ವೀರಾಜಪೇಟೆ, ನ. ೨೯: ವೀರಾಜಪೇಟೆ ವಿಭಾಗದ, ವೀರಾಜಪೇಟೆ ವಲಯದ, ವೀರಾಜಪೇಟೆ ಶಾಖೆ ಹಾಗೂ ಅಮ್ಮತ್ತಿ ಶಾಖೆಗೆ ಒಳಪಡುವ ಗ್ರಾಮದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳು ಹಲವು ದಿನಗಳಿಂದ ಅಲ್ಲಿನ ಗ್ರಾಮಸ್ಥರ ಗದ್ದೆ ಹಾಗೂ ತೋಟಗಳಿಗೆ ಲಗ್ಗೆ ಇಟ್ಟು ಕೃಷಿ ನಷ್ಟ ಮಾಡುತ್ತಿರುವುದರಿಂದ ಹಾಗೂ ಹೆಚ್ಚು ಉಪಟಳ ನೀಡುತ್ತಿರುವುದರಿಂದ ಚಂಬೆಬೆಳ್ಳೂರು ಗ್ರಾಮ ಪಂಚಾಯಿತಿಯವರು ಹಾಗೂ ಗ್ರಾಮಸ್ಥರ ಮನವಿಯ ಮೇರೆಗೆ ಮಗ್ಗುಲ, ಬಿಟ್ಟಂಗಾಲ, ಕುಕ್ಲೂರು, ಐಮಂಗಲ, ಪುದುಕೋಟೆ, ನಲ್ಪತೋಕ್ಲು, ಬಿಳುಗುಂದ, ದೇವಣಗೇರಿ, ಚಂಬೆಬೆಳ್ಳೂರು, ಕಾವಾಡಿ, ಕಣ್ಣಂಗಾಲ, ಬೆಳ್ಳರಿಮಾಡು, ಮೈತಾಡಿ, ಚಾಮಿಯಾಲ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ತಾ. ೩೦ ರಂದು (ಇಂದು) ಮತ್ತು ಡಿ. ೧ರಂದು ಮರಳಿ ಕಾಡಿಗೆ ಓಡಿಸುವ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ.
ತೋಟದ ಕಾರ್ಮಿಕರು ತಮ್ಮ ಕೆಲಸ ಕಾರ್ಯಗಳನ್ನು ನಿಲ್ಲಿಸುವಂತೆ ಹಾಗೂ ಗ್ರಾಮಸ್ಥರು, ಶಾಲಾ ಮಕ್ಕಳು ಎಚ್ಚರಿಕೆಯಿಂದ ಇದ್ದು ಕಾಡಾನೆ ಕಾರ್ಯಾಚರಣೆಗೆ ಇಲಾಖೆಯೊಂದಿಗೆ ಸಹಕರಿಸಬೇಕಾಗಿ ಹಾಗೂ ಸಮಯದಲ್ಲಿ ಸಾರ್ವಜನಿಕರು ಪಟಾಕಿಗಳನ್ನು ಸಿಡಿಸಬಾರದೆಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎ. ನೆಹರು ಕೋರಿದ್ದಾರೆ.