ಶನಿವಾರಸAತೆ, ನ. ೨೯ : ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಅಧ್ಯಕ್ಷೆ ಸತ್ಯವತಿ ದೇವರಾಜ್ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಕರೆಯಲಾಗಿತ್ತು. ಆದರೆ, ಸಭೆಗೆ ಅಧ್ಯಕ್ಷೆ ಸತ್ಯವತಿ ಹಾಗೂ ಇತರ ೭ ಮಂದಿ ಸದಸ್ಯರು ಗೈರು ಹಾಜರಾಗಿದ್ದು, ಉಪಾಧ್ಯಕ್ಷೆ ಗೋಪಿಕಾ ಹರೀಶ್ ಹಾಗೂ ನಾಲ್ವರು ಸದಸ್ಯರು ಹಾಜರಾಗಿ ಸಭೆ ನಡೆಯದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಸಭೆ ಕರೆದು ಸ್ವತ: ತಾವೇ ಗೈರು ಹಾಜರಾದ ಅಧ್ಯಕ್ಷೆ ಸತ್ಯವತಿ, ಸದಸ್ಯರಾದ ಡಿ.ಪಿ.ಭೋಜಪ್ಪ, ಸಿ.ಜೆ.ಗಿರೀಶ್, ದೇವರಾಜ್, ನಂದಿನಿ, ಎಸ್.ಪಿ.ಭಾಗ್ಯಾ, ಜಾನಕಿ, ಭವಾನಿ ಸಭೆಗೆ ಹಾಜರಾಗದೇ ಮಾಹಿತಿಯನ್ನು ನೀಡದೆ ಸಭೆಗೆ ಅಗೌರವ, ಅವಮಾನ ಮಾಡಿದ್ದು ಏಕೆಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಯಿಷಾ ಅವರನ್ನು ಹಾಜರಿದ್ದ ಉಪಾಧ್ಯಕ್ಷೆ ಗೋಪಿಕಾ ಹರೀಶ್, ಸದಸ್ಯರಾದ ಪೂರ್ಣಿಮಾ ಕಿರಣ್, ನಿತಿನ್, ಮನುಮಹಾಂತೇಶ್, ಎಸ್.ಸಿ.ಕಾಂತರಾಜ್ ಪ್ರಶ್ನಿಸಿದರು.

ಪ್ರತಿಕ್ರಿಯೆ ವ್ಯಕ್ತಪಡಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಯಿಷಾ, ಅಧ್ಯಕ್ಷರು ಸಭೆಗೆ ಹಾಜರಾಗಲು ಸಾಧ್ಯವಿಲ್ಲವೆಂದು ತಿಳಿಸಿದ್ದು ಉಪಾಧ್ಯಕ್ಷರು ಸಭೆ ನಡೆಸುವುದಾದರೆ ನಡೆಸಲಿ ಎಂದು ತಿಳಿಸಿರುವರಾದರೂ ಕೋರಂ ಇಲ್ಲದ ಕಾರಣ ಸಭೆ ನಡೆಸಲಾಗುವುದಿಲ್ಲ ಎಂದು ಉತ್ತರಿಸಿದರು.

ಅಧ್ಯಕ್ಷರ ಈ ರೀತಿಯ ನಡೆ, ವರ್ತನೆ ಸರಿಯಲ್ಲ. ಒಂದೂವರೆ ತಿಂಗಳಿನಿAದ ಸಾಮಾನ್ಯ ಸಭೆ ನಡೆಸಿಲ್ಲ. ನ್ಯಾಯ ಸಮಿತಿ ಸಭೆಯೂ ನಡೆದಿಲ್ಲ. ಸಾರ್ವಜನಿಕರ ಅರ್ಜಿ ಪರಿಶೀಲನೆ, ಇನ್ನುಳಿದ ಗ್ರಾಮಾಭಿವೃದ್ಧಿ ವಿಷಯ ಸಭೆಯಲ್ಲಿ ಚರ್ಚಿತವಾಗಿ ನಿರ್ಧರಿಸಲಾಗುತ್ತದೆ. ಆದರೆ, ತಾವೇ ಕರೆದ ಸಭೆಗೆ ತಾವೂ ಹಾಜರಾಗದೆ, ಉಳಿದ ೭ ಮಂದಿ ಸದಸ್ಯರೂ ಸಭೆಗೆ ಬರದೆ ನಿರ್ಲಕ್ಷ್ಯ ತೋರಿಸಿದ್ದಾರೆ. ಇದರಿಂದ ಪಂಚಾಯಿತಿಯ ಅಭಿವೃದ್ಧಿ ಕುಂಠಿತವಾಗುವುದು ಎಂದು ಹಾಜರಿದ್ದ ಪಂಚಾಯಿತಿ ಉಪಾಧ್ಯಕ್ಷೆ ಹಾಗೂ ನಾಲ್ವರು ಸದಸ್ಯರು ಆಕ್ರೋಶ ವ್ಯಕ್ತಪಡಿಸಿ, ಮಧ್ಯಾಹ್ನ ೧೨ ಗಂಟೆಯವರೆಗೆ ನಿರೀಕ್ಷಿಸಿ, ನಂತರ ಮನೆಗೆ ತೆರಳಿದರು.

- ನಯನತಾರ