ್ಳು ಕುಣಿತ,ವೀರಗಾಸೆ, ಛದ್ಮವೇಷ ಹಾಗೂ ಗೊಂಬೆಗಳ ನೃತ್ಯ ಪ್ರದರ್ಶನ ಹಾಗೂ ಎತ್ತಿನ ಗಾಡಿಯ ಮೆರವಣಿಗೆಗೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಕೆ.ಬೋಪಣ್ಣ, ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಮೋದ್ ಗಣಪತಿ, ಬಿ.ಎನ್.ಪ್ರಕಾಶ್ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಎತ್ತಿನ ಗಾಡಿಯ ಮೆರವಣಿಗೆ ಗಮನ ಸೆಳೆಯಿತು. ನಗರದಲ್ಲಿನ ನೂರಾರು ಆಟೋಗಳು ಕನ್ನಡ ಬಾವುಟದೊಂದಿಗೆ ಮೆರವಣಿಗೆಯಲ್ಲಿ ಸಾಗಿ ಬಂದವು. ರಸ್ತೆಯ ಎರಡು ಬದಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಜಮಾಯಿಸಿದ್ದರು.

ಮೆರವಣಿಗೆಯು ಬಸ್ ನಿಲ್ದಾಣ ಸಮೀಪಿಸುತ್ತಿದ್ದಂತೆಯೇ ನಿಲ್ದಾಣದಲ್ಲಿ ಚಾಮರಾಜ ಪೇಟೆಯ ವೀರಗಾಸೆ ಕಲಾವಿದರು ನಡೆಸಿದ ಪ್ರದರ್ಶನ ಜನ ಮೆಚ್ಚುಗೆ ಪಡೆಯುವಲ್ಲಿ ಯಶಸ್ವಿಯಾಯಿತು. ನಗರದ ಮುಖ್ಯ ಬೀದಿಯಲ್ಲಿ ಮೆರವಣಿಗೆ ಸಾಗಿ ಸ್ಥಳೀಯ ಉಮಾ ಮಹೇಶ್ವರಿ ದೇವಾಲಯ ಬಳಿ ಮೆರವಣಿಗೆಯು ಅಂತ್ಯಗೊAಡಿತ್ತು.

ಆಟೋಚಾಲಕ ಹಾಗೂ ಮಾಲೀಕರ ಸಂಘದ ಗೌರವ ಅಧ್ಯಕ್ಷ ಕೆ.ಪಿ.ಬೋಪಣ್ಣ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಕಳೆದ ೧೮ ವರ್ಷಗಳಿಂದ ಸಾರ್ವಜನಿಕರ ಸಹಕಾರದಿಂದ ಕನ್ನಡ ರಾಜ್ಯೋತ್ಸವವನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ. ಕನ್ನಡದ ಭಾಷೆ ಉಳಿಸುವ ಕೆಲಸ ಎಲ್ಲರಿಂದಲೂ ನಡೆಯಬೇಕು. ಹೊರರಾಜ್ಯದಿಂದ ಬರುವ ನಾಗರಿಕರೊಂದಿಗೂ ಕನ್ನಡದಲ್ಲಿಯೇ ಮಾತನಾಡುವ ಮೂಲಕ ಕನ್ನಡವನ್ನು ಮತ್ತಷ್ಟು ಜೀವಂತವಾಗಿಡಲು

(ಮೊದಲ ಪುಟದಿಂದ) ಸರ್ವರು ಪ್ರಯತ್ನಿಸುವಂತೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಅಕ್ರಮ ಸಕ್ರಮ ಸಮಿತಿ ಮಾಜಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಪ್ರಮೋದ್ ಗಣಪತಿ, ರಾಮಕೃಷ್ಣ, ಆಟೋಚಾಲಕರ, ಮಾಲೀಕರ ಸಂಘದ ಅಧ್ಯಕ್ಷ ಜಿಮ್ಮ ಸುಬ್ಬಯ್ಯ, ಗೋಣಿಕೊಪ್ಪ ಆಸ್ಪತ್ರೆಯ ವೈದ್ಯರಾದ ಡಾ.ಸುರೇಶ್, ಕನ್ನಡ ರಾಜ್ಯೋತ್ಸವ ಸಮಿತಿಯ ಅಧ್ಯಕ್ಷ ಕೆ.ವೈ.ಅಶ್ವತ್, ಕಾರ್ಯದರ್ಶಿ ಸುರೇಶ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಮಧ್ಯಾಹ್ನದ ವೇಳೆ ಆಟೋ ನಿಲ್ದಾಣ ದಲ್ಲಿ ಸಾವಿರಾರು ಮಂದಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

-ಹೆಚ್.ಕೆ.ಜಗದೀಶ್