ಮಡಿಕೇರಿ, ನ. ೨೯: ಭಾಗಮಂಡಲ ತ್ರಿವೇಣಿ ಸಂಗಮ ತಟದಲ್ಲಿ ಶ್ರೀ ಕಾವೇರಿ ಮಾತೆಗೆ ಮಹಾ ಆರತಿ ನೆರವೇರಿಸಲು ಉತ್ತರದ ಶ್ರೀ ಕಾಶೀ ಕ್ಷೇತ್ರ ಹಾಗೂ ಹರಿದ್ವಾರ ಮತ್ತು ಹೃಷಿಕೇಶದಲ್ಲಿ ಪ್ರತಿ ದಿನ ಸಂಜೆ ನಡೆಸುವ ಗಂಗಾ ಮಹಾ ಆರತಿಯೇ ಪ್ರೇರಣೆ. ಅಲ್ಲಿ ಪ್ರತಿ ದಿನ ಸಂಜೆ ಜಾತ್ರೆಯಂತೆ ಜನಸ್ತೋಮದ ನಡುವೆ ಜರುಗುವ ಸೇವೆಯನ್ನು ಪ್ರತ್ಯಕ್ಷ ಕಂಡಾಗ ದಕ್ಷಿಣ ಪ್ರಯಾಗ ಖ್ಯಾತಿ ಪಡೆದಿರುವ ಶ್ರೀ ಕಾವೇರಿ ತಟ ಭಾಗಮಂಡಲದ ತ್ರಿವೇಣಿ ಸಂಗಮ ತಟದಲ್ಲಿ ಈ ಸೇವೆ ಆರಂಭಿಸಿದೆ. ಕಳೆದ ಎಂಟು ವರ್ಷಗಳಿಂದ ಸಾಂಕೇತಿಕ ರೀತಿ ಕಾವೇರಿ ಮಾತೆಗೆ ಆರತಿಯನ್ನು ಕಾರ್ತಿಕ ಮಾಸದ ಹುಣ್ಣಿಮೆ ಸಂದರ್ಭದಲ್ಲಿ ನೆರವೇರಿಸಲು ಪ್ರಯತ್ನ ನಡೆದಿದೆ ಎಂದು ಬೆಂಗಳೂರಿನ ಸ್ವಯಂ ಉದ್ಯಮಿ ಹಾಗೂ ವಿ. ಹಿಂ. ಪ. ಪ್ರಮುಖ ಮುನಿಕೃಷ್ಣ ನುಡಿದರು.

ಕಾವೇರಿ ಆರತಿ ಸಂದರ್ಭ ‘ಶಕ್ತಿ’ ಸಂದರ್ಶನದಲ್ಲಿ ಮಾತನಾಡಿದ ಅವರು ತಾನು ಆಗಿಂದಾಗ್ಗೆ ಉತ್ತರ ಭಾರತದಲ್ಲಿ ಯಾತ್ರೆ ಕೈಗೊಳ್ಳುವ ವೇಳೆ ಗಂಗಾರತಿ ವೀಕ್ಷಿಸಲು ಅವಕಾಶ ಲಭಿಸಿದಾಗ ನಮ್ಮ ಹೆಮ್ಮೆಯ ಕಾವೇರಿಮಾತೆಯ ತವರು ನೆಲದಲ್ಲಿ ಈ ಪ್ರಯತ್ನ ಮಾಡಬೇಕು ಎಂದು ಮನಸಾಯಿತು ಎಂದು ಹೇಳಿದರು. ಪ್ರಕೃತಿಯ ಮಡಿಲಲ್ಲಿ ಕಾವೇರಿ ಮಾತೆ ತೀರ್ಥರೂಪಿಣಿಯಾಗಿ ಆವಿರ್ಭವಿಸುತ್ತಾಳೆ. ದಕ್ಷಿಣ ಗಂಗೆ ಎಂಬ ಖ್ಯಾತಿ ಹೊಂದಿರುವ ಈ ಜೀವ ನದಿ ಭಾಗಮಂಡಲದಲ್ಲಿ ಮೊದಲ ಸಂಗಮದೊAದಿಗೆ ಪ್ರಯಾಗ ಕ್ಷೇತ್ರದಷ್ಟೇ ಪುಣ್ಯ ಸ್ನಾನದ ಹಾಗೂ ಪಿತೃಕಾರ್ಯದ ಸ್ಥಳವಾಗಿದೆ. ಇಲ್ಲಿ ನಿತ್ಯವೂ ಮಹಾ ಆರತಿ ಬೆಳಗಬೇಕು ಎಂದು ಅನೇಕ ಸಂತಶ್ರೇಷ್ಠರ ಆಶಯವಿದೆ ಎಂದು ಅವರು ನೆನಪಿಸಿಕೊಂಡರು.

ಉತ್ತರ ಭಾರತದ ಹಿಮಾಲಯ ಪರ್ವತದ ತಪ್ಪಲಿನಲ್ಲಿ ಇರುವ ಪಂಚ ಕೇದಾರನಾಥ ಸನ್ನಿಧಿಗಳು ಸೇರಿದಂತೆ ಗಂಗಾ ತಟದ ಅಲ್ಲಲ್ಲಿ ತೀರ್ಥ ಯಾತ್ರೆ ಕೈಗೊಳ್ಳುವ ಮೂಲಕ ಅಲ್ಲಿನ ಜನತೆ ನಿರ್ವಹಿಸುವ ಧಾರ್ಮಿಕ ಕಾರ್ಯಕ್ರಮಗಳು ಹೊಸತನದೊಂದಿಗೆ ಸ್ಪೂರ್ತಿ ತುಂಬುವAತಾಗಿವೆ ಎಂದು ಅವರು ಮೆಲುಕು ಹಾಕಿದರು.

ವಿಶ್ವ ಹಿಂದೂ ಪರಿಷತ್ ಹಿರಿಯ ನಾಯಕ ಬಿ. ಯನ್. ಮೂರ್ತಿ ಅವರ ಮಾರ್ಗದರ್ಶನದಲ್ಲಿ ಕಾಗಿನೆಲೆ ಆದಿ ಕೇಶವ ಸನ್ನಿಧಿಯಲ್ಲಿ ಕನಕ ಜಯಂತಿ ಉತ್ಸವ ಹಾಗೂ ದೇವರಾಯನ ದುರ್ಗದಲ್ಲಿ ಪರಿಕ್ರಮ ಯಾತ್ರೆ ತನಗೆ ಕೊಡಗಿನ ಕಾವೇರಿಮಾತೆಯ ತವರು ನೆಲದಲ್ಲಿ ನೆಲೆಸಲು ಪ್ರೇರಣೆ ನೀಡಿದೆ ಎಂದ ಮುನಿಕೃಷ್ಣ, ಬೆಂಗಳೂರು ಇಂದಿರಾನಗರ ನಿವಾಸಿಯಾದ ತನಗೆ ಕಾವೇರಿ ತಟದ ಪೇರೂರು ಗ್ರಾಮದಲ್ಲಿ ಜಾಗ ಖರೀದಿಸಿ ವಾಸ ಮಾಡುವ ಮನಸ್ಸು ಉಂಟಾಯಿತು. ಈ ಮೂಲಕ ಕಾವೇರಿಮಾತೆಯ ಸೇವೆಗೆ ಅವಕಾಶವೂ ಲಭಿಸಿತು ಎಂದು ಮಾರ್ನುಡಿದರು. ಕೊಡಗಿನ ಜನತೆಯ ಮತ್ತು ವಿಶ್ವ ಹಿಂದೂ ಪರಿಷತ್ತಿನ ಸಹಕಾರದಿಂದ ಭವಿಷ್ಯದಲ್ಲಿ ಪ್ರತಿ ತಿಂಗಳ ಹುಣ್ಣಿಮೆಯ ಸಂದರ್ಭದಲ್ಲಿ ಶ್ರೀ ಕಾವೇರಿ ಮಾತೆ ಆರತಿ ನೆರವೇರಿಸಬೇಕು ಎಂದು ಶ್ರೀರಂಗಪಟ್ಟಣದ ಸಂತ ಶ್ರೀ ಗಣೇಶ ಸ್ವರೂಪಾನಂದರು ಆಗ್ರಹಪಡಿಸುತ್ತಿದ್ದು, ಭಗವಂತನ ಇಚ್ಛೆ ಎಂದು ಮನತುಂಬಿದ ನುಡಿಯಾಡಿದರು.

-ಶ್ರೀಸುತ