ಸಿದ್ದಾಪುರ, ನ. ೨೮: ಈ ಹಿಂದೆ ಬಂಡೀಪುರಕ್ಕೆ ಬಿಟ್ಟ ಸಲಗ ಹಿಂತಿರುಗಿ ಬಂದ ಬೆನ್ನಲ್ಲೇ ಸುಂಟಿಕೊಪ್ಪದ ಕೆದಕಲ್ನ ಕಾಫಿ ತೋಟದಲ್ಲಿ ಸೆರೆ ಹಿಡಿದು ಸ್ಥಳಾಂತರ ಮಾಡಲಾಗಿದ್ದ ಪುಂಡಾನೆಯು ಇದೀಗ ಪಿರಿಯಾಪಟ್ಟಣ ತಾಲೂಕಿನ ದೊಡ್ಡ ಅವರೆ ಎಂಬಲ್ಲಿಗೆ ಹಿಂತಿರುಗಿ ಸುತ್ತಾಡುತ್ತಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಲಭಿಸಿದೆ.
ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಕೆದಕಲ್ ಸಮೀಪದ ಹೊರೂರು ಗ್ರಾಮದ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿದ್ದ ಒಂಟಿಸಲಗವನ್ನು ಸೆ.೪ ರಂದು ಸೆರೆಹಿಡಿಯಲಾಗಿತ್ತು. ಈ ಸಲಗವು ಕಾಡಾನೆಗಳ ಕಾರ್ಯಾಚರಣೆ ಮಾಡುತ್ತಿದ್ದ ವೇಳೆ ಆರ್.ಆರ್.ಟಿ ಸಿಬ್ಬಂದಿ ಗಿರೀಶ್ ಎಂಬವರ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿತ್ತು. ಇದಲ್ಲದೇ ಸುಂಟಿಕೊಪ್ಪ ಭಾಗದ ಹಲವಾರು ಮಂದಿ ದ್ವಿಚಕ್ರ ವಾಹನಗಳ ಸವಾರರ ಮೇಲೆ ದಾಳಿ ನಡೆಸಿ ಗಾಯಗೊಳಿಸಿತ್ತು. ಈ ಹಿನ್ನಲೆಯಲ್ಲಿ ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸಲಗವನ್ನು ಸೆರೆ ಹಿಡಿಯಲಾಗಿತ್ತು. ಸೆರೆ ಹಿಡಿದ ಸಲಗವನ್ನು ನಾಗರ ಹೊಳೆಯ ವೀರನ ಹೊಸಳ್ಳಿಗೆ ರವಾನಿಸಲಾಯಿತು. ಸಲಗಕ್ಕೆ ರೇಡಿಯೋ ಕಾಲರ್ ಅಳವಡಿಸಿ ಕೆಂಚ ಎಂದು ನಾಮಕರಣ ಮಾಡಲಾಗಿತ್ತು. ಆದರೆ ರೇಡಿಯೋ ಕಾಲರ್ ಅಳವಡಿಸಿರುವ ಕೆಂಚ ಇದೀಗ ಕಳೆದ ಕೆಲವು ದಿನಗಳಿಂದ ಪಿರಿಯಾಪಟ್ಟಣ ತಾಲೂಕಿನ ದೊಡ್ಡ ಅವರೆಯ ಭಾಗದಲ್ಲಿ ಸುತ್ತಾಡುತ್ತಿದೆ. ನಾಗರಹೊಳೆಯಿಂದ ಇತ್ತ ಲಗ್ಗೆ ಇಟ್ಟಿರುವ ಬಗ್ಗೆ ಅರಣ್ಯ ಇಲಾಖಾಧಿಕಾರಿಗಳಿಗೆ ಮಾಹಿತಿ ಬಂದಿದೆ. ಕಾಡಾನೆಗಳೊಂದಿಗೆ ಸುತ್ತಾಡುತ್ತಿರು ವುದು ರೇಡಿಯೋ ಕಾಲರ್ ಮುಖಾಂತರ ತಿಳಿದು ಬಂದಿದೆ. ಈಗಾಗಲೇ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಾ ಉಪಟಳ ನೀಡುತ್ತಿರುವ ಕೆಲವು ಕಾಡಾನೆಗಳನ್ನು ಸೆರೆ ಹಿಡಿಯಲು ಕಳೆದ ಕೆಲವು ತಿಂಗಳ ಹಿಂದೆ ವೀರಾಜಪೇಟೆ ತಾಲೂಕಿನ ಅರಣ್ಯ ಇಲಾಖಾಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿದ್ದಾರೆ. ಆದರೆ ಇನ್ನೂ ಅನುಮತಿ ದೊರಕಿಲ್ಲ. -ಎ.ಎನ್. ವಾಸು