ಮಡಿಕೇರಿ, ನ. ೨೮: ರೋಟರಿ ಮಿಸ್ಟಿಹಿಲ್ಸ್ ವತಿಯಿಂದ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ತೊಟ್ಟಿಲುಗಳು ಮತ್ತು ಹಾಸಿಗೆಗಳನ್ನು ಉದಾರವಾಗಿ ಒದಗಿಸಲಾಯಿತು.

ಮಿಸ್ಟಿಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಸಹರಾಜ್ಯಪಾಲ ತಿಲಕ್, ಕಾರ್ಯದರ್ಶಿ ರತ್ನಾಕರ ರೈ, ಇನ್ನರ್‌ವೀಲ್ ಮಾಜಿ ಅಧ್ಯಕ್ಷರುಗಳಾದ ಶಫಾಲಿ ರೈ, ಡಾ. ರೇಣುಕಾ ಹಾಗೂ ಇತರರು ಸಾಮಗ್ರಿಗಳನ್ನು ಕೇಂದ್ರ ಸಂಚಾಲಕಿ ಶಾರದಾ, ಸಿಬ್ಬಂದಿ ದರ್ಶನ್‌ಗೆ ಹಸ್ತಾಂತರಿಸಿದರು.

ಕೇAದ್ರದಲ್ಲಿ ವರ್ಷ ತುಂಬಿದ ಶಿಶುಗಳಿಂದ ಆರು ವರ್ಷದ ಮಗುವಿನವರೆಗೆ ತಿರಸ್ಕೃತ, ಅನಾಥ ಮಕ್ಕಳಿದ್ದು, ಮಕ್ಕಳ ಆರೈಕೆಯಲ್ಲಿ ಸಿಬ್ಬಂದಿಗಳು ತೊಡಗಿಸಿಕೊಳ್ಳುತ್ತಾರೆ. ಮಕ್ಕಳು ಆರು ವರ್ಷ ತುಂಬುವವರೆಗೆ ಜವಾಬ್ದಾರಿ ವಹಿಸುತ್ತಾರೆ. ಮಕ್ಕಳನ್ನು ಸರಕಾರದ ಮೂಲಕ, ಷರತ್ತುಗಳಿಗೆ ಒಳಪಟ್ಟು ದತ್ತು ನೀಡುವ ವ್ಯವಸ್ಥೆಯೂ ಇದ್ದು, ದತ್ತಿಗೆ ಒಳಪಡದಿದ್ದರೆ, ಅಂತಹ ಮಕ್ಕಳನ್ನು ಬಾಲಭವನ, ಬಾಲಕಿಯರ ಬಾಲಮಂದಿರಕ್ಕೆ ವರ್ಗಾಯಿಸಿ ನೋಡಿಕೊಳ್ಳಲಾಗುತ್ತದೆ.

ಹಸ್ತಾಂತರ ಸಂದರ್ಭ ಮಿಸ್ಟಿಹಿಲ್ಸ್ ಸ್ಥಾಪಕ ಅಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ, ಮಾನವ ಜನ್ಮಪಡೆಯಲು ಎಂಭತ್ತಾರು ಲಕ್ಷ ಜನ್ಮಗಳ ಬಳಿಕವಷ್ಟೇ ಸಾಧ್ಯ ಎಂಬ ಮಾತನ್ನು ಉಲ್ಲೇಖಿಸಿದರು. ಮಾನವ ಜನ್ಮ ದೊರೆತರೂ ಈ ರೀತಿ, ವಿಷಮ ಸನ್ನಿವೇಷಕ್ಕೆ ಒಳಗಾಗುವ ಮಕ್ಕಳ ಆರೈಕೆ ಮಾಡುವ ಸಿಬ್ಬಂದಿಗಳೂ ಮತ್ತು ಯೋಜನೆ ರೂಪಿಸುವ ಸರಕಾರದ ಹೆಜ್ಜೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಉಪರಾಜ್ಯಪಾಲ ದೇವಣೀರ ತಿಲಕ್ ಮಾತನಾಡಿ, ಇಂತಹ ಕೇಂದ್ರಗಳ ಅವಶ್ಯಕತೆಗೆ ರೋಟರಿ ಸದಾ ಸ್ಪಂದಿಸುತ್ತದೆ ಎಂದರಲ್ಲದೆ, ಇತರ ಸೇವಾ ಸಂಸ್ಥೆಗಳೂ ಅವಶ್ಯಕತೆ ಇರುವಲ್ಲಿ ಸಹಾಯ ಹಸ್ತ ಚಾಚಬೇಕೆಂದರು. ಅಧ್ಯಕ್ಷ ಪ್ರಮೋದ್ ಕುಮಾರ್ ಮಾತನಾಡಿ, ಬಾಲಕಿಯರ ಬಾಲಮಂದಿರದ ಮಕ್ಕಳಿಗೆ ಅವಶ್ಯವಿರುವ ಪಾದರಕ್ಷೆಗಳನ್ನು ಒದಗಿಸುವ ಭರವಸೆ ನೀಡಿದರು.

ಮಿಸ್ಟಿಹಿಲ್ಸ್ ನಿರ್ದೇಶಕರುಗಳಾದ ಬಿ.ಕೆ. ರವೀಂದ್ರ ರೈ, ಎ.ಕೆ. ವಿನೋದ್, ಸುಮಂತ್ ಪಾಲಾಕ್ಷ, ಇನ್ನರ್‌ವೀಲ್ ಸದಸ್ಯೆಯರಾದ ರಶ್ಮಿ ಪ್ರವೀಣ್, ರೂಪಾ ಸುಮಂತ್, ಪ್ರಿಯಾ ಪ್ರಶಾಂತ್ ಹಾಜರಿದ್ದರು.